ಸ್ಫೋಟಕ ಶತಕ – ಅಭಿಷೇಕ್‌ ಶರ್ಮಾ ಬೆಂಕಿ ಬ್ಯಾಟಿಂಗ್‌ಗೆ ಎರಡೆರಡು ದಾಖಲೆ ಉಡೀಸ್‌

Public TV
2 Min Read

ಮುಂಬೈ: ಇಂಗ್ಲೆಂಡ್‌ ವಿರುದ್ಧ ನಡೆಯುತ್ತಿರುವ 5 ಪಂದ್ಯಗಳ ಟಿ20 ಸರಣಿಯ ಅಂತಿಮ ಪಂದ್ಯದಲ್ಲಿ ಟೀಂ ಇಂಡಿಯಾ ಆಟಗಾರ ಅಭಿಷೇಕ್‌ ಶರ್ಮಾ ಸ್ಫೋಟಕ ಶತಕ ಸಿಡಿಸಿ ಎರಡೆರಡು ವಿಶೇಷ ದಾಖಲೆ ಬರೆದಿದ್ದಾರೆ.

ಟೀಂ ಇಂಡಿಯಾ ಪರ ವೇಗದ ಅರ್ಧಶತಕ ಹಾಗೂ ವೇಗದ ಶತಕ ಸಿಡಿಸಿದ 2ನೇ ಭಾರತೀಯ ಆಟಗಾರ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ. ಸದ್ಯ 244.89 ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟಿಂಗ್‌ ಮಾಡುತ್ತಿರುವ ಅಭಿಷೇಕ್‌ ಶರ್ಮಾ 49 ಎಸೆತಗಳಲ್ಲಿ 120 ರನ್‌ (10 ಸಿಕ್ಸರ್‌, 6 ಬೌಂಡರಿ) ಸಿಡಿಸಿ ಕ್ರೀಸ್‌ನಲ್ಲಿದ್ದಾರೆ.

ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಟೀಂ ಇಂಡಿಯಾ ಆರಂಭದಿಂದಲೇ ಆಂಗ್ಲರ ಪಡೆಯನ್ನು ಹಣ್ಣುಗಾಯಿ ನೀರುಗಾಯಿ ಮಾಡಿತು.

2ನೇ ವೇಗದ ಅರ್ಧಶತಕ:
ಮೊದಲ ಓವರ್‌ನಲ್ಲಿ 16 ರನ್‌ ಚಚ್ಚಿ ಸಂಜು ಸ್ಯಾಮ್ಸನ್‌ ಔಟಾಗುತ್ತಿದ್ದಂತೆ ಅಭಿಷೇಕ್‌ ಶರ್ಮಾ ಸ್ಪೋಟಕ ಇನ್ನಿಂಗ್ಸ್‌ ಕಟ್ಟಲು ಮುಂದಾದರು. ಬ್ಯಾಟಿಂಗ್‌ ಸ್ನೇಹಿಯಾದ ವಾಂಖೆಡೆ ಪಿಚ್‌ನಲ್ಲಿ ಸಿಕ್ಸರ್‌, ಬೌಂಡರಿಗಳ ಮಳೆ ಸುರಿಸಿದ ಅಭಿ, ಕೇವಲ 17 ಎಸೆತಗಳಲ್ಲೇ 3 ಬೌಂಡರಿ, 5 ಸಿಕ್ಸರ್‌ಗಳೊಂದಿಗೆ ವೇಗದ ಅರ್ಧಶತಕ ಸಿಡಿಸಿದರು. ಇದು ಟೀಂ ಇಂಡಿಯಾ ಪರ ದಾಖಲಾದ 2ನೇ ವೇಗದ ಅರ್ಧಶತಕವಾಗಿದೆ.

2007ರಲ್ಲಿ ಇಂಗ್ಲೆಂಡ್‌ ವಿರುದ್ಧವೇ ಟೀಂ ಇಂಡಿಯಾ ಮಾಜಿ ಆಟಗಾರ ಯುವರಾಜ್‌ ಸಿಂಗ್‌ ಕೇವಲ 12 ಎಸೆತಗಳಲ್ಲಿ ಸ್ಫೋಟಕ ಅರ್ಧಶತಕ ಸಿಡಿಸಿದ್ದು, ಈವರೆಗಿನ ಸಾರ್ವಕಾಲಿಕ ದಾಖಲೆಯಾಗಿದೆ.

ಸ್ಫೋಟಕ ಶತಕ ಸಿಡಿಸಿದ 2ನೇ ಭಾರತೀಯ:
ಇನ್ನೂ ಕೇವಲ 37 ಎಸೆತಗಳಲ್ಲೇ 10 ಸಿಕ್ಸರ್‌, 5 ಬೌಂಡರಿಯೊಂದಿಗೆ ವೇಗದ ಶತಕ ದಾಖಲಿಸಿದ ಅಭಿಷೇಕ್‌ ಶರ್ಮಾ ಟೀಂ ಇಂಡಿಯಾ ಪರ ವೇಗದ ಶತಕ ಸಿಡಿಸಿದ 2ನೇ ಭಾರತೀಯ ಎಂಬ ಖ್ಯಾತಿಗೂ ಪಾತ್ರರಾದರು. 2017ರಲ್ಲಿ ಶ್ರೀಲಂಕಾ ವಿರುದ್ಧ ರೋಹಿತ್‌ ಶರ್ಮಾ ಕೇವಲ 35 ಎಸೆತಗಳಲ್ಲಿ ಶತಕ ಸಿಡಿಸಿದ್ದು, ಭಾರತದ ಪಾಲಿನ ಈವರೆಗಿನ ದಾಖಲೆಯಾಗಿದೆ.

ಪವರ್‌ ಪ್ಲೇನಲ್ಲೂ ದಾಖಲೆ:
ಇಂಗ್ಲೆಂಡ್‌ ಬೌಲರ್‌ಗಳನ್ನು ಹಿಗ್ಗಾಮುಗ್ಗಾ ಚೆಂಡಾಡಿದ ಭಾರತೀಯ ಆಟಗಾರರು ಮೊದಲ 6 ಓವರ್‌ಗಳಲ್ಲಿ 95 ರನ್‌ ಸಿಡಿಸಿದರು. ಈ ಮೂಲಕ ಪವರ್‌ಪ್ಲೇನಲ್ಲಿ ಟೀಂ ಇಂಡಿಯಾ ಪರ ಅತಿಹೆಚ್ಚು ರನ್‌ ಗಳಿಸಿದ ದಾಖಲೆ ಇದಾಯಿತು.

Share This Article