ಕೋಲಾರ: ಮಾಲೂರು ತಾಲೂಕಿನ ಸೀತನಾಯಕನಹಳ್ಳಿ ಗ್ರಾಮದ ಬಳಿ ಇಂದು ಬೆಳಂಬೆಳಗ್ಗೆ ಲಾರಿ ಮತ್ತು ನೀರಿನ ಟ್ಯಾಂಕರ್ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಓರ್ವ ಸಾವನ್ನಪ್ಪಿದ್ದು, ಮೂವರು ಗಾಯಗೊಂಡಿದ್ದಾರೆ.
ತಮಿಳುನಾಡು ಮೂಲದ ಪಳನಿ(38) ಸಾವನ್ನಪ್ಪಿದ ಲಾರಿ ಚಾಲಕ. ಪಳನಿ ಅವರನ್ನು ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಸಾವನ್ನಪ್ಪಿದ್ದಾರೆ. ತಮಿಳುನಾಡಿನಿಂದ ಬರುತ್ತಿದ್ದ ಲಾರಿ ಎದುರುಗಡೆ ಬರುತ್ತಿದ್ದ ನೀರಿನ ಟ್ಯಾಂಕರ್ ಗೆ ಡಿಕ್ಕಿ ಹೊಡೆದಿದೆ. ಅಪಘಾತದ ತೀವ್ರತೆಗೆ ಎರಡೂ ವಾಹನಗಳ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ. ಲಾರಿಯಲ್ಲಿದ್ದ ಓರ್ವ ಮತ್ತು ನೀರಿನ ಟ್ಯಾಂಕರ್ ನಲ್ಲಿದ್ದ ಇಬ್ಬರೂ ಗಾಯಗೊಂಡಿದ್ದಾರೆ.
ಬೆಳಗಿನ ಜಾವ ದಟ್ಟು ಮಂಜು ಕವಿದಿದ್ದರಿಂದ ಮತ್ತು ಚಾಲಕರ ನಿರ್ಲಕ್ಷ್ಯದಿಂದ ಅಪಘಾತ ಸಂಭವಿಸಿದೆ ಎನ್ನಲಾಗಿದೆ. ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡ ಮೂವರನ್ನು ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ. ಅಪಘಾತದಿಂದ ಮಾಲೂರು-ಹೊಸೂರು ರಸ್ತೆ ಸಂಚಾರ ಕೆಲ ಕಾಲ ಅಸ್ತವ್ಯಸ್ತಗೊಂಡಿತ್ತು.
ಸ್ಥಳಕ್ಕೆ ಮಾಲೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.