ನಟಭಯಂಕರ ಸೆಟ್‍ಗೆ ಸರ್‌ಪ್ರೈಸ್‌ ವಿಸಿಟ್ ಕೊಟ್ಟ ಯಂಗ್ ರೆಬೆಲ್ ಸ್ಟಾರ್!

Public TV
2 Min Read

ಬೆಂಗಳೂರು: ಸದಾ ಚಿತ್ರರಂಗದ ಇತರರ ಕೆಲಸ ಕಾರ್ಯಗಳತ್ತಲೂ ಒಂದು ಕಣ್ಣಿಟ್ಟು ಬೆನ್ತಟ್ಟಿ ಪ್ರೋತ್ಸಾಹಿಸುತ್ತಿದ್ದ ಸ್ನೇಹಶೀಲ ವ್ಯಕ್ತಿತ್ವ ರೆಬೆಲ್ ಸ್ಟಾರ್ ಅಂಬರೀಶ್ ಅವರದ್ದು. ಅವರ ಪುತ್ರ ಅಭಿಷೇಕ್ ಕೂಡಾ ಅಂಥಾದ್ದೇ ಗುಣಗಳಿಂದಲೇ ಎಲ್ಲರ ಪ್ರೀತಿ ಪಾತ್ರರಾಗಿದ್ದಾರೆ. ಸ್ನೇಹಕ್ಕೆ ಸೋಲುವ ಸ್ವಭಾವದ ಅಭಿಷೇಕ್ ಇದ್ದಕ್ಕಿದ್ದಂತೆ ನಟಭಯಂಕರ ಶೂಟಿಂಗ್ ಸ್ಪಾಟಿಗೆ ಭೇಟಿ ನೀಡಿ ನಿರ್ದೇಶಕ ಕಂ ನಾಯಕ ಪ್ರಥಮ್‍ಗೆ ಸರ್‌ಪ್ರೈಸ್‌ ಕೊಟ್ಟಿದ್ದಾರೆ.

ಅಭಿಷೇಕ್ ಈಗ ತಮ್ಮ ಬಣ್ಣದ ಬದುಕಿನ ಜೊತೆ ಜೊತೆಗೇ ಸಂಸದೆಯಾಗಿರೋ ಅಮ್ಮ ಸುಮಲತಾರ ಒಂದಷ್ಟು ಜವಾಬ್ದಾರಿಗಳನ್ನೂ ವಹಿಸಿಕೊಂಡಿದ್ದಾರೆ. ಅಮ್ಮನನ್ನು ಗೆಲ್ಲಿಸಿದ ಮಂಡ್ಯದ ಜನರಿಗಾಗಿಯೇ ಹೆಚ್ಚಿನ ಸಮಯವನ್ನು ಮೀಸಲಿಟ್ಟಿದ್ದಾರೆ. ಹೀಗೆ ಮಂಡ್ಯದತ್ತ ಹೊರಟಿದ್ದ ಅಭಿಷೇಕ್ ಆ ಅರ್ಜೆಂಟಿನ ನಡುವೆಯೂ ನಟಭಯಂಕರ ಸೆಟ್ಟಿಗೆ ಭೇಟಿ ಕೊಟ್ಟಿದ್ದಾರೆ. ಕೇವಲ ಭೇಟಿ ಕೊಟ್ಟು ಔಪಚಾರಿಕ ಮಾತುಕಥೆ ನಡೆಸಿ ಹೊರಟಿಲ್ಲ. ಬದಲಾಗಿ ಇಡೀ ಚಿತ್ರದ ಆಗು ಹೋಗುಗಳನ್ನು ತಿಳಿದುಕೊಂಡಿದ್ದಾರೆ. 4 ಗಂಟೆಗೂ ಹೆಚ್ಚು ಕಾಲ ಪ್ರಥಮ್ ಅವರ ಜೊತೆಗೇ ಇದ್ದು ಎಲ್ಲವನ್ನೂ ಗಮನಿಸಿದ್ದಾರೆ.

ಇಷ್ಟು ಕಾಲ ಪ್ರಥಮ್ ಕಾರ್ಯವೈಖರಿಗಳನ್ನು ಗಮನಿಸಿದ ಅಭಿಷೇಕ್ ಪ್ರಥಮ್ ನಿರ್ದೇಶನದ ಶೈಲಿಯನ್ನು ಡೈಲಾಗ್ ಮತ್ತು ಆಕ್ಷನ್ ಗಳನ್ನು ಬಹುವಾಗಿ ಮೆಚ್ಚಿಕೊಂಡಿದ್ದಾರಂತೆ. ಇಷ್ಟೇ ಅಲ್ಲದೇ ಒಂದಷ್ಟು ಸೀನ್‍ಗಳನ್ನು ತಾವೇ ಖುದ್ದಾಗಿ ಅಭಿ ನಿರ್ದೇಶನವನ್ನೂ ಮಾಡಿದ್ದಾರಂತೆ. ಇಷ್ಟೆಲ್ಲ ಮಾಡಿ, ಚಿತ್ರತಂಡದೊಂದಿಗೆ ಕಲೆತು ಖುಷಿ ಪಟ್ಟ ಅಭಿ ಆದಷ್ಟು ಬೇಗ ಸಿನಿಮಾ ತಮಗೆ ಸಿನಿಮಾ ತೋರಿಸುವಂತೆಯೂ ಪ್ರಥಮ್ ಅವರಿಗೆ ತಾಕೀತು ಮಾಡಿದ್ದಾರಂತೆ.

ಹೀಗೆ ಜ್ಯೂನಿಯರ್ ರೆಬೆಲ್ ಸ್ಟಾರ್ ಅನಿರೀಕ್ಷಿತವಾಗಿ ಭೇಟಿ ನೀಡಿ ತುಂಬಾ ಸಮಯ ತಮಗಾಗಿ ಮೀಸಲಿಟ್ಟಿದ್ದರಿಂದ ಪ್ರಥಮ್ ಕೂಡಾ ಥ್ರಿಲ್ ಆಗಿದ್ದಾರೆ. ಅಭಿಷೇಕ್ ಭೇಟಿ ನೀಡಿದ ಸಂದರ್ಭದಲ್ಲಿ ನಟಭಯಂಕರ ಚಿತ್ರದ ನಾಯಕಿ ನಿಹಾರಿಕಾ ಶೆಣೈ, ಓಂಪ್ರಕಾಶ್ ರಾವ್, ಮಜಾ ಟಾಕೀಸ್ ಪವನ್ ಮತ್ತು ಉದಯ್ ಮೆಹ್ತಾ ಮುಂತಾದವರು ಉಪಸ್ಥಿತರಿದ್ದರು.

ಈ ಹಿಂದೆ ನಟಭಯಂಕರ ಸಿನಿಮಾ ಸೆಟ್‍ಗೆ ಗೋಲ್ಡನ್ ಸ್ಟಾರ್ ಗಣೇಶ್ ಕೂಡಾ ಭೇಟಿ ನೀಡಿದ್ದರು. ಈಗ ಅಭಿಷೇಕ್ ಅಂಬರೀಷ್ ಭೇಟಿ ನೀಡಿದ್ದಾರೆ. ಅಂತೂ ಈ ಚಿತ್ರದ ಮೂಲಕ ಪ್ರಥಮ್ ನಿರ್ದೇಶಕನಾಗಿಯೂ ತಮ್ಮದೇ ಛಾಪು ಮೂಡಿಸುವತ್ತ ನಿರ್ಣಾಯಕ ಹೆಜ್ಜೆಯಿಟ್ಟಿದ್ದಾರೆ. ಇದಕ್ಕಾಗಿ ವಿಶಿಷ್ಟವಾದ ಕಥೆಯನ್ನು ಉದಯ್ ಮೆಹ್ತಾ ರಚಿಸಿದ್ದಾರೆ. ಈ ಚಿತ್ರದ ಚಿತ್ರೀಕರಣವೀಗ ಬಿಡುವಿಲ್ಲದಂತೆ ನಡೆಯುತ್ತಿದೆ.

Share This Article
Leave a Comment

Leave a Reply

Your email address will not be published. Required fields are marked *