ಪೊಲೀಸರ ಪ್ರಶ್ನೆಗಳಿಗೆ ಗೀತಾ ವಿಷ್ಣು ನೀಡಿದ ಉತ್ತರ ಇಲ್ಲಿದೆ

Public TV
3 Min Read

ಬೆಂಗಳೂರು: ಜಯನಗರದಲ್ಲಿ ಕಾರು ಅಪಘಾತ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರಿಂದ ಬಂಧನಕ್ಕೆ ಒಳಗಾಗಿರುವ ಉದ್ಯಮಿಯ ಮೊಮ್ಮಗ ಗೀತಾವಿಷ್ಣು ಲಾಯರ್ ಜೊತೆ ತರಬೇತಿ ಪಡೆದು ಪ್ರಶ್ನೆಗಳಿಗೆ ಉತ್ತರ ನೀಡುತ್ತಿದ್ದಾನೆ ಎನ್ನುವ ಅನುಮಾನ ವ್ಯಕ್ತವಾಗಿದೆ.

ಕೋರಮಂಗಲದಲ್ಲಿ ಬಂಧನಕ್ಕೊಳಗಾದ ಬಳಿಕ ಗೀತಾ ವಿಷ್ಣುವನ್ನು ಮಧ್ಯರಾತ್ರಿ 1 ಗಂಟೆಗೆ ಸಿಸಿಬಿ ಕಚೇರಿಗೆ ಕರೆ ತಂದಿದ್ದಾರೆ. ಪೊಲೀಸರು ಪ್ರಾಥಮಿಕ ವಿಚಾರಣೆ ಮಾಡಲು ಪ್ರಶ್ನೆ ಕೇಳಿದ್ದಾರೆ. ಬಳಿಕ ವಿಷ್ಣುಗೆ ರಾತ್ರಿ ಕಛೇರಿಯ ಮೊದಲನೆ ಮಹಡಿಯಲ್ಲಿ ನಿದ್ದೆ ಮಾಡಲು ಅವಕಾಶನ್ನು ಕೊಡಲಾಗಿತ್ತು.

ಮಂಗಳವಾರ ರಾತ್ರಿ ಪೊಲೀಸರ ವಿಚಾರಣೆಗೆ ಒಪ್ಪಲು ಗೀತಾ ವಿಷ್ಣು ನಿರಾಕರಿಸಿದ್ದಾನೆ. ನಾಳೆ ಕಸ್ಟಡಿಗೆ ತಗೆದುಕೊಳ್ಳುತ್ತೀರಿ ಅಲ್ಲವೇ? ಅವಾಗ್ಲೇ ಉತ್ತರ ಕೊಡುತ್ತೇನೆ ಎಂದು ಹೇಳಿಕೆ ನೀಡಿದ್ದಾನೆ. ಅಪಘಾತ ಆಗಿದ್ದು ನಿಜ, ನಾನು ಡ್ರಿಂಕ್ಸ್ ಮಾಡಿದ್ದು ನಿಜ, ಆದರೆ ನಾನು ಕಾರು ಓಡಿಸುತ್ತಿರಲಿಲ್ಲ ಸಂತೋಷ್ ಕಾರನ್ನು ಓಡಿಸುತ್ತಿದ್ದನು. ಈ ವಿಷಯವನ್ನು ನಾನು ಟ್ರಾಫಿಕ್ ಪೊಲೀಸರ ಮುಂದೆಯೂ ಹೇಳಿದ್ದೇನೆ. ಟ್ರಾಫಿಕ್ ಪೊಲೀಸರು ಆಲ್ಕೋಮೀಟರ್‍ನಲ್ಲಿ ಪರ್ಸೆಂಟೇಜ್ ಚೆಕ್ ಮಾಡಿದ ಬಳಿಕ ನಾನು ಹೋಗಿದ್ದು. ಗಾಂಜಾ ಅದ್ಯಾವುದರ ಬಗ್ಗೆಯೂ ನನಗೆ ಗೊತ್ತಿಲ್ಲ ಆಮೇಲೆ ಹೇಳುತ್ತೆನೆ ಉಳಿದಿದ್ದನ್ನು ಎಂದು ತಿಳಿಸಿದ್ದಾನೆ.

ಗಾಂಜಾ ಬಗ್ಗೆ ಗೊತ್ತಿಲ್ಲ: ಗಾಂಜಾ ಬಗ್ಗೆ ನನಗೇನು ಗೊತ್ತಿಲ್ಲ, ಗಾಂಜಾ ನನ್ನ ಕಾರಲ್ಲಿ ಹೇಗೆ ಬಂತು ಎಂಬುದು ನನಗೆ ಗೊತ್ತಿಲ್ಲ, ನನ್ನ ಕಾರು ಅಪಘಾತವಾಗಿ ಬಲ ಭಾಗ ಸಂಪೂರ್ಣವಾಗಿ ಜಾಮ್ ಆಗಿತ್ತು. ಬಲಭಾಗದ ಡೋರ್ ಓಪನ್ ಮಾಡಲಿಕ್ಕೆ ಆಗುತ್ತಿರಲಿಲ್ಲ. ಗಾಂಜಾ ಸಿಕ್ಕಿರೋದು ಎಡಭಾಗದ ಡೋರ್‍ನ ವಾಟರ್ ಬಾಟಲ್ ಇಡುವ ಜಾಗದಲ್ಲಿ. ವಾಟರ್ ಬಾಟಲ್ ಇಡುವ ಜಾಗದಲ್ಲಿ ಗಾಂಜಾ ಪತ್ತೆಯಾಗಿದೆ ಅಂತ ಹೇಳ್ತಿದ್ದೀರಿ, ಯಾರೋ ಬೇರೆಯವರು ತಂದಿಟ್ಟಿರಬಹುದು. ನನಗೆ ಕುಡಿಯುವ ಅಭ್ಯಾಸ ಇದೆ, ಆದರೆ ಡ್ರಗ್ಸ್ ಅಭ್ಯಾಸ ಇಲ್ಲ ಕುಡಿದಿದ್ದನ್ನು ಪೊಲೀಸರು ಪತ್ತೆ ಮಾಡಿದ್ದಾರೆ. ಆಮೇಲೆ ನಮ್ಮ ತಂದೆ ಬಂದ ಬಳಿಕ ಅವರ ಜೊತೆಯಲ್ಲಿ ಆಸ್ಪತ್ರೆಗೆ ಕಳುಹಿಸಿದ್ದಾರೆ. ಮೊದಲೇ ಆ ಗಾಂಜಾದ ಪ್ಯಾಕೆಟ್ ಸಿಕ್ಕಿದ್ರೆ ನನ್ನ ಪೊಲೀಸರು ಬಿಡುತ್ತಿರಲಿಲ್ಲ ಎಂದು ತಿಳಿಸಿದ್ದಾನೆ.

ವಕೀಲರಿಂದ ತರಬೇತಿ: ಶರಣಾಗುವ ಮುನ್ನ ವಕೀಲರೊಂದಿಗೆ ಮಾತುಕತೆ ನಡೆಸಿದ್ದು, ಯಾವ ಪ್ರಶ್ನೆಗಳಿಗೆ ಹೇಗೆ ಉತ್ತರ ನೀಡಬೇಕು ಎಂದು ತಿಳಿದುಕೊಂಡು ಬಂದಿದ್ದಾನೆ ಎನ್ನುವ ಅನುಮಾನವನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ.

ವಿಷ್ಣು ಯಾರ್ಯಾರ ಜೊತೆಯಲ್ಲಿ ಕುಳಿತು ಪಾರ್ಟಿ ಮಾಡಿದ್ದಾನೆ ಎಂಬುದರ ಬಗ್ಗೆಯೂ ಮಾಹಿತಿ ಕಲೆ ಹಾಕಲಾಗಿದೆ. ಅಲ್ಲಿಯೂ ಒಂದಷ್ಟು ಗೊಂದಲದ ಹೇಳಿಕೆ ನೀಡಿದ್ದಾನೆ. ಸಿಸಿಬಿ ಅಧಿಕಾರಿಗಳು ವಿಷ್ಣು ಹೆಸರು ಹೇಳಿದವರಿಗೆಲ್ಲಾ ವಿಚಾರಣೆ ನಡೆಸಲಿದ್ದಾರೆ. ಈಗಾಗಲೇ ಜಯನಗರ ಪೊಲೀಸರು ರಕ್ತ ಮತ್ತು ಮೂತ್ರದ ಮಾದರಿ ಕಲೆ ಹಾಕಿದ್ದಾರೆ. ಎಫ್‍ಎಸ್‍ಎಲ್ ಗೆ ಮಾದರಿಗಳನ್ನು ಕಳುಹಿಸಿದ್ದಾರೆ. ಅದರ ಪೂರ್ಣ ವರದಿ ಬಂದಿಲ್ಲ, ಮತ್ತೆ ರಕ್ತ ಮತ್ತು ಮೂತ್ರದ ಮಾದರಿಯನ್ನು ಕಲೆ ಹಾಕುತ್ತಿಲ್ಲ ಎಂದು ಸಿಸಿಬಿ ಉನ್ನತ ಮೂಲಗಳು ಹೇಳಿವೆ.

ಗೀತಾವಿಷ್ಣು ಲೂಸ್ ಮೋಷನ್ ನಿಂದ  ಬಳಲುತ್ತಿದ್ದು, ಕಾಡುಗೋಡಿಯ ಸರ್ಕಾರಿ ಆಸ್ಪತ್ರೆಯಲ್ಲಿ ವೈದಕೀಯ ಚಿಕಿತ್ಸೆ ಕೊಡಿಸಿ ಮತ್ತೆ ವಿಚಾರಣೆ ನಡೆಸಿದ್ದಾರೆ. ಅಪಘಾತದ ವೇಳೆಯಲ್ಲಿ ಪ್ರಣಾಮ್ ದೇವರಾಜ್ ನನ್ನ ಜೊತೆ ಇದ್ದದ್ದು ನಿಜ ಎಂದು ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾನೆ.

ಉತ್ತರ ಸಿಕ್ಕಿಲ್ಲ: ಯಾರಿಂದ ಡ್ರಗ್ಸ್ ಬರುತ್ತೆ? ಯಾರ ಬಳಿಯಲ್ಲಿ ಡ್ರಗ್ಸ್ ಪಡೆದು ರೇವ್ ಪಾರ್ಟಿಯನ್ನು ಮಾಡ್ತೀಯಾ ಎಂಬಿತ್ಯಾದಿ ಪ್ರಶ್ನೆಗಳು ಗೀತಾ ವಿಷ್ಣುಗೆ ಕೇಳಿದ್ದಾರೆ. ಆದರೆ ಈ ಪ್ರಶ್ನೆಗಳಿಗೆ ಸರಿಯಾದ ಉತ್ತರವನ್ನು ನೀಡಲಿಲ್ಲ ಎಂದು ಪೊಲೀಸ್ ಮೂಲಗಳು ಮಾಹಿತಿ ನೀಡಿವೆ.

ವಿಚಾರಣೆ ವೇಳೆ ಡ್ರಗ್ಸ್ ಮೂಲ ಮತ್ತು ಡೀಲರ್ ಗಳ ಬಗ್ಗೆ ಮಾಹಿತಿ ನೀಡದೇ ಇದ್ದರೆ ಸುಳ್ಳು ಪತ್ತೆ ಪರೀಕ್ಷೆ ನಡೆಸಲು ಚಿಂತನೆ ನಡೆಸುತ್ತಿದ್ದಾರೆ. ಈ ಮೂಲಕ ಡ್ರಗ್ಸ್ ಕಿಂಗ್ ಪಿನ್‍ಪತ್ತೆ ಹಚ್ಚಲು ಪೊಲೀಸರು ಚಿಂತನೆ ನಡೆಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *