ನಟ ದರ್ಶನ್‌ ಜಾಮೀನು ರದ್ದು – ಸುಪ್ರೀಂ ಕೋರ್ಟ್‌ ತೀರ್ಪಿನಲ್ಲೇನಿದೆ?

Public TV
2 Min Read

– ಆರೋಪಿ ಎಷ್ಟೇ ದೊಡ್ಡವರಿದ್ದರೂ, ಕಾನೂನಿಗಿಂತ ಯಾರೂ ಮೇಲಲ್ಲ ಎಂದ ಕೋರ್ಟ್‌

ನವದೆಹಲಿ: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ (Darshan) ಸೇರಿ 7 ಆರೋಪಿಗಳಿಗೆ ನೀಡಲಾಗಿದ್ದ ಜಾಮೀನನ್ನು ಸುಪ್ರೀಂ ಕೋರ್ಟ್ (Supreme Court) ರದ್ದುಗೊಳಿಸಿದೆ. ಕೋರ್ಟ್‌ ತೀರ್ಪಿನಲ್ಲಿ ಏನೇನಿದೆ ಎಂಬ ವಿವರ ಇಲ್ಲಿದೆ.

ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ಜೆಬಿ ಪಾರ್ದಿವಾಲಾ ಮತ್ತು ಆರ್.ಮಹಾದೇವನ್ ಅವರ ಪೀಠವು ಕರ್ನಾಟಕ ಹೈಕೋರ್ಟ್ ಆದೇಶವನ್ನು ರದ್ದುಗೊಳಿಸಿ, ಅದು ವಿವಿಧ ದೋಷಗಳಿಂದ ಕೂಡಿದೆ ಎಂದು ಹೇಳಿದೆ. ನಾವು ಎಲ್ಲವನ್ನೂ ಪರಿಗಣಿಸಿದ್ದೇವೆ. ಜಾಮೀನು ಮಂಜೂರು ಮತ್ತು ರದ್ದತಿ ಎರಡೂ ವಿಷಯದಲ್ಲಿ ಹೈಕೋರ್ಟ್ ಆದೇಶವು ಗಂಭೀರ ಲೋಪಗಳಿಂದ ಕೂಡಿದೆ ಎಂಬುದು ಸ್ಪಷ್ಟವಾಗಿದೆ. ಹೈಕೋರ್ಟ್ ಯಾಂತ್ರಿಕವಾಗಿ ತೀರ್ಪು ನೀಡಿದಂತಿದೆ. ಮೇಲಾಗಿ, ಹೈಕೋರ್ಟ್ ವಿಚಾರಣೆಯ ಪೂರ್ವ ಹಂತದಲ್ಲಿ ತೀರ್ಪು ನೀಡಲಾಗಿದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಇದನ್ನೂ ಓದಿ: ಜಾಮೀನು ರದ್ದು ಬೆನ್ನಲ್ಲೇ ದರ್ಶನ್‌ ಆಪ್ತ ಪ್ರದೂಷ್ ಅರೆಸ್ಟ್‌

ಆರೋಪಿ ಎಷ್ಟೇ ದೊಡ್ಡವರಿದ್ದರೂ ಅವರು ಕಾನೂನಿಗಿಂತ ದೊಡ್ಡವರಲ್ಲ. ಕಾನೂನು ಆಡಳಿತ ಎತ್ತಿ ಹಿಡಿಯಲಾಗಿದೆ. ಕಾನೂನಿನ ಮುಂದೆ ಯಾರೂ ದೊಡ್ಡವರಲ್ಲ, ಯಾರೂ ಚಿಕ್ಕವರಲ್ಲ. ಆರೋಪಿಗಳಿಗೆ 5 ಸ್ಟಾರ್ ಆತಿಥ್ಯ ನೀಡಲಾಗಿದೆ. ಜೈಲು ಸೂಪರಿಂಟೆಂಡೆಂಟ್‌ನನ್ನು ಸಸ್ಪೆಂಡ್ ಮಾಡಬೇಕಿತ್ತು. ಈ ತೀರ್ಪು ಲ್ಯಾಂಡ್‌ಮಾರ್ಕ್ ತೀರ್ಪೆಂದು ಸುಪ್ರೀಂ ಕೋರ್ಟ್ ಹೇಳಿದೆ. ತಕ್ಷಣವೇ ದರ್ಶನ್ ಹಾಗೂ ಇತರ ಆರೋಪಿಗಳನ್ನು ಜೈಲಿಗೆ ಕಳುಹಿಸಬೇಕೆಂದು ಎಂದು ಸುಪ್ರೀಂ ಹೇಳಿದೆ.

ಸುಪ್ರೀಂ ಕೋರ್ಟ್ ಆದೇಶದಲ್ಲಿ ಏನಿದೆ?
* ಆರೋಪಿ ಎಷ್ಟೇ ದೊಡ್ಡವನಾಗಿದ್ದರೂ (ಅವನು ಅಥವಾ ಅವಳು) ಕಾನೂನಿಗಿಂತ ಮೇಲಲ್ಲ ಎಂಬ ಸಂದೇಶವನ್ನು ನಾವು ಕೊಡುವ ಆದೇಶ ನೀಡುತ್ತದೆ.
* ನ್ಯಾಯ ವಿತರಣಾ ವ್ಯವಸ್ಥೆಯು ಯಾವುದೇ ಬೆಲೆ ತೆತ್ತಾದರೂ ಕಾನೂನಿನ ನಿಯಮವನ್ನು ಕಾಪಾಡಿಕೊಳ್ಳಬೇಕು ಎಂಬ ಬಲವಾದ ಸಂದೇಶವನ್ನು ಈ ಆದೇಶ ಒಳಗೊಂಡಿದೆ.
* ಯಾವುದೇ ವ್ಯಕ್ತಿ ಕಾನೂನಿಗಿಂತ ಮೇಲಲ್ಲ ಅಥವಾ ಅದಕ್ಕಿಂತ ಕೆಳಗಿಲ್ಲ, ನಾವು ಅದನ್ನು ಪಾಲಿಸುವಾಗ ಯಾರ ಅನುಮತಿಯನ್ನೂ ಕೇಳುವುದಿಲ್ಲ.
* ಎಲ್ಲಾ ಸಮಯದಲ್ಲೂ ಕಾನೂನಿನ ನಿಯಮವನ್ನು ಕಾಪಾಡಿಕೊಳ್ಳುವುದು ಇಂದಿನ ಅಗತ್ಯವಾಗಿದೆ.
* ಜಾಮೀನು ಮಂಜೂರು ಮತ್ತು ರದ್ದತಿ ಎರಡನ್ನೂ ನಾವು ಪರಿಗಣಿಸಿದ್ದೇವೆ.
* ಜಾಮೀನು ಮಂಜೂರು ಮಾಡುವುದು ಮುಂದಿನ ವಿಚಾರಣೆಯ ಮೇಲೆ ಪರಿಣಾಮ ಬೀರುತ್ತದೆ. ಸಾಕ್ಷಿಗಳ ಮೇಲೆ ಪ್ರಭಾವ ಬೀರಬಹುದು.
* ಹೈಕೋರ್ಟ್ ಆದೇಶ ಗಂಭೀರ ಲೋಪಗಳಿಂದ ಕೂಡಿದೆ. ಮೇಲಾಗಿ, ಹೈಕೋರ್ಟ್ ವಿಚಾರಣೆಯ ಪೂರ್ವ ಹಂತದಲ್ಲಿ ಪರೀಕ್ಷೆಯನ್ನು ಕೈಗೊಂಡಿದೆ.
* ವಿಚಾರಣಾ ನ್ಯಾಯಾಲಯ ಮಾತ್ರ ಜಾಮೀನು ನೀಡಲು ಸೂಕ್ತ ವೇದಿಕೆಯಾಗಿದೆ‌. ಇದು ಸುಸ್ಥಾಪಿತ ಆರೋಪಗಳು, ಪೂರ್ವಭಾವಿ ಸಾಕ್ಷ್ಯಗಳೊಂದಿಗೆ ಸೇರಿಕೊಂಡು ಜಾಮೀನು ರದ್ದತಿಯನ್ನು ಬಲಪಡಿಸುತ್ತವೆ.
* ನಾವು ಅಸಾಧಾರಣ ನ್ಯಾಯವ್ಯಾಪ್ತಿಯನ್ನು ಚಲಾಯಿಸಲು ತೃಪ್ತರಾಗಿದ್ದೇವೆ. ಹಿಗಾಗಿ, ಜಾಮೀನು ರದ್ದು ಮಾಡುತ್ತಿದ್ದೇವೆ. ಕೂಡಲೇ ಆರೋಪಿಗಳು ಶರಣಾಗಬೇಕು ಎಂದು ನ್ಯಾ. ಮಹಾದೇವನ್ ಹೇಳಿದರು.
* ಇದಕ್ಕೆ ಹೆಚ್ಚುವರಿ ಆದೇಶ ಸೇರ್ಪಡೆ ಮಾಡಿದ ನ್ಯಾ.ಜೆ.ಬಿ ಪಾರ್ದಿವಾಲಾ, ಆರೋಪಿಗಳಿಗೆ ಜೈಲಿನಲ್ಲಿ 5-ಸ್ಟಾರ್ ಆತಿಥ್ಯ ನೀಡಲಾಗುತ್ತಿದೆ ಎಂದು ತಿಳಿದ ದಿನ, ಮೊದಲ ಹೆಜ್ಜೆ ಸೂಪರಿಂಟೆಂಡೆಂಟ್ ಮತ್ತು ಇತರ ಎಲ್ಲ ಅಧಿಕಾರಿಗಳನ್ನು ಅಮಾನತುಗೊಳಿಸಬೇಕಿತ್ತು.
* ಮುಂದೆ ಯಾರಿಗಾದರೂ ವಿಐಪಿ ಆತಿಥ್ಯ ನೀಡುತ್ತಿರುವ ಛಾಯಾಚಿತ್ರಗಳು ಅಥವಾ ಯಾವುದೇ ವೀಡಿಯೊವನ್ನು ನಾವು ನೋಡಿದರೆ ಮೊದಲು ರಾಜ್ಯ ಸರ್ಕಾರಕ್ಕೆ ಸಮನ್ಸ್ ನೀಡುತ್ತೇವೆ.
* ಈ ತೀರ್ಪಿನ ಪ್ರತಿಯನ್ನು ಎಲ್ಲಾ ಹೈಕೋರ್ಟ್‌ಗಳು ಮತ್ತು ರಾಜ್ಯ ಸರ್ಕಾರಗಳಿಗೆ ನೀಡುವಂತೆ ರಿಜಿಸ್ಟ್ರಿಗೆ ನಿರ್ದೇಶಿಸಲಾಗಿದ್ದು, ಇಂತಹ ಪ್ರಕರಣ ಎಲ್ಲೂ ಮರುಕಳಿಸಬಾರದು.

Share This Article