ರಾಯಚೂರು: ಜಿಲ್ಲೆಯ ಮಾನ್ವಿ ಪಟ್ಟಣದ ಹೊರವಲಯದ ಆಟೋನಗರ ಬಳಿ ಎರಡು ಕಾರುಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
35 ವರ್ಷದ ಸುರೇಶ್ ರೆಡ್ಡಿ ಹಾಗೂ ಗಂಗಾಧರ್ ಸಾವನ್ನಪ್ಪಿರುವ ದುರ್ದೈವಿಗಳು. ಅಪಘಾತದಲ್ಲಿ ಮೂರು ಜನರಿಗೆ ಗಾಯಗಳಾಗಿವೆ. ಬೆಂಗಳೂರಿನಿಂದ ಮಂತ್ರಾಲಯಕ್ಕೆ ಹೊರಟಿದ್ದ ಇನ್ನೋವಾ ಕಾರು ಹಾಗೂ ರಾಯಚೂರಿನಿಂದ ಮಾನ್ವಿಗೆ ಹೊರಟಿದ್ದ ಸ್ವಿಫ್ಟ್ ಕಾರಿನ ನಡುವೆ ಈ ಅಪಘಾತ ಸಂಭವಿಸಿದೆ.
ಸ್ವಿಫ್ಟ್ ಕಾರಿನಲ್ಲಿದ್ದ ಗಣದಿನ್ನಿಯ ವಕೀಲ ಸುರೇಶ್ ರೆಡ್ಡಿ ಹಾಗೂ ಗುತ್ತಿಗೆದಾರ ಗಂಗಾಧರ್ ಸಾವನ್ನಪ್ಪಿದ್ದಾರೆ. ಇನ್ನೋವಾ ಕಾರಿನಲ್ಲಿದ್ದವರಿಗೆ ಗಾಯಗಳಾಗಿದ್ದು ಮಾನ್ವಿ ಹಾಗೂ ರಾಯಚೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಬೆಳಗಿನ ಜಾವ ಅತೀ ವೇಗದ ವಾಹನ ಚಾಲನೆ ಅಪಘಾತಕ್ಕೆ ಕಾರಣ ಎನ್ನಲಾಗಿದೆ. ಮಾನ್ವಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪ್ರಕರಣ ದಾಖಲಾಗಿದೆ.