ಮಂಗಳೂರು: ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆ ಅಧ್ಯಕ್ಷ ಮಹೇಶ್ ಶೆಟ್ಟಿ ತಿಮರೋಡಿ (Mahesh Shetty Thimarodi) ಅವರನ್ನು ಮಾನ್ವಿ (Manvi) ತಾಲ್ಲೂಕಿಗೆ ಗಡಿಪಾರು ಮಾಡಿ ಪುತ್ತೂರು ಉಪ ವಿಭಾಗಾಧಿಕಾರಿ ಆದೇಶ ಹೊರಡಿಸಿದ್ದಾರೆ.
ಈ ಹಿಂದೆ ಗಡಿಪಾರು ಮಾಡಿ ಹೊರಡಿಸಿದ್ದ ಆದೇಶವನ್ನು ತಿಮರೋಡಿ ಹೈಕೋರ್ಟ್‌ನಲ್ಲಿ(High Court) ಪ್ರಶ್ನಿಸಿದ್ದರು. ಮರುಪರಿಶೀಲಿಸಲು ಹೈಕೋರ್ಟ್ (High Court) ಸೂಚಿಸಿತ್ತು. ಇದೀಗ ಹೈಕೋರ್ಟ್ ಆದೇಶದಂತೆ ಮರುಪರಿಶೀಲನೆ ಮಾಡಿ ಒಂದು ವರ್ಷ ರಾಯಚೂರು ಜಿಲ್ಲೆಯ ಮಾನ್ವಿ ತಾಲ್ಲೂಕಿಗೆ ಗಡಿಪಾರು ಮಾಡಿ ಡಿ.17ರಂದು ಆದೇಶ ಹೊರಡಿಸಲಾಗಿದೆ.
ಗಡಿಪಾರು ಆದೇಶ ಪ್ರತಿ ಬೆಳ್ತಂಗಡಿ ಪೊಲೀಸ್ ಠಾಣೆಗೆ ಬಂದಿದ್ದು ಇಂದು ಬೆಳಗ್ಗೆ ಉಜಿರೆಯಲ್ಲಿರುವ ಮಹೇಶ್ ಶೆಟ್ಟಿ ತಿಮರೋಡಿ ಅವರ ಮನೆಗೆ ಪೊಲೀಸರು ಹೋಗಿದ್ದರು. ಆದರೆ ಈ ಸಂದರ್ಭದಲ್ಲಿ ಅವರು ಮನೆಯಲ್ಲಿ ಇರಲಿಲ್ಲ. ಹೀಗಾಗಿ ಪೊಲೀಸರು ಮನೆಗೆ ಹೋಗಿ ನೋಟಿಸ್ ಅಂಟಿಸಿ ಬಂದಿದ್ದಾರೆ.
ತಿಮರೋಡಿಯನ್ನು ಒಂದು ವರ್ಷ ಕಾಲ ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿಗೆ ಗಡಿಪಾರು ಮಾಡಿ ಸೆ.20 ರಂದು ಪುತ್ತೂರು ಸಹಾಯಕ ಆಯುಕ್ತೆ ಸ್ಟೆಲ್ಲಾ ವರ್ಗೀಸ್ ಆದೇಶ ಹೊರಡಿಸಿದ್ದರು. ಮಹೇಶ್ ಶೆಟ್ಟಿ ತಿಮರೋಡಿ ಮೇಲೆ ಸುಮಾರು 32 ಪ್ರಕರಣಗಳು ದಾಖಲಾದ ಹಿನ್ನೆಲೆಯಲ್ಲಿ ಗಡಿಪಾರು ಮಾಡಲಾಗಿತ್ತು. ಗಡಿಪಾರು ಆದೇಶವನ್ನು ಮಹೇಶ್ ತಿಮರೋಡಿ ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು.
ಅರ್ಜಿ ವಿಚಾರಣೆ ನ್ಯಾ ಸೂರಜ್ ಗೋವಿಂದರಾಜು ಪೀಠದಲ್ಲಿ ನಡೆಯಿತು. ವಿಚಾರಣೆ ವೇಳೆ ಗಡಿಪಾರು ಅಗತ್ಯ ಇದ್ದರೆ ಮತ್ತೊಮ್ಮೆ ಹೊಸದಾಗಿ ಕಾನೂನಿನ ಪ್ರಕಾರವಾಗಿ ಆದೇಶ ಮಾಡಲು ಪುತ್ತೂರು ಎಸಿಗೆ ಹೈಕೋರ್ಟ್ ಸೂಚಿಸಿತ್ತು.

