ಕಾಂಗ್ರೆಸ್ ಪರ ನಟ ದರ್ಶನ್ ಪ್ರಚಾರ: ಸಂಸದೆ ಸುಮಲತಾ ಹೇಳಿದ್ದೇನು?

Public TV
2 Min Read

ಮಂಡ್ಯ (Mandya) ಲೋಕಸಭಾ ಕ್ಷೇತ್ರದ ಕಾಂಗ್ರೆಸ್ (Congress) ಅಭ್ಯರ್ಥಿ ಸ್ಟಾರ್ ಚಂದ್ರು ಪರವಾಗಿ ನಟ ದರ್ಶನ್ ‍(Darshan) ಪ್ರಚಾರಕ್ಕೆ ಆಗಮಿಸಿದ್ದರು. ಈವೆಗೂ ನಟಿ, ಸಂಸದೆ ಸುಮಲತಾ ಅಂಬರೀಶ್ ಅವರನ್ನು ಬೆಂಬಲಿಸುತ್ತಾ ಬಂದಿದ್ದು ದರ್ಶನ್, ಈಗ ಸುಮಲತಾ ಬಿಜೆಪಿ ಪಕ್ಷವನ್ನು ಸೇರಿಕೊಂಡಿದ್ದರೂ, ಅಮ್ಮನ ಪಕ್ಷ ಬಿಟ್ಟು ಕಾಂಗ್ರೆಸ್ ಪಕ್ಷಕ್ಕೆ ದರ್ಶನ್ ಪ್ರಚಾರ ಮಾಡಿದ್ದು ಭಾರೀ ಚರ್ಚೆಗೆ ಕಾರಣವಾಗಿತ್ತು. ಸುಮಲತಾ (Sumalatha Ambarish) ಅವರೇ ದರ್ಶನ್ ಅವರನ್ನು ಕಾಂಗ್ರೆಸ್ ಪಕ್ಷದ ಪರವಾಗಿ ಕಳುಹಿಸಿದ್ದಾರೆ ಎನ್ನುವ ಮಾತು ಕೇಳಿ ಬಂದಿತ್ತು. ಈ ಕುರಿತಂತೆ ಉಡುಪಿಯಲ್ಲಿ ಸುಮಲತಾ ಪ್ರತಿಕ್ರಿಯೆ ಕೊಟ್ಟಿದ್ದಾರೆ.

ಉಡುಪಿಯಲ್ಲಿ ನಡೆದ ಮಹಿಳಾ ಸಮಾವೇಶದಲ್ಲಿ ಭಾಗಿಯಾದ ಸುಮಲತಾ, ಕಾಂಗ್ರೆಸ್ ಅಭ್ಯರ್ಥಿ ಪರ ದರ್ಶನ್ ಪ್ರಚಾರದ ವಿಚಾರವಾಗಿ ಮಾತನಾಡಿದ್ದು, ಸುಮಲತಾ ಅವರೇ  ದರ್ಶನ್ ಅವರನ್ನ ಪ್ರಚಾರಕ್ಕೆ ಕಳಿಸಿದ್ದಾರೆ ಎಂಬ ಊಹಾಪೋಹದ ಈ ವಾದದಲ್ಲಿ ಸೆನ್ಸ್ ಲಾಜಿಕ್ ಎರಡು ಇಲ್ಲ. ದರ್ಶನ್ ರನ್ನ ಬೇರೆ ಪಕ್ಷದ ಪ್ರಚಾರಕ್ಕೆ ಹೋಗು ಅಥವಾ ಹೋಗಬೇಡ ಎಂದು ಹೇಳಲ್ಲ. ನಾನು ನಿಂತಿದ್ದರೆ ದರ್ಶನ್ ನನ್ನ ಪರ ಪ್ರಚಾರ ಮಾಡುತ್ತಿದ್ದರು. ರಾಜಕೀಯವಾಗಿ ಬೇರೆಯವರ ಬಗ್ಗೆ ನಾವು ಪ್ರತಿದಿನ ಚರ್ಚೆ ಮಾಡಲ್ಲ. ಪ್ರತಿದಿನ ಫೋನು ಮಾಡಿ ಎಲ್ಲಿಗೆ ಹೋಗ್ತಿದ್ದೀಯ ಯಾರ ಪರ ಪ್ರಚಾರ ಮಾಡ್ತಿದ್ದೀಯಾ ಅಂತ ಕೇಳಲ್ಲ. ಪ್ರಚಾರ ಯಾರಿಗೆ ಮಾಡಬೇಕು ಅನ್ನೋದು ಅವರ ಇಚ್ಛೆ ಎಂದೆಲ್ಲ ಮಾತನಾಡಿದ್ದಾರೆ.

sumalatha ambarish

ಮುಂದುವರೆದು ಮಾತನಾಡಿದ ಸುಮಲತಾ, ಹೋಗು ಹೋಗಬೇಡ ಅನ್ನಲು ನಾನು ಯಾರು? ಅಸೆಂಬ್ಲಿ ಚುನಾವಣೆಯಲ್ಲಿ ಮಂಡ್ಯದಲ್ಲಿ ದರ್ಶನ್ ಮದ್ದೂರಿನಲ್ಲಿ ಕಾಂಗ್ರೆಸ್ ಪರ ಪ್ರಚಾರ ಮಾಡಿದರು. ಶ್ರೀರಂಗಪಟ್ಟಣದಲ್ಲಿ ಬಿಜೆಪಿ ಪರ ಪ್ರಚಾರ ಮಾಡಿದರು. ಪಾಂಡವಪುರದಲ್ಲಿ ದರ್ಶನ್ ಪುಟ್ಟಣ್ಣಯ್ಯ ಪರ ಪ್ರಚಾರ ಮಾಡಿದರು. ಪಕ್ಷ ಮುಖ್ಯ ಅಲ್ಲ ನಿಂತಿರುವ ವ್ಯಕ್ತಿ ಮುಖ್ಯ ಎಂದು ದರ್ಶನ್ ಹೇಳುತ್ತಾ ಬಂದಿದ್ದಾರೆ. ವ್ಯಕ್ತಿ ನನಗೆ ಇಷ್ಟವಾದರೆ ಹೋಗ್ತೀನಿ ಅಂತ ಹೇಳಿದ್ದಾರೆ. ಆ ರೀತಿ ದರ್ಶನ್ ನನ್ನ ಕಳಿಸುವುದಾದರೆ ನಾನ್ಯಾಕೆ ಬಿಜೆಪಿ ಸೇರಬೇಕು. ನಾನು ಪಕ್ಷೇತರ ನೇರವಾಗಿ ಸಪೋರ್ಟ್ ಮಾಡಬಹುದಲ್ವಾ?. ನನಗೆ ಯಾರೂ ಏನನ್ನೂ ಫೋರ್ಸ್ ಮಾಡೋಕೆ ಆಗಲ್ಲ. ಈ ಪಕ್ಷಕ್ಕೆ ಸೇರು ಆ ಪಕ್ಷ ಬೇಡ ಅಂತ ಒತ್ತಡ ಮಾಡೋಕೆ ಆಗ್ತಿರ್ಲಿಲ್ಲ. ನಾನು ನನ್ನ ಇಚ್ಛೆಯಿಂದ ಬಿಜೆಪಿಗೆ ಬಂದಿದ್ದೇನೆ. ಬೇರೆ ಪಕ್ಷಕ್ಕೆ ಸಪೋರ್ಟ್ ಮಾಡು ಅಂತ ಹೇಳುವ ಪ್ರಶ್ನೆ ಬರಲ್ಲ ಎಂದಿದ್ದಾರೆ.

 

ಕುಮಾರಸ್ವಾಮಿ ಪರ ಪ್ರಚಾರದಲ್ಲಿ ಭಾಗವಹಿಸದೆ ಇರುವ ವಿಚಾರ ಕುರಿತು ಮಾತನಾಡಿದ ಅವರು, ನಾನು ಯಾವ ರೀತಿ ಪ್ರಚಾರ ಮಾಡಬೇಕು ಎಂದು ಪಕ್ಷ ಡಿಸೈಡ್ ಮಾಡುತ್ತದೆ.  ನಾನು ನಾನಾಗಿಯೇ ಎಲ್ಲಿಗೂ ಹೋಗಿಲ್ಲ. ಪಕ್ಷ ಹೇಳಿದರೆ ಕುಮಾರಸ್ವಾಮಿ ಪರವಾಗಿ ಖಂಡಿತ ಪ್ರಚಾರ ಮಾಡುತ್ತೇನೆ ಎಂದಿದ್ದಾರೆ ಸುಮಲತಾ.

Share This Article