ಪುಷ್ಪಾ-2 ಕಾಲ್ತುಳಿತ ಕೇಸ್ – ನಟ ಅಲ್ಲು ಅರ್ಜುನ್‌ ಸೇರಿ 23 ಮಂದಿ ವಿರುದ್ಧ ಚಾರ್ಜ್‌ ಶೀಟ್‌ ಸಲ್ಲಿಕೆ

2 Min Read

– 8 ಬೌನ್ಸರ್‌ಗಳ ಹೆಸರೂ ಉಲ್ಲೇಖ

ಹೈದರಾಬಾದ್‌: ʻಪುಷ್ಪ 2′ ಸಿನಿಮಾ ಪ್ರೀಮಿಯರ್ ಶೋ ವೇಳೆ ಸಂಧ್ಯಾ ಚಿತ್ರಮಂದಿರದಲ್ಲಿ ಸಂಭವಿಸಿದ ಕಾಲ್ತುಳಿತ (Pushpa 2 Stampede) ಪ್ರಕರಣಕ್ಕೆ ಸಂಬಂಧಿಸಿದಂತೆ, ಹೈದರಾಬಾದ್ ಪೊಲೀಸರು ಇಂದು ನಾಂಪಲ್ಲಿ ಕೋರ್ಟ್‌ಗೆ ಚಾರ್ಜ್‌ಶೀಟ್‌ ಸಲ್ಲಿಕೆ ಮಾಡಿದ್ದಾರೆ. ದೋಷಾರೋಪ ಪಟ್ಟಿಯಲ್ಲಿ ನಟ ಅಲ್ಲು ಅರ್ಜುನ್‌ (Allu Arjun) ಸೇರಿ 23 ಜನರ ಹೆಸರು ಉಲ್ಲೇಖಿಸಿದ್ದಾರೆ.

2024ರ ಡಿಸೆಂಬರ್ 4 ರಂದು ಹೈದರಾಬಾದ್‌ನ ಸಂಧ್ಯಾ ಚಿತ್ರಮಂದಿರದಲ್ಲಿ (Sandhya Theatre) ‘ಪುಷ್ಪ 2: ದಿ ರೂಲ್’ ಸಿನಿಮಾದ ಪ್ರೀಮಿಯರ್ ಪ್ರದರ್ಶನ ಆಯೋಜಿಸಲಾಗಿತ್ತು. ಈ ವೇಳೆ ತಮ್ಮ ನೆಚ್ಚಿನ ನಟ ಅಲ್ಲು ಅರ್ಜುನ್ ಅವರನ್ನು ನೋಡಲು ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದರು. ಈ ಸಂದರ್ಭದಲ್ಲಿ ಉಂಟಾದ ಕಾಲ್ತುಳಿತದಿಂದಾಗಿ 35 ವರ್ಷದ ರೇವತಿ ಎಂಬ ಮಹಿಳೆ ಸಾವನ್ನಪ್ಪಿದ್ದರು. ಅವರ ಪುಟ್ಟ ಮಗ ಶ್ರೀತೇಜ್ ಆಮ್ಲಜನಕದ ಕೊರತೆಯಿಂದಾಗಿ ಗಂಭೀರ ಆರೋಗ್ಯ ಸಮಸ್ಯೆಗೆ ಒಳಗಾಗಿ ದೀರ್ಘಕಾಲದವರೆಗೆ ಹಾಸಿಗೆ ಹಿಡಿದಿದ್ದಾರೆ.

ಚಾರ್ಜ್‌ಶೀಟ್‌ನಲ್ಲಿ ಹೇಳಿದ್ದೇನು?
ಪೊಲೀಸರು ಒಟ್ಟು 23 ಜನರನ್ನ ಆರೋಪಿಗಳೆಂದು ಹೆಸರಿಸಿದ್ದಾರೆ. ಇದರಲ್ಲಿ ಅಲ್ಲು ಅರ್ಜುನ್ 11ನೇ ಆರೋಪಿ (A-11) ಆಗಿದ್ದಾರೆ. ಚಿತ್ರಮಂದಿರದ ಆಡಳಿತ ಮಂಡಳಿಯನ್ನ ಪ್ರಮುಖ ಆರೋಪಿ (A-1) ಎಂದು ಉಲ್ಲೇಖಿಸಲಾಗಿದೆ. ಇದನ್ನೂ ಓದಿ: RSS ಸಂಘಟನಾ ಕೌಶಲ್ಯಕ್ಕೆ ದಿಗ್ವಿಜಯ್ ಸಿಂಗ್ ಮೆಚ್ಚುಗೆ – ಅಡ್ವಾಣಿ ಮುಂದೆ ಮೋದಿ ಕುಳಿತಿರೋ ಫೋಟೋ ಹಂಚಿಕೊಂಡ `ಕೈ’ ನಾಯಕ

ಅಪಾಯಕಾರಿ ಜನಸಂದಣಿ ಇರುವುದು ತಿಳಿದಿದ್ದರೂ ನಟ ಅಲ್ಲಿಗೆ ಭೇಟಿ ನೀಡಿದ್ದು ಮತ್ತು ಸ್ಥಳೀಯ ಅಧಿಕಾರಿಗಳೊಂದಿಗೆ ಸರಿಯಾದ ಸಮನ್ವಯ ಸಾಧಿಸದ ಕಾರಣ ಈ ಅನಾಹುತ ಸಂಭವಿಸಿದೆ ಎಂದು ಪೊಲೀಸರು ಆರೋಪಿಸಿದ್ದಾರೆ.

ಈ ಪಟ್ಟಿಯಲ್ಲಿ ಅಲ್ಲು ಅರ್ಜುನ್ ಅವರ ವೈಯಕ್ತಿಕ ಮ್ಯಾನೇಜರ್, ಸಿಬ್ಬಂದಿ ವರ್ಗ ಮತ್ತು ಪರಿಸ್ಥಿತಿಯನ್ನ ಮತ್ತಷ್ಟು ಹದಗೆಡಿಸಿದ ಆರೋಪ ಹೊತ್ತಿರುವ 8 ಖಾಸಗಿ ಬೌನ್ಸರ್‌ಗಳ ಹೆಸರೂ ಇದೆ. ಇದನ್ನೂ ಓದಿ: ನರೇಗಾ ರದ್ದು ರಾಜ್ಯಗಳ ಹಕ್ಕುಗಳ ಮೇಲೆ ನೇರ ದಾಳಿ – ಕೇಂದ್ರದ ವಿರುದ್ಧ ರಾಹುಲ್‌ ನಿಗಿನಿಗಿ

ಅಲ್ಲು ಅರ್ಜುನ್‌ ವಿರುದ್ಧ ಇರುವ ಆರೋಪಗಳೇನು?
ಪೊಲೀಸ್ ತನಿಖೆಯಲ್ಲಿ ಪ್ರಮುಖ ನಿರ್ಲಕ್ಷ್ಯಗಳು ಕಂಡುಬಂದಿವೆ. ಸುರಕ್ಷತಾ ಕಾರಣಗಳಿಂದಾಗಿ ಅಂದು ನಟ ಚಿತ್ರಮಂದಿರಕ್ಕೆ ಭೇಟಿ ನೀಡುವುದಕ್ಕೆ ಪೊಲೀಸರು ಮೊದಲೇ ಅನುಮತಿ ನಿರಾಕರಿಸಿದ್ದರು. ಆದರೂ ನಟ ಅಲ್ಲಿಗೆ ಆಗಮಿಸಿದ್ದರು. ವಿಐಪಿ ಅತಿಥಿಗಳಿಗಾಗಿ ಪ್ರತ್ಯೇಕ ಪ್ರವೇಶ ಮತ್ತು ನಿರ್ಗಮನ ದ್ವಾರಗಳನ್ನ ಒದಗಿಸುವಲ್ಲಿ ಚಿತ್ರಮಂದಿರದ ಮ್ಯಾನೇಜ್‌ಮೆಂಟ್ ವಿಫಲವಾಗಿದೆ. ಖಾಸಗಿ ಬೌನ್ಸರ್‌ಗಳ ಚಲನವಲನ ಮತ್ತು ಜನರತ್ತ ಅವರು ಮಾಡಿದ ಕೆಲವು ಸನ್ನೆಗಳು ಜನದಟ್ಟಣೆ ಹಠಾತ್ ಹೆಚ್ಚಾಗಲು ಪ್ರಚೋದನೆ ನೀಡಿತು ಎಂದು ವರದಿಯಲ್ಲಿದೆ. ಇದನ್ನೂ ಓದಿ: ಶಾಮನೂರು ನಿಧನದಿಂದ ತೆರವಾದ ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಉಪಚುನಾವಣೆಗೆ ಸಿದ್ಧತೆ 

Share This Article