ಮನೆಯಿಂದ ಹೋಗಬೇಕಾದ್ರೆ ರಾಜಕುಮಾರಿ ತರ ಹೋದ್ಳು, ಆದರೆ ಈಗ….: ಆ್ಯಸಿಡ್ ಸಂತ್ರಸ್ತೆ ತಾಯಿ ಅಳಲು

Public TV
3 Min Read

– ಅವಳಿಗೆ ಬ್ಯಾಂಕ್ ಕೆಲಸ ಎಂದರೆ ಇಷ್ಟ

ಬೆಂಗಳೂರು: ಆ್ಯಸಿಡ್ ದಾಳಿಗೆ ಬಳಗಾದ ಯುವತಿಯ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆರೋಪಿಗಾಗಿ ಪೊಲೀಸರು ಇನ್ನೂ ಹುಡುಕಾಟ ಮಾಡುತ್ತಿದ್ದು, ಇಂದು ನಾಗೇಶ್ ಅವರ ಅಣ್ಣನನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ. ಸಂತ್ರಸ್ತೆ ತಾಯಿ ಲಕ್ಷ್ಮಮ್ಮ ಅವರು ಪಬ್ಲಿಕ್ ಟಿವಿ ಜೊತೆ ಮಾತನಾಡಿ ತನ್ನ ಅಳಲನ್ನು ತೊಡಿಕೊಂಡಿದ್ದಾರೆ.

ಆ್ಯಸಿಡ್ ಸಂತ್ರಸ್ತೆ ತಾಯಿ ಲಕ್ಷ್ಮಮ್ಮ ಮಾತನಾಡಿದ್ದು, ನನಗೆ ಏನೂ ತಿಳಿಯುವುದಿಲ್ಲವೆಂದು ಯಾವುದೇ ರೀತಿ ಮಾಹಿತಿಯನ್ನು ನನಗೆ ಕೊಡುತ್ತಿಲ್ಲ. ನನ್ನ ಅಕ್ಕ ಮತ್ತು ಭಾವನೇ ಇದನ್ನು ನೋಡಿಕೊಳ್ಳುತ್ತಿದ್ದಾರೆ. ನನಗೆ ಏನೂ ಹೇಳುತ್ತಿಲ್ಲ. ಆದರೆ ಈಗ ನಾನು ಸಹಿ ಮಾಡಬೇಕು ಎಂದು ಹೇಳಿ ಆಸ್ಪತ್ರೆಯಿಂದ ಕರೆಬಂದಿದೆ, ಹೋಗಬೇಕು ಎಂದು ತಿಳಿಸಿದರು. ಇದನ್ನೂ ಓದಿ:  ಆ್ಯಸಿಡ್ ದಾಳಿಗೆ ಒಳಗಾದ ಯುವತಿ ಚಿಕಿತ್ಸೆಗೆ 1 ಲಕ್ಷ ರೂ. ಚಕ್ ಕೊಟ್ಟ 

ಆಸ್ಪತ್ರೆಗೆ ದಾಖಲಾದ ಮೇಲೆ ಆಸ್ಪತ್ರೆಯವರು ನನ್ನ ಮಗಳನ್ನು ನೋಡಲು ಬಿಡುತ್ತಿರಲಿಲ್ಲ. ಆದರೆ ನಿನ್ನೆ ಬಿಟ್ಟಿದ್ರು. ನನ್ನ ಮಗಳನ್ನು ನೋಡುವುದಕ್ಕೆ ಆಗುತ್ತಿಲ್ಲ. ನನ್ನ ಮಗಳು ಈ ರೀತಿ ಮಲಗಿಕೊಂಡಿದ್ದಾಳೆ ಎಂದರೆ ನನಗೆ ನಂಬುವುದಕ್ಕೆ ಆಗುತ್ತಿಲ್ಲ ಎಂದು ಕಣ್ಣೀರು ಹಾಕಿದರು. ಮನೆಯಿಂದ ಹೋಗಬೇಕಾದ್ರೆ ರಾಜಕುಮಾರಿ ತರ ಹೋದ್ಳು. ಆದರೆ ಈಗ ಈ ರೀತಿ ನೋಡಿ ನನಗೆ ದುಃಖ ತಡೆದುಕೊಳ್ಳುವುದಕ್ಕೆ ಆಗುತ್ತಿಲ್ಲ ಕಣ್ಣೀರು ಹಾಕಿದರು.

ನನ್ನ ಮಗಳು ನಿನ್ನೆ ಸ್ವಲ್ಪ ಕಣ್ಣು ಬಿಟ್ಟು ನೋಡಿ, ಅಮ್ಮ, ಅಮ್ಮ ಎಂದು ಕರೆದ್ಳು. ಅಮ್ಮ ನನ್ನನ್ನು ಉಳಿಸಿಕೊಳ್ಳಿ, ಅವನಿಗೆ ತಕ್ಕ ಶಿಕ್ಷೆಯಾಗಬೇಕು. ಅವನನ್ನು ಮಾತ್ರ ಸುಮ್ಮನೆ ಬಿಡಬೇಡಿ ಎಂದು ಬೇಡಿಕೊಂಡಿದ್ದಾಳೆ. ನಾನು ಪೊಲೀಸರ ಬಳಿ ಮಾತನಾಡಿಲ್ಲ. ಎಲ್ಲವನ್ನೂ ನನ್ನ ಅಕ್ಕ ಮತ್ತು ಭಾವ ನೋಡಿಕೊಳ್ಳುತ್ತಿದ್ದಾರೆ. ನಾನು 1ನೇ ಕ್ಲಾಸ್ ಸಹ ಓದಿಲ್ಲ. ನನ್ನ ಅಕ್ಕ-ಭಾವ ಓದಿದ್ದಾರೆ. ಡಾಕ್ಟರ್ ಮತ್ತು ಪೊಲೀಸರು ಏನೇ ಮಾತನಾಡಿದ್ರೂ ನನಗೆ ಅರ್ಥವಾಗುವುದಿಲ್ಲ. ಅದಕ್ಕೆ ಅವರೇ ನೋಡಿಕೊಳ್ಳುತ್ತಿದ್ದಾರೆ ಎಂದು ರೋದಿಸಿದರು.

ಅಕ್ಕನ ಮನೆಯ ಮೇಲೆಯೇ ಬಾಡಿಗೆಗೆ ಇದ್ದ
ನಾಗೇಶ್ ನಮ್ಮ ಅಕ್ಕನ ಮನೆಯ ಮೇಲೆಯೇ ಬಾಡಿಗೆಗೆ ಇದ್ದ. ಆದರೆ ವಿಷಯ ತಿಳಿದ ಮೇಲೆ 3 ವರ್ಷಗಳ ಹಿಂದೆಯೇ ಅವನನ್ನು ಮನೆಯಿಂದ ಖಾಲಿ ಮಾಡಿಸಿದ್ದೇವೆ. ಬ್ಯಾಂಕ್ ಬಳಿ ಬಂದು ಪ್ರೀತಿ ವಿಚಾರವನ್ನು ಹೇಳಿದ್ದ. ಆದರೆ ನನ್ನ ಮಗಳು ನಾನು ಮದುವೆಯಾಗುವುದಿಲ್ಲ ಎಂದು ನೇರವಾಗಿ ಹೇಳಿದ್ದಾಳೆ. ಈ ವಿಷಯವನ್ನು ಮನೆಯವರ ಬಳಿಯೂ ಹೇಳಿದ್ದಳು. ಅಲ್ಲದೇ ಅವನು ಮನೆ ಬಳಿಯೇ ಬಂದು, ನಿಮ್ಮ ಮಗಳನ್ನು ಮದುವೆ ಮಾಡಿಕೊಡಿ ಎಂದು ಕೇಳಿದ್ದ. ಆದರೆ ನಾವು ಮತ್ತೆ ನಮ್ಮ ಭಾವ ಮದುವೆ ಮಾಡಿಕೊಡುವುದಿಲ್ಲ ಎಂದು ಹೇಳಿದ್ದೆವು ಎಂದು ತಿಳಿಸಿದರು.

6 ತಿಂಗಳ ಹಿಂದೆಯಷ್ಟೇ ಕೆಲಸಕ್ಕೆ ಹೋಗಿದ್ದಳು
ನಾಗೇಶ್ ಅವರ ಅಣ್ಣನ ಕಂಪನಿಯಲ್ಲೇ ಕೆಲಸ ಮಾಡುತ್ತಿದ್ದ ಎಂಬುದಷ್ಟೇ ನನಗೆ ಗೊತ್ತು. ನನ್ನ ಮಗಳು 6 ತಿಂಗಳ ಹಿಂದೆಯಷ್ಟೇ ಕೆಲಸಕ್ಕೆ ಹೋಗಿದ್ದಳು. ಅವಳಿಗೆ ಬ್ಯಾಂಕ್ ಕೆಲಸ ಎಂದರೆ ಇಷ್ಟ. ಈ ಕೆಲಸಕ್ಕಾಗಿ ಹಲವು ಎಕ್ಸಾಂ ಸಹ ಬರೆದಿದ್ದಾಳೆ. ಅಲ್ಲದೇ ಇತ್ತೀಚೆಗೆ ಪೋಸ್ಟ್ ಆಫೀಸ್ ಕೆಲಸಕ್ಕೆ ಎಕ್ಸಾಂ ಬರೆಯಬೇಕು ಎಂದು ಕೇಳಿದ್ದಳು. ನಾವು ತರಕಾರಿ ವ್ಯಾಪಾರ ಮಾಡಿ ನನ್ನ ಮಕ್ಕಳನ್ನು ಬೆಳೆಸಿದ್ದೇವೆ ಎಂದು ಅತ್ತರು. ಇದನ್ನೂ ಓದಿ: ಅವನನ್ನ ಪ್ಲೀಸ್ ಬಿಡಬೇಡಿ, ಅವನಿಗೆ ಶಿಕ್ಷೆಯಾಗಲೇ ಬೇಕು: ಪೊಲೀಸರನ್ನು ಬೇಡಿಕೊಂಡ ಆಸಿಡ್ ಸಂತ್ರಸ್ತೆ

ಅವನ ಅಣ್ಣನನ್ನು ಜೈಲಿಗೆ ಹಾಕಿ
ನನ್ನ ದೊಡ್ಡ ಮಗಳ ಮದುವೆ ಇದ್ದ ಸಂದರ್ಭದಲ್ಲಿ ನಾಗೇಶ್ ಅಣ್ಣನಿಗೆ ಪತ್ರಿಕೆ ಕೊಡಲು ಹೋಗಿದ್ದಾಗಲೂ ನಮ್ಮ ಮನೆಯವರು ನಾಗೇಶ್ ವಿರುದ್ಧ ದೂರು ಕೊಡುವುದಾಗಿ ಹೇಳಿದ್ದರು. ಆದರೆ ಅವರ ಅಣ್ಣ ನನ್ನ ತಮ್ಮನಿಗೆ ಅಷ್ಟು ಧೈರ್ಯವಿಲ್ಲ, ಅವನಿಗೆ ನಾನು ಬುದ್ಧಿ ಹೇಳುತ್ತೇನೆ ಎಂದು ಹೇಳಿದ್ದರು. ಆಗ ನಾನು ಪೊಲೀಸರಿಗೆ ದೂರು ಕೊಟ್ಟಿದ್ರೆ ಈ ಪರಿಸ್ಥಿತಿ ನನ್ನ ಮಗಳಿಗೆ ಬರುತ್ತಿರಲಿಲ್ಲ. ಅವನ ಅಣ್ಣನನ್ನು ಜೈಲಿಗೆ ಹಾಕಿ ಎಂದು ಬೇಡಿಕೊಂಡರು.

Share This Article
Leave a Comment

Leave a Reply

Your email address will not be published. Required fields are marked *