ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ (Renukaswamy) ಹತ್ಯೆ ಪ್ರಕರಣದ ಆರೋಪಿ ನಟ ದರ್ಶನ್ (Actor Darshan) ಜಾಮೀನು ರದ್ದಾಗಿದ್ದು, ಇಂದೇ ಪೊಲೀಸರಿಗೆ ಅವರು ಶರಣಾಗಬೇಕಿದೆ. ಅವರಿಗಾಗಿ ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ.
ಬೆಂಗಳೂರು (Bengaluru) ಹಾಗೂ ಮೈಸೂರಿನಲ್ಲಿ (Mysuru) ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ. ಬೆಂಗಳೂರಿನ ಆರ್‌ಆರ್ ನಗರದಲ್ಲಿ ದರ್ಶನ್ ಇಲ್ಲ ಎನ್ನಲಾಗುತ್ತಿದೆ. ಇನ್ನೂ ಮೈಸೂರಿನ ಫಾರ್ಮ್ ಹೌಸ್ ಬಳಿಯೂ ಪೊಲೀಸರು ತೆರಳಿದ್ದು, ಹುಡುಕಾಟ ನಡೆಸುತ್ತಿದ್ದಾರೆ. ಇದೆಲ್ಲದರ ನಡುವೆ ದರ್ಶನ್ ಕರ್ನಾಟಕದಲ್ಲಿಲ್ಲ, ರಾಜ್ಯ ತೊರೆದಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ. ಇದನ್ನೂ ಓದಿ: ದರ್ಶನ್ ಜಾಮೀನು ರದ್ದು; ತಪ್ಪು ಮಾಡಿದವರಿಗೆ ಶಿಕ್ಷೆ ಆಗಲಿ: ರೇಣುಕಾಸ್ವಾಮಿ ಪತ್ನಿ
ನಟ ದರ್ಶನ್ ಸೇರಿದಂತೆ 7 ಆರೋಪಿಗಳ ಜಾಮೀನು ರದ್ದುಗೊಳಿಸುವಂತೆ ಕರ್ನಾಟಕ ಸರ್ಕಾರ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಗುರುವಾರ ಮಹತ್ವದ ತೀರ್ಪು ನೀಡಿದೆ. ದರ್ಶನ್ ಸೇರಿದಂತೆ ಎಲ್ಲಾ ಆರೋಪಿಗಳ ಜಾಮೀನನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿದೆ.
ಕೂಡಲೇ ಎಲ್ಲರೂ ಸರೆಂಡರ್ ಆಗಬೇಕು. ಆರೋಪಿ ಎಷ್ಟೇ ದೊಡ್ಡವನಾಗಿದ್ದರೂ, ಅವನು ಅಥವಾ ಅವಳು ಕಾನೂನಿಗಿಂತ ಮೇಲಲ್ಲ ಎಂಬ ಸಂದೇಶವನ್ನು ಇದು ನೀಡುತ್ತದೆ. ಯಾವುದೇ ಮಟ್ಟದಲ್ಲಿ ನ್ಯಾಯ ವಿತರಣಾ ವ್ಯವಸ್ಥೆಯು ಯಾವುದೇ ಬೆಲೆ ತೆತ್ತಾದರೂ ಕಾನೂನಿನ ನಿಯಮವನ್ನು ಕಾಪಾಡಿಕೊಳ್ಳಬೇಕು ಎಂಬ ಬಲವಾದ ಸಂದೇಶವನ್ನು ಇದು ಒಳಗೊಂಡಿದೆ. ಯಾವುದೇ ವ್ಯಕ್ತಿ ಕಾನೂನಿಗಿಂತ ಮೇಲಲ್ಲ ಅಥವಾ ಅದಕ್ಕಿಂತ ಕೆಳಗಿಲ್ಲ. ನಾವು ಅದನ್ನು ಪಾಲಿಸುವಾಗ ಯಾರ ಅನುಮತಿಯನ್ನೂ ಕೇಳುವುದಿಲ್ಲ. ಎಲ್ಲಾ ಸಮಯದಲ್ಲೂ ಕಾನೂನಿನ ನಿಯಮವನ್ನು ಕಾಪಾಡಿಕೊಳ್ಳುವುದು ಇಂದಿನ ಅಗತ್ಯವಾಗಿದೆ ಎಂದು ನ್ಯಾಯಮೂರ್ತಿ ಜೆ.ಬಿ.ಪರ್ದಿವಾಲಾ ಆದೇಶದಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: ನ್ಯಾಯಾಂಗ, ಸರ್ಕಾರದ ಬಗ್ಗೆ ವಿಶ್ವಾಸ ಮೂಡಿದೆ: ಸುಪ್ರೀಂ ತೀರ್ಪಿಗೆ ರೇಣುಕಾಸ್ವಾಮಿ ತಂದೆ ಸಂತಸ