ಬೆಂಗಳೂರು: ಗಾಂಜಾ ಹಾಗೂ ಮದ್ಯದ ಮತ್ತಿನಲ್ಲಿ ಕಾಲೇಜು ವಿದ್ಯಾರ್ಥಿಗಳು ರ‍್ಯಾಷ್ ಡ್ರೈವಿಂಗ್ ಮಾಡಿ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದ್ದಾರೆ. ಪರಿಣಾಮ ಯುವಕನೊಬ್ಬ ಮೃತಪಟ್ಟಿರುವ ಘಟನೆ ಬೆಂಗಳೂರು ಹೊರವಲಯ ಆನೇಕಲ್‍ನಲ್ಲಿ ನಡೆದಿದೆ.
ಅವೇಡದೇನಹಳ್ಳಿ ನಿವಾಸಿ ಮುನಿರಾಜು ಮುನ್ನ (20) ಮೃತ ದುರ್ದೈವಿ. ಆನೇಕಲ್ ಅವೇಡೆದೇನಹಳ್ಳಿ ಗೇಟ್ ಬಳಿ ಈ ಘಟನೆ ನಡೆದಿದ್ದು, ಮೃತ ಮುನಿರಾಜು ಮುನ್ನ ಬ್ಯಾಗಡದೇನಹಳ್ಳಿ ಪಂಚಾಯ್ತಿಯಲ್ಲಿ ಕಂಪ್ಯೂಟರ್ ಆಪರೇಟರ್ ಆಗಿ ಕೆಲಸ ನಿರ್ವಹಿಸುತ್ತಿದ್ದನು. ಆನೇಕಲ್‍ನ ಅಲಯನ್ಸ್ ಕಾಲೇಜು ವಿದ್ಯಾರ್ಥಿಗಳು ಗಾಂಜಾ ಮತ್ತು ಕುಡಿದ ಮತ್ತಿನಲ್ಲಿ ಕಾರನ್ನು ವೇಗವಾಗಿ ಓಡಿಸಿದ್ದು, ಬೈಕಿನಲ್ಲಿ ಬರುತ್ತಿದ್ದ ಮುನ್ನಾಗೆ ಡಿಕ್ಕಿ ಹೊಡೆದಿದ್ದಾರೆ.
ತಕ್ಷಣ ಆತನನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮುನ್ನ ಸಾವನ್ನಪ್ಪಿದ್ದಾನೆ. ಇದರಿಂದ ಆಕ್ರೋಶಗೊಂಡ ಗ್ರಾಮಸ್ಥರು ಶವದ ಜೊತೆಗೆ ಕಾಲೇಜಿಗೆ ಮುತ್ತಿಗೆ ಹಾಕಿದ್ದರು. ಅಷ್ಟೇ ಅಲ್ಲದೆ ಕಾಲೇಜಿನ ಆವರಣದಲ್ಲಿ ನಿಲ್ಲಿಸಿದ್ದ ಕಾರಿನ ಗ್ಲಾಸ್‍ಗಳನ್ನು ಒಡೆದು ಆಕ್ರೋಶ ವ್ಯಕ್ತಪಡಿಸಿದ್ದರು.
ಪದೇ ಪದೇ ಕಾಲೇಜು ವಿದ್ಯಾರ್ಥಿಗಳಿಂದ ಇಂತಹ ಅಪಘಾತಗಳು ನಡೆಯುತ್ತಿದ್ದರೂ ಕಾಲೇಜು ಆಡಳಿತ ಮಂಡಳಿ ತಲೆ ಕೆಡಿಸಿಕೊಳ್ಳುತ್ತಿಲ್ಲ. ಹೀಗಾಗಿ ಅಲಯನ್ಸ್ ಕಾಲೇಜು ವಿದ್ಯಾರ್ಥಿಗಳ ರ‍್ಯಾಷ್ ಡ್ರೈವಿಂಗ್‍ಗೆ ಅನೇಕರು ಬಲಿಯಾಗಿದ್ದಾರೆ. ಇತ್ತ ಗಾಂಜಾ ಹಾಗೂ ಮದ್ಯದ ಅಮಲಿನಲ್ಲಿ ಅಪಘಾತ ಪ್ರಕರಣಗಳು ನಡೆಯುತ್ತಿದ್ದರೂ ಪೋಲಿಸ್ ಇಲಾಖೆ ಕಡಿವಾಣ ಹಾಕುತ್ತಿಲ್ಲ ಎಂದು ಕಾಲೇಜು ಮತ್ತು ಪೊಲೀಸರ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.