-3 ದಿನದೊಳಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್
ಬೆಂಗಳೂರು: ಸೊಸೆಗೆ ವರದಕ್ಷಿಣೆ ಕಿರುಕುಳ ನೀಡುತ್ತಿರುವ ಆರೋಪದ ಮೇಲೆ ಸಿನಿಮಾ ನಿರ್ದೇಶಕ ಎಸ್.ನಾರಾಯಣ್, ಪತ್ನಿ ಹಾಗೂ ಪುತ್ರನ ವಿರುದ್ಧ ದಾಖಲಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗುವಂತೆ ಪೊಲೀಸರು ನೋಟಿಸ್ ನೀಡಿದ್ದಾರೆ.
ಎಸ್.ನಾರಾಯಣ್ ಅವರ ಎರಡನೇ ಮಗನ ಪತ್ನಿ ಪವಿತ್ರಾ ಗುರುವಾರ (ಸೆ.11) ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಮದುವೆಯಲ್ಲಿ ವರದಕ್ಷಿಣೆ ಕೊಟ್ಟಿದ್ದರೂ ಹೆಚ್ಚಿನ ಹಣಕ್ಕೆ ಒತ್ತಾಯ ಮಾಡುತ್ತಿದ್ದಾರೆ. ಹಲ್ಲೆ ನಡೆಸಿ ವರದಕ್ಷಿಣೆ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿದ್ದರು. ದೂರಿನನ್ವಯ ಪ್ರಕರಣ ದಾಖಲಾಗಿದ್ದು, ಸದ್ಯ ಪೊಲೀಸರು ಮೂರು ದಿನದೊಳಗಾಗಿ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ್ದಾರೆ.ಇದನ್ನೂ ಓದಿ: ಎಲ್ಲಾ ಹೆಣ್ಮಕ್ಕಳು ಮಾಡೋದು ವರದಕ್ಷಿಣೆ ಆರೋಪವೊಂದೇ ತಾನೆ – ಎಸ್. ನಾರಾಯಣ್
ಈಗಾಗಲೇ ಪವಿತ್ರಾ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಆರ್.ಆರ್.ನಗರದಲ್ಲಿರುವ ಎಸ್.ನಾರಾಯಣ್ ನಿವಾಸದಲ್ಲಿ ಮಹಜರು ನಡೆಸಿದ್ದಾರೆ. ಜೊತೆಗೆ ಮಹಜರು ವೇಳೆ ಎಸ್.ನಾರಾಯಣ್ ಹಾಗೂ ಕುಟುಂಬಸ್ಥರಿಂದ ಪ್ರಾಥಮಿಕ ಹೇಳಿಕೆ ದಾಖಲಿಸಿಕೊಂಡಿದ್ದಾರೆ. ಇನ್ನೂ ದೂರು ನೀಡಿರುವ ಪವಿತ್ರಾ ಅವರಿಗೂ ಕೂಡ ಪೊಲೀಸರು ನೋಟಿಸ್ ನೀಡಿದ್ದು, ದೂರಿನಲ್ಲಿ ಉಲ್ಲೇಖಿಸಿದಂತೆ ಸಾಕ್ಷ್ಯಾಧಾರಗಳನ್ನು ಒದಗಿಸುವಂತೆ ತಿಳಿಸಿದ್ದಾರೆ.
ಪವಿತ್ರಾ ದೂರಿನಲ್ಲಿ ಏನಿದೆ?
ಸಿನಿಮಾ ಆಡಿಷನ್‌ನಲ್ಲಿ ಎಸ್.ನಾರಾಯಣ್ ಪುತ್ರ ಪವನ್ ಪರಿಚಯವಾಗಿತ್ತು, ಅಲ್ಲಿಂದ ಪ್ರೇಮ ಶುರುವಾಗಿ ಬಳಿಕ ನಾನು ಹಾಗೂ ಪವನ್ 2021ರಲ್ಲಿ ಮದುವೆಯಾದೆವು. ನಮ್ಮದು ಲವ್ ಕಮ್ ಅರೇಂಜ್ ಮ್ಯಾರೇಜ್. 2022ರಲ್ಲಿ ಎಸ್.ನಾರಾಯಣ್ ನಿವಾಸದಿಂದ ಹೊರಬಂದು ಬೇರೆಡೆ ಪ್ರತ್ಯೇಕವಾಗಿ ವಾಸವಾಗಿದ್ವಿ. ಪವನ್ ಓದಿರದ ಕಾರಣ ಕೆಲಸ ಇಲ್ಲದೆ ಮನೆಯಲ್ಲಿಯೇ ಇದ್ದರು. ಇದರಿಂದಾಗಿ ನಾನೇ ಕೆಲಸಕ್ಕೆ ಹೋಗಿ ಮನೆ ಸಾಗಿಸುತ್ತಿದ್ದೆ. ನಂತರ ಪವನ್ ಕಲಾ ಸಾಮ್ರಾಟ್ ಟೀಂ ಅಕಾಡೆಮಿ ಎಂಬ ಫಿಲ್ಮ್ ಇನ್ಸ್ಟಿಟ್ಯೂಟ್ ಪ್ರಾರಂಭಿಸಬೇಕೆಂದು ಯೋಚಿಸಿದ್ದರು. ಇದಕ್ಕಾಗಿ ನನ್ನ ಬಳಿ ದುಡ್ಡು ಕೇಳಿದ್ದರು. ಆಗ ನನ್ನ ತಾಯಿಯ ಒಡವೆ ಕೊಟ್ಟಿದ್ದೆ. ಆದ್ರೆ ಬಳಿಕ ಲಾಸ್ ಆಗಿ ಇನ್‌ಸ್ಟಿಟ್ಯೂಟ್ ಮುಚ್ಚಬೇಕಾದ ಪರಿಸ್ಥಿತಿ ಬಂತು.
ಮದುವೆಯಲ್ಲಿ 1 ಲಕ್ಷ ರೂ. ಮೌಲ್ಯದ ಉಂಗುರ ಹಾಗೂ ಮದುವೆ ಖರ್ಚು ನೋಡಿಕೊಂಡಿದ್ದೆವು. ವರದಕ್ಷಿಣೆ ಕೊಟ್ರೂ ಹಲ್ಲೆ ನಡೆಸಿ ಹೆಚ್ಚಿನ ಹಣಕ್ಕೆ ಒತ್ತಾಯಿಸಿದ್ದಾರೆ. ಹೀಗಾಗಿ ಜಗಳ ಆಗಿ ನನ್ನನ್ನು ಮನೆಯಿಂದ ಆಚೆ ಹಾಕಿದ್ದರು. ಇದರಿಂದ ನನಗೆ ಹಾಗೂ ನನ್ನ ಮಗನಿಗೆ ತೊಂದರೆಯಾಗುತ್ತೆ, ಒಂದು ವೇಳೆ ಏನಾದರೂ ಆದರೆ ಇವರುಗಳೇ ಕಾರಣ ಎಂದು ಆರೋಪಿಸಿ, ಕ್ರಮಕ್ಕಾಗಿ ಮನವಿ ಮಾಡಿಕೊಂಡಿದ್ದರು.ಇದನ್ನೂ ಓದಿ: ಸೊಸೆಗೆ ವರದಕ್ಷಿಣೆ ಕಿರುಕುಳ ಆರೋಪ – ಎಸ್.ನಾರಾಯಣ್, ಪತ್ನಿ, ಪುತ್ರನ ವಿರುದ್ಧ ಎಫ್‌ಐಆರ್