ಅಭಿಷೇಕ್‌ ಶರ್ಮಾ ಹೊಡೆದ ಸಿಕ್ಸ್‌ಗೆ ಕಾರಿನ ಗ್ಲಾಸ್‌ ಪುಡಿ.. ಪುಡಿ.. – 5 ಲಕ್ಷ ನಷ್ಟ

Public TV
2 Min Read

ಲಕ್ನೋ: ಆರ್‌ಸಿಬಿ (Royal Challengers Bengaluru) ವಿರುದ್ಧದ ಪಂದ್ಯದಲ್ಲಿ ಆರಂಭಿಕನಾಗಿ ಕಣಕ್ಕಿಳಿದ ಸನ್‌ ರೈಸರ್ಸ್‌ ಹೈದರಾಬಾದ್‌ ತಂಡದ ಆಟಗಾರ ಅಭಿಷೇಕ್‌ ಶರ್ಮಾ (Abhishek Sharma) ಎಂದಿನಂತೆ ಸ್ಫೋಟಕ ಪ್ರದರ್ಶನವನ್ನೇ ನೀಡಿದರು. ಈ ವೇಳೆ ಅಭಿ ಹೊಡೆದ ಸಿಕ್ಸ್‌ವೊಂದು ಪ್ರಮೋಷನ್‌ಗಾಗಿ ನಿಲ್ಲಿಸಿದ್ದ ಕಾರಿನ ಗ್ಲಾಸ್‌ಗೆ ಬಡಿದು ಲಕ್ಷಾಂತರ ರೂಪಾಯಿ ನಷ್ಟವಾಗಿದೆ.

ಆರಂಭಿಕನಾಗಿ ಕಣಕ್ಕಿಳಿದಿದ್ದ ಶರ್ಮಾ ಸಿಕ್ಸರ್‌, ಬೌಂಡರಿ ಬಾರಿಸಲು ಮುಂದಾಗಿದ್ದರು. 17 ಎಸೆತಗಳಲ್ಲಿ 34 ರನ್‌ ಸಿಡಿಸಿದರು. ಅಭಿಷೇಕ್ ಶರ್ಮಾ ಸಿಡಿಸಿದ ಒಂದು ಸಿಕ್ಸರ್ ಕ್ರೀಡಾಂಗಣದಲ್ಲಿ ನಿಲ್ಲಿಸಿದ್ದ ಟಾಟಾ ಕಾರಿನ ಗಾಜನ್ನು ಒಡೆದಿದೆ. ಇದರಿಂದ ಐಪಿಎಲ್‌ ಪ್ರಾಯೋಜಕ ಸಂಸ್ಥೆಗೆ 5 ಲಕ್ಷ ರೂ. ನಷ್ಟವಾಗಿದೆ. ಇದನ್ನೂ ಓದಿ: ಇಶಾನ್‌ ಕಿಶನ್‌ ಸಿಡಿಲಬ್ಬರದ ಬ್ಯಾಟಿಂಗ್‌ – ಆರ್‌ಸಿಬಿ ಗೆಲುವಿಗೆ 232 ರನ್‌ಗಳ ಕಠಿಣ ಗುರಿ

ಇನ್ನಿಂಗ್ಸ್‌ನ 2ನೇ ಓವರ್‌ನಲ್ಲಿ ಆರ್‌ಸಿಬಿ ತಂಡದ ಇಂದಿನ ಪಂದ್ಯದ ನಾಯಕ ಜೀತೇಶ್ ಶರ್ಮಾ ಅವರು ಭುವನೇಶ್ವರ್ ಕುಮಾರ್ ಅವರನ್ನು ಬೌಲಿಂಗ್ ಮಾಡಲು ಕರೆತಂದಾಗ ಈ ಘಟನೆ ಸಂಭವಿಸಿತು.

ಆ ಓವರ್‌ನ 5ನೇ ಎಸೆತದಲ್ಲಿ ಅಭಿಷೇಕ್ ಮಿಡ್‌ವಿಕೆಟ್ ಕಡೆಗೆ ಭರ್ಜರಿ ಸಿಕ್ಸರ್ ಬಾರಿಸಿದರು. ಚೆಂಡು ನೇರವಾಗಿ ಐಪಿಎಲ್ 2025 ಲೀಗ್‌ನ ಪ್ರಾಯೋಜಕರಾದ ಟಾಟಾ ಅವರ ಕಾರಿನ ಮೇಲೆ ಬಿದ್ದಿತು. ಇದರಿಂದಾಗಿ ಕಾರಿನ ಮುಂಭಾಗದ ಗಾಜು ಬಿರುಕು ಬಿಟ್ಟಿದೆ. ಇದನ್ನೂ ಓದಿ: ಮ್ಯಾಥ್ಯೂ ಫೋರ್ಡ್ ಸ್ಫೋಟಕ ಫಿಫ್ಟಿ – ಎಬಿಡಿ ವಿಶ್ವದಾಖಲೆ ಸರಿಗಟ್ಟಿದ ವಿಂಡೀಸ್‌ ಬ್ಯಾಟರ್

5 ಲಕ್ಷ ರೂ. ದೇಣಿಗೆ ನೀಡಲಿದೆ
ಐಪಿಎಲ್ 2025 ಪ್ರಾರಂಭವಾಗುವ ಮೊದಲು, ಪಂದ್ಯದ ಸಮಯದಲ್ಲಿ ಬ್ಯಾಟ್ಸ್‌ಮನ್ ಕಾರಿನ ಮೇಲೆ ನೇರವಾಗಿ ಶಾಟ್ ಹೊಡೆದರೆ ಹಣವನ್ನು ದೇಣಿಗೆ ನೀಡುವುದಾಗಿ ಟಾಟಾ ಘೋಷಿಸಿತ್ತು. ಒಂದು ವೇಳೆ ಚೆಂಡು ಕಾರಿಗೆ ತಗುಲಿದರೆ, ಟಾಟಾ ಸಂಸ್ಥೆಯು 5 ಲಕ್ಷ ರೂ. ಗಳನ್ನು ದೇಣಿಗೆ ನೀಡುತ್ತದೆ. ಈ ಮೊತ್ತವನ್ನು ಗ್ರಾಮೀಣ ಕ್ರಿಕೆಟ್ ಅಭಿವೃದ್ಧಿಗಾಗಿ ಟಾಟಾ ಕಾರ್ ದೇಣಿಗೆ ನೀಡಲಿದೆ.

ಇನ್ನೂ ಆರ್‌ಸಿಬಿ ವಿರುದ್ಧದ ಈ ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಹೈದರಾಬಾದ್‌ 20 ಓವರ್‌ಗಳಲ್ಲಿ 6 ವಿಕೆಟ್‌ ನಷ್ಟಕ್ಕೆ 231 ರನ್‌ ಸಿಡಿಸಿದೆ.

Share This Article