ಆರಗ ಜ್ಞಾನೇಂದ್ರ ರಾಜೀನಾಮೆ ನೀಡಬೇಕು – ರಾಜ್ಯಪಾಲರಿಗೆ ಎಎಪಿ ಮನವಿ

Public TV
2 Min Read

ಬೆಂಗಳೂರು: ಪಿಎಸ್‌ಐ ನೇಮಕಾತಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಎಎಪಿ ರಾಜಭವನದ ಕದ ತಟ್ಟಿದೆ. ಗೃಹ ಸಚಿವ ಆರಗ ಜ್ಞಾನೇಂದ್ರ ರಾಜೀನಾಮೆಗೆ ಎಎಪಿ ಆಗ್ರಹಿಸಿದ್ದು, ಎಎಪಿ ನಿಯೋಗ ರಾಜ್ಯಪಾಲರಿಗೆ ಮನವಿ ಸಲ್ಲಿಸಿದೆ.

ಎಎಪಿ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ, ಎಎಪಿ ನಾಯಕ ಭಾಸ್ಕರ್ ರಾವ್ ನೇತೃತ್ವದಲ್ಲಿ ರಾಜಭವನಕ್ಕೆ ತೆರಳಿದ್ದ ಎಎಪಿ ನಿಯೋಗ, ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಭೇಟಿ ಮಾಡಿತ್ತು. ಪಿಎಸ್‌ಐ ಪರೀಕ್ಷಾ ಅಕ್ರಮಕ್ಕೆ ಗೃಹ ಸಚಿವರ ವೈಫಲ್ಯವೇ ಕಾರಣ ಎಂದು ಆರೋಪಿಸಿ, ಸಂಪುಟದಿಂದ ಗೃಹ ಸಚಿವ ಅರಗ ಜ್ಞಾನೇಂದ್ರರನ್ನು ವಜಾ ಮಾಡಬೇಕು ಎಂದು ಆಪ್ ಆಗ್ರಹಿಸಿದೆ. ಇದನ್ನೂ ಓದಿ: ದಿವ್ಯಾ ಹಾಗರಗಿ ಭೇಟಿಯಾಗಿದ್ದು ನಿಜ, ನನಗೂ ನೋಟಿಸ್ ಕೊಡಲಿ: ಡಿ.ಕೆ ಶಿವಕುಮಾರ್

ರಾಜ್ಯಪಾಲರ ಭೇಟಿ ಬಳಿಕ ಮಾತನಾಡಿದ ಎಎಪಿ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ, ಪಿಎಸ್‌ಐ ಪರೀಕ್ಷಾ ಅಕ್ರಮದ ಬಗ್ಗೆ ರಾಜ್ಯಪಾಲರಿಗೆ ಮಧ್ಯಪ್ರವೇಶ ಕೋರಿದ್ದೇವೆ. ಗೃಹ ಸಚಿವ ಆರಗ ಜ್ಞಾನೇಂದ್ರರನ್ನು ವಜಾ ಮಾಡಿ, ಸಾಮರ್ಥ್ಯ ಇರುವವರಿಗೆ ಗೃಹ ಸಚಿವರನ್ನಾಗಿ ಮಾಡಿ ಎಂದು ಮನವಿ ಮಾಡಿದ್ದೇವೆ. ಈ ತನಿಖೆ ಕಾಲ ಮಿತಿಯೊಳಗೆ ಮುಗಿಸಬೇಕು. ಬಿಜೆಪಿ ಕಾರ್ಯಕರ್ತೆಯೇ ಇದರಲ್ಲಿ ಭಾಗಿಯಾಗಿದ್ದಾರೆ. ಹೀಗಾಗಿ ಸರ್ಕಾರದ ಯಾವುದೇ ಪ್ರಭಾವ ಬೀರದೆ, ತನಿಖೆ ಮಾಡಬೇಕು ಎಂದು ಆಗ್ರಹಿಸಿರುವುದಾಗಿ ಪೃಥ್ವಿ ರೆಡ್ಡಿ ಹೇಳಿದರು.

ಈ ವೇಳೆ ಎಎಪಿ ನಾಯಕ ಭಾಸ್ಕರ್ ರಾವ್ ಮಾತನಾಡಿ, ತನಿಖೆ ಮುಗಿಯುವವರೆಗೂ ಕಾಯದೇ ವಿದ್ಯಾರ್ಥಿಗಳಿಗೆ ಮರು ಪರೀಕ್ಷೆ ಮಾಡಿಸಬೇಕು. ದಿವ್ಯಾ ಹಾಗರಗಿ ಈ ಪ್ರಕರಣದ ಆರೋಪಿಯಾಗಿದ್ದಾರೆ. ಆದರೆ ಇನ್ನೂ ಅವರ ಬಂಧನ ಆಗಿಲ್ಲ. ಇದನ್ನೆಲ್ಲಾ ನೋಡುತ್ತಿದ್ದರೆ, ಈ ಪ್ರಕರಣದಲ್ಲಿ ಸರ್ಕಾರದ ಪ್ರಭಾವ ಇದೆ ಎಂಬ ಸಂಶಯ ಮೂಡುತ್ತಿದೆ ಎಂದರು. ಇದನ್ನೂ ಓದಿ: PSI ನೇಮಕಾತಿಯಲ್ಲಿ ಅಕ್ರಮː ಪ್ರಮುಖ ಆರೋಪಿ ದಿವ್ಯಾ ಹಾಗರಗಿ – ಡಿಕೆಶಿ ಜೊತೆಗಿರುವ ಫೋಟೋ ವೈರಲ್

ಹಿಂದೆ ಈ ಪರೀಕ್ಷೆಯನ್ನು ನಮ್ಮ ಸಹಪಾಠಿಗಳು ಅತ್ಯಂತ ಪಾರದರ್ಶಕತೆಯಿಂದ ಮಾಡುತ್ತಿದ್ದರು. ಆದರೆ ಈಗ ಪಾರದರ್ಶಕತೆ ಕಳೆದುಕೊಂಡಿದೆ. ಸರ್ಕಾರ ನಂಬಿದ ಯುವಕರು ಮೋಸ ಹೋಗಿದ್ದಾರೆ. ತನಿಖೆಯ ಪಾಡಿಗೆ ತನಿಖೆ ನಡೆಯಲಿ. ಆದರೆ ಅಲ್ಲಿವರೆಗೂ ಕಾಯದೇ ಮರು ಪರೀಕ್ಷೆಗೆ ಅವಕಾಶ ಮಾಡಿಕೊಡಬೇಕು. ಗೃಹ ಸಚಿವರಿಗೆ ಅನುಭವದ ಕೊರತೆ ಇದೆ ಎಂದು ಭಾಸ್ಕರ್ ರಾವ್ ವಾಗ್ದಾಳಿ ನಡೆಸಿದರು.

Share This Article
Leave a Comment

Leave a Reply

Your email address will not be published. Required fields are marked *