ಕಲರ್ಸ್ ಕನ್ನಡ ವಾಹಿನಿಯಲ್ಲಿ ಮೂಡಿ ಬರಲಿರುವ ಬಿಗ್ ಬಾಸ್ ಸೀಸನ್ 9 (Bigg Boss Season 9) ಶುರುವಾಗಲೇ ಇನ್ನೊಂದೇ ಗಂಟೆ ಬಾಕಿ ಇದೆ. ಅದಕ್ಕೂ ಮುನ್ನ ವಾಹಿನಿಯು ಪ್ರೋಮೋ ಒಂದನ್ನು ರಿಲೀಸ್ ಮಾಡಿದ್ದು, ದೊಡ್ಮನೆಗೆ ಮೊದಲು ಸ್ಪರ್ಧಿಯಾಗಿ ನಟ, ಕಲಾ ನಿರ್ದೇಶಕ ಅರುಣ್ ಸಾಗರ್ (Arun Sagar) ಕಾಲಿಟ್ಟಿದ್ದಾರೆ. ಅಲ್ಲದೇ, ಸುದೀಪ್ ಅವರ ಜೊತೆ ಹ್ಯೂಮರೆಸ್ ಆಗಿ ಮಾತನಾಡಿ ಮನರಂಜನೆ ನೀಡಿದ್ದಾರೆ. ಸುದೀಪ್ ಮತ್ತು ಅರುಣ್ ಸಾಗರ್ ಆಪ್ತರು ಆಗಿರುವ ಕಾರಣದಿಂದಾಗಿ ಮಾತುಗಳು ಕೂಡ ಅದೇ ಶೈಲಿಯಲ್ಲೇ ಮೂಡಿ ಬಂದಿವೆ.
ನಟ, ಕಲಾ ನಿರ್ದೇಶಕ, ರಂಗಭೂಮಿ ಪ್ರತಿಭೆ ಅರುಣ್ ಸಾಗರ್ ಕೂಡ ಈಗಾಗಲೇ ಬಿಗ್ ಬಾಸ್ ಮನೆ ಸೇರಿದ್ದಾರೆ. ಬಿಗ್ ಬಾಸ್ ಸೀಸನ್ 1ರಲ್ಲೂ ಅರುಣ್ ಸಾಗರ್ ದೊಡ್ಮನೆ ಪ್ರವೇಶ ಮಾಡಿದವರು. ಎರಡನೇ ಸ್ಥಾನವನ್ನೂ ಪಡೆದವರು. ಈ ಬಾರಿಯೂ ಅವರಿಗೆ ಮತ್ತೊಮ್ಮೆ ಅವಕಾಶ ಸಿಕ್ಕಿದೆ. ನಟನಾಗಿ, ಕಲಾ ನಿರ್ದೇಶಕನಾಗಿ ಗುರುತಿಸಿಕೊಂಡಿರುವ ಅರುಣ್, ತಮ್ಮ ಮಾತುಗಳ ಮೂಲಕವೇ ಮೋಡಿ ಮಾಡಿದವರು. ಕಿಚ್ಚ ಸುದೀಪ್ (Sudeep) ಅವರಿಗೆ ತೀರಾ ಆಪ್ತರು ಕೂಡ. ಸೀಸನ್ 1ರಲ್ಲಿ ಬಿಗ್ ಬಾಸ್ ಪಟ್ಟ ಇವರಿಗೆ ಒಲಿಯುತ್ತದೆ ಎಂದು ಹೇಳಲಾಗಿತ್ತು. ಆದರೆ, ಅದು ಫಲ ಕೊಡಲಿಲ್ಲ. ಈ ಬಾರಿಯಾದರೂ ಗೆದ್ದು ಬರುತ್ತಾರಾ ಕಾದು ನೋಡಬೇಕು.