Kolar | ದೇಶ ವಿರೋಧಿ ಚಟುವಟಿಕೆಯಲ್ಲಿ ತೊಡಗಿದ ಆರೋಪ – ಅಪ್ರಾಪ್ತ ವಶಕ್ಕೆ

Public TV
2 Min Read

ಕೋಲಾರ: ದೇಶ ವಿರೋಧಿ ಚಟುವಟಿಕೆಯಲ್ಲಿ (Anti-National Activity) ತೊಡಗಿದ ಹಾಗೂ ಕೆಲವೊಂದು ಉಗ್ರವಾದಿ ಸಂಘಟನೆಗಳ ಕುರಿತ ಪೋಸ್ಟ್‌ಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡ ಆರೋಪದಡಿಯಲ್ಲಿ ಓರ್ವ ಅಪ್ರಾಪ್ತ ಬಾಲಕನನ್ನು (Minor Boy) ಆಂತರಿಕ ಭದ್ರತಾ ಅಧಿಕಾರಿಗಳು (Internal Security Officers) ಮತ್ತು ಕೇಂದ್ರ ಗುಪ್ತಚರ ಇಲಾಖೆ (Central Intelligence Agency) ಅಧಿಕಾರಿಗಳು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

ಕೋಲಾರ (Kolar) ಜಿಲ್ಲೆ ಕೆಜಿಎಫ್ (KGF) ತಾಲೂಕು ಬೇತಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಸುಮಾರು 15 ವರ್ಷದ ಬಾಲಕನೊಬ್ಬ ಕೆಲವೊಂದು ಉಗ್ರಗಾಮಿ ಸಂಘಟನೆಗೆ ಸಂಬಂಧಿಸಿದಂತೆ ಕೆಲವೊಂದು ಪೋಸ್ಟ್‌ಗಳನ್ನು ಹಂಚಿಕೊಂಡಿದ್ದ. ಅಲ್ಲದೆ ಪದೇ ಪದೇ ಉಗ್ರಗಾಮಿ ಸಂಘಟನೆಯ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಹುಡುಕಾಡುತ್ತಿದ್ದ ಹಿನ್ನೆಲೆ ಅಧಿಕಾರಿಗಳು ಆತನನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಒಂದು ಇಡೀ ದಿನ ಆತನನ್ನು ವಿಚಾರಣೆ ನಡೆಸಿ ನಂತರ ಆತನನ್ನು ಬೇತಮಂಗಲ ಪೊಲೀಸರ ವಶಕ್ಕೆ ನೀಡಲಾಗಿದೆ. ಇದನ್ನೂ ಓದಿ: ಭಾರೀ ಗಾಳಿ ಸಹಿತ ಮಳೆ – ಮನೆ ಕುಸಿದು ಕಾರ್ಮಿಕ ಮಹಿಳೆ ಸಾವು

ಇನ್ನು ಈ ಬಾಲಕ ಮೂಲತಃ ಆಂದ್ರದ ಮುಸ್ಲಿಂ ಕುಟುಂಬಕ್ಕೆ ಸೇರಿದ್ದ. ಕಳೆದ ಹಲವು ವರ್ಷಗಳ ಹಿಂದೆಯೇ ಆಂದ್ರದ ರಾಮಕುಪ್ಪಂ ತೊರೆದು ಬೆಂಗಳೂರಿನ ಮೇಡಹಳ್ಳಿ ಕೆಲಸ ಮಾಡಿಕೊಂಡಿದ್ದ ಕುಟುಂಬ ಇತ್ತೀಚೆಗೆ ಕೋಲಾರ ಜಿಲ್ಲೆ ಕೆಜಿಎಫ್ ತಾಲೂಕು ಬೇತಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯ ದ್ಯಾವರಹಳ್ಳಿ ಗ್ರಾಮದ ಬಳಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು ಎಂದು ತಿಳಿದು ಬಂದಿದೆ. ಮೇಡಹಳ್ಳಿ ಬಳಿ ಚಿಕನ್ ಅಂಗಡಿಯಲ್ಲಿ ಕೆಲಸ ಮಾಡಿಕೊಂಡಿದ್ದ ಬಾಲಕ ಕಳೆದ 20 ದಿನಗಳ ಹಿಂದಷ್ಟೇ ಬೇತಮಂಗಲ ಬಳಿ ಚಿಕನ್ ಅಂಗಡಿಯಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದ. ಸದ್ಯ ಈತನ ಚಲನವಲನಗಳ ಮೇಲೆ ಕಣ್ಣಿಟ್ಟಿದ್ದ ಆಂತರಿಕ ಭದ್ರತಾ ಅಧಿಕಾರಿಗಳು ಹಾಗೂ ಕೇಂದ್ರ ಗುಪ್ತಚರ ಇಲಾಖೆ ಅಧಿಕಾರಿಗಳು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಇದನ್ನೂ ಓದಿ: ಸೋನ್‌ಪ್ರಯಾಗ್ ಬಳಿ ಭೂಕುಸಿತ – ಕೇದಾರನಾಥ ಯಾತ್ರೆ ತಾತ್ಕಾಲಿಕ ಸ್ಥಗಿತ

ಸದ್ಯ ಈತನ ವಿರುದ್ಧ ಬೇತಮಂಗಲ ಪೊಲೀಸ್ ಠಾಣೆಯಲ್ಲಿ ದೇಶದ್ರೋಹ ಹಾಗೂ ದೇಶ ವಿರೋಧಿ ಚಟುವಟಿಕೆಯಲ್ಲಿ ತೊಡಗಿದ ಆರೋಪದಡಿ ಪ್ರಕರಣ ದಾಖಲಿಸಿಕೊಂಡು ಆರೋಪಿ ಬಾಲಕನ್ನು ವಶಕ್ಕೆ ಪಡೆದು ಕೆಜಿಎಫ್ ಬಾಲ ಮಂದಿರದಲ್ಲಿ ಇರಿಸಲಾಗಿದೆ. ಘಟನೆ ಸಂಬಂಧ ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ. ಇದನ್ನೂ ಓದಿ: ಬಾಗಲಕೋಟೆ | ಬೈಕ್ ತಪ್ಪಿಸಲು ಹೋಗಿ ಕಾರಿನ ಮೇಲೆ ಲಾರಿ ಪಲ್ಟಿ – ಇಬ್ಬರು ದುರ್ಮರಣ

Share This Article