ಹುಚ್ಚ ವೆಂಕಟ್ ಎಲ್ಲಿ ಕಂಡ್ರೂ ಹೊಡಿಬೇಡಿ, ಅವರು ಕೆಟ್ಟವರಲ್ಲ: ಭುವನ್ ಮನವಿ

Public TV
2 Min Read

ಬೆಂಗಳೂರು: ಸ್ಯಾಂಡಲ್‍ವುಡ್ ನಟ ಭುವನ್ ಪೊನ್ನಣ್ಣ ಅವರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹುಚ್ಚ ವೆಂಕಟ್ ಅವರ ವಿಡಿಯೋ ಹಾಕಿಕೊಂಡು ಜನರಲ್ಲಿ ಮನವಿ ಮಾಡಿಕೊಂಡಿದ್ದಾರೆ.

ಭುವನ್ ಸಾಮಾಜಿಕ ಜಾಲತಾಣದಲ್ಲಿ, “ಗೆಳೆಯರೆ ದಯವಿಟ್ಟು ಹುಚ್ಚ ವೆಂಕಟ್ ಅನ್ನು ಎಲ್ಲಿ ಕಂಡರೂ ಹೊಡಿಬೇಡಿ. ಅವರಿಗೆ ಚಿಕಿತ್ಸೆಯ ಅವಶ್ಯಕತೆ ಇದೆ. ಅವರು ಕೆಟ್ಟವರಲ್ಲ. ಮಾನಸಿಕ ತೊಂದರೆಯಲ್ಲಿರುವವರು. ನನ್ನ ಕಳಕಳಿಯ ವಿನಂತಿ” ಎಂದು ಮನವಿ ಮಾಡಿಕೊಂಡಿದ್ದಾರೆ.

ಹುಚ್ಚ ವೆಂಕಟ್ ಗುರುವಾರ ಸಂಜೆ ಮಡಿಕೇರಿ ನಗರದ ಡಿಪೋ ಬಳಿ ಕಾಣಿಸಿಕೊಂಡು, ರಸ್ತೆ ಬದಿಯಲ್ಲಿ ನಿಂತುಕೊಂಡಿದ್ದರು. ಈ ವೇಳೆ ನಾಪೋಕ್ಲುವಿನ ದಿಲೀಪ್ ಎಂಬವರು ತಮ್ಮ ಕಾರನ್ನು ಡಿಪೋ ಬಳಿ ನಿಲ್ಲಿಸಿ ಸಮೀಪದ ಎಟಿಎಂಗೆ ಹೋಗಿದ್ದರು. ಎಟಿಎಂನಿಂದ ಹಿಂತಿರುಗುತ್ತಿದ್ದ ದಿಲೀಪ್ ಸಾಮಾನ್ಯವಾಗಿಯೇ ಹುಚ್ಚ ವೆಂಕಟ್ ಅವರನ್ನು ನೋಡಿದ್ದಾರೆ. ಇಷ್ಟಕ್ಕೆ ಕೆರಳಿದ ಹುಚ್ಚ ವೆಂಕಟ್ `ನನ್ನ ಯಾಕೆ ಗುರಾಯಿಸುತ್ತಿದ್ದೀಯಾ’ ಎಂದು ತಕರಾರು ಎತ್ತಿ ಹಲ್ಲೆ ಮಾಡಿದ್ದಾರೆ.

ಬುಧವಾರ ಹುಚ್ಚ ವೆಂಕಟ್ ಮಂಡ್ಯ ಜಿಲ್ಲೆಯ ಪಾಂಡವಪುರದ ಮಂಡ್ಯ ಸರ್ಕಲ್‍ನಲ್ಲಿ ಸಹಜ ಸ್ಥಿತಿಯಲ್ಲೇ ಕಾಣಿಸಿಕೊಂಡಿದ್ದರು. ನೀಲಿ ಶರ್ಟ್, ಕಪ್ಪು ನೀಲಿ ಬಣ್ಣ ಪ್ಯಾಂಟ್ ಹಾಗೂ ಶೂ ಹಾಕಿಕೊಂಡು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದರು. ಇದನ್ನು ನೋಡಿದ ಕೆಲ ಯುವಕರು ತಮ್ಮ ಮೊಬೈಲ್‍ನಲ್ಲಿ ಹುಚ್ಚ ವೆಂಕಟ್ ಫೋಟೋ ಹಾಗೂ ವಿಡಿಯೋ ಸೆರೆ ಹಿಡಿದಿದ್ದರು. ಆದರೆ ಗುರುವಾರ ಹುಚ್ಚ ವೆಂಕಟ್ ಮಡಿಕೇರಿಯಲ್ಲಿ ತಮ್ಮ ಹುಚ್ಚಾಟದಿಂದ ಜನರ ಕೋಪಕ್ಕೆ ಗುರಿಯಾಗಿದ್ದರು.

ಈ ಹಿಂದೆ ಹುಚ್ಚ ವೆಂಕಟ್ ಚೆನ್ನೈನ ಬೀದಿಯಲ್ಲಿ ತಿರುಗಾಡುತ್ತಿರುವ ವಿಡಿಯೋವನ್ನು ಭುವನ್ ತಮ್ಮ ಫೇಸ್‍ಬುಕ್‍ನಲ್ಲಿ ಅಪ್ಲೋಡ್ ಮಾಡಿಕೊಂಡಿದ್ದರು. ಅಲ್ಲದೆ ವೆಂಕಟ್‍ನನ್ನು ಬೆಂಗಳೂರಿಗೆ ಕರೆ ತರಲು ಪ್ರಯತ್ನಿಸಿ ಎಂದು ಮನವಿ ಮಾಡಿಕೊಂಡಿದ್ದರು. ವಿಡಿಯೋ ನೋಡಿದ್ದ ಭುವನ್ ಸ್ನೇಹಿತರೊಬ್ಬರು ಹುಚ್ಚ ವೆಂಕಟ್‍ನನ್ನು ಬೆಂಗಳೂರಿಗೆ ಕರೆತರಲು ಪ್ರಯತ್ನಿಸಿದ್ದರು. ಬಳಿಕ ಚೆನ್ನೈನ ಬೀದಿಯಲ್ಲಿ ಚಪ್ಪಲಿ ಧರಿಸದೇ, ಕೊಳಕು ಬಟ್ಟೆ ಹಾಕಿಕೊಂಡು ತಿರುಗಾಡುತ್ತಿದ್ದ ಹುಚ್ಚ ವೆಂಕಟ್‍ನನ್ನ ಭುವನ್ ಸ್ನೇಹಿತ ಪತ್ತೆ ಹೆಚ್ಚಿದ್ದಾರೆ. ಹುಚ್ಚ ವೆಂಕಟ್ ನನ್ನು ಕೂರಿಸಿಕೊಂಡು ಬೆಂಗಳೂರಿಗೆ ಹೋಗುವ ಬಗ್ಗೆ ಮಾತನಾಡಿದ್ದರು. ಆದರೆ ಸಹಾಯ ಮಾಡಲು ಹೋದ ಭುವನ್ ಸ್ನೇಹಿತನಿಗೆ ಹುಚ್ಚ ವೆಂಕಟ್ ಕೌಂಟರ್ ನೀಡಿದ್ದರು.

Share This Article
Leave a Comment

Leave a Reply

Your email address will not be published. Required fields are marked *