ಹಲ್ಲೆ ಪ್ರಕರಣ – ಎಎಪಿ ಶಾಸಕನಿಗೆ 6 ತಿಂಗಳು ಜೈಲು ಶಿಕ್ಷೆ

Public TV
2 Min Read

ನವದೆಹಲಿ: ವ್ಯಕ್ತಿಯ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಆಮ್ ಆದ್ಮಿ ಪಕ್ಷದ ಶಾಸಕ ಸೋಮ್ ದತ್ ಅವರಿಗೆ ಆರು ತಿಂಗಳ ಜೈಲು ಶಿಕ್ಷೆ ಹಾಗೂ 2 ಲಕ್ಷ ರೂ. ದಂಡ ವಿಧಿಸಿ ದೆಹಲಿ ಕೋರ್ಟ್ ಆದೇಶ ಹೊರಡಿಸಿದೆ.

ಸೋಮ್ ದತ್ ದಹಲಿಯ ಸದರ್ ಬಜಾರ್ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದು, ಹಾಲಿ ಎಎಪಿ ಶಾಸಕರನ್ನು ಶಿಕ್ಷೆಗೆ ಗುರಿಪಡಿಸಿರುವುದರ ಪೈಕಿ ಇದು ವಾರದಲ್ಲಿ ನಡೆದ ಎರಡನೆಯ ಪ್ರಕರಣವಾಗಿದೆ. ಈ ಹಿಂದೆ ಮತದಾನಕ್ಕೆ ಅಡ್ಡಿ ಪಡಿಸಿದ ಆರೋಪದ ಸಂಬಂಧ ಎಎಪಿ ಶಾಸಕ ಮನೋಜ್ ಕುಮಾರ್ ಅವರಿಗೆ ಮೂರು ತಿಂಗಳು ಶಿಕ್ಷೆ ವಿಧಿಸಿತ್ತು.

ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಸಮರ್ ವಿಶಾಲ್ ಅವರು ಜೂನ್ 29ರಂದು ಸೋಮ್ ದತ್ ಮೇಲಿನ ಆರೋಪ ಸಾಬೀತಾಗಿ ದೋಷಿ ಎಂದು ತೀರ್ಪು ನೀಡಿದ್ದರು.

2015ರ ಜನವರಿಯಲ್ಲಿ ಮಾಜಿ ಶಾಸಕರಾಗಿದ್ದ ಸೋಮ್ ದತ್ ಬೇಸ್ ಬಾಲ್ ಬ್ಯಾಟ್‍ನಿಂದ ದೂರುದಾರರಾದ ಸಂಜೀವ್ ರಾಣಾ ಮೇಲೆ ಹಲ್ಲೆ ನಡೆಸಿದ್ದರು.

ಸಂಜೀವ್ ರಾಣಾ ಅವರು ದೂರಿನಲ್ಲಿ, 2015ರ ಜನವರಿಯಲ್ಲಿ ಸೋಮ್ ದತ್ ಹಾಗೂ ಇತರೆ 50-60 ಜನ ಗುಲಾಬಿ ಬಾಗ್‍ನ ನಮ್ಮ ಫ್ಲ್ಯಾಟ್‍ಗೆ ಆಗಮಿಸಿ ಪದೆ ಪದೇ ಮನೆಯ ಡೋರ್‍ನ ಬೆಲ್ ಮಾಡಿದರು. ಬೆಲ್ ಮಾಡಿದ್ದನ್ನು ಪ್ರಶ್ನಿಸಿದ್ದಕ್ಕೆ ದತ್ ಬೇಸ್ ಬಾಲ್ ಬ್ಯಾಟ್‍ನಿಂದ ಕಾಲಿಗೆ ಹೊಡೆದು ಹಲ್ಲೆ ಮಾಡಿದ್ದಾರೆ. ಸೋಮ್ ದತ್‍ನ ಜೊತೆಗಿದ್ದ ನನ್ನನ್ನು ರಸ್ತೆಗೆ ಎಳೆದು ಮುಷ್ಠಿಯಿಂದ ಗುದ್ದಿ, ಒದ್ದಿದ್ದಾರೆ ನಂತರ ನಾನು ಪ್ರಜ್ಞಾಹೀನನಾಗಿದ್ದೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದರು.

ಕೋರ್ಟ್ ಮುಂದೆ ವಾದ ಮಂಡಿಸುವ ವೇಳೆ ದತ್, ರಾಜಕೀಯ ದುರುದ್ದೇಶದಿಂದ ನನ್ನ ಮೇಲೆ ದೂರು ನೀಡಿದ್ದಾರೆ. ರಾಣಾ ಬಿಜೆಪಿ ಸದಸ್ಯರಾಗಿದ್ದು, ವಿಧಾನಸಭೆ ಚುನಾವಣೆಗೆ ನನಗೆ ಟಿಕೆಟ್ ತಪ್ಪಿಸಲು ಈ ರೀತಿ ಷಡ್ಯಂತ್ರ ನಡೆಸಿದ್ದಾರೆ ಎಂದು ಆರೋಪಿಸಿದ್ದರು.

ದತ್ ಆರೋಪಕ್ಕೆ ರಾಣಾ ಅವರು, ನಾನು ಯಾವುದೇ ರಾಜಕೀಯ ಪಕ್ಷದ ಜೊತೆ ಗುರುತಿಸಿಕೊಂಡಿಲ್ಲ ಎಂದಿದ್ದಾರೆ. ಪ್ರಕರಣಕ್ಕೆ ಸಾಕ್ಷ್ಯ ನುಡಿದ ಸುನಿಲ್ ಅವರು ಈ ಕುರಿತು ಹೇಳಿಕೆ ನೀಡಿ, ಸೋಮ್ ದತ್ ಬೇಸ್ ಬಾಲ್‍ನ ಬ್ಯಾಟ್ ಹಿಡಿದು ರಾಣಾ ಅವರ ಕಾಲಿಗೆ ಹೊಡೆದಿದ್ದನ್ನು ನೋಡಿದ್ದೇನೆ ಎಂದು ತಿಳಿಸಿದ್ದಾರೆ.

2015ರ ಜನವರಿ 10 ರಂದು ನಡೆದ ಘಟನೆಯ ಬಗ್ಗೆ ಯಾವುದೇ ಅನುಮಾನವಿಲ್ಲ. ಅಂದು ರಾತ್ರಿ 8 ಗಂಟೆಯ ವೇಳೆ ದತ್ 50 ಮಂದಿ ಬೆಂಬಲಿಗರ ಜೊತೆ ಫ್ಲ್ಯಾಟ್ ನಂಬರ್ 13ಕ್ಕೆ ತೆರಳಿ ಸಂತ್ರಸ್ತನ ಮೇಲೆ ಹಲ್ಲೆ ನಡೆಸಿದೆ ವಿಚಾರಣೆ ವೇಳೆ ಸಾಬೀತಾಗಿದೆ ಎಂದು ಕೋರ್ಟ್ ತನ್ನ ಆದೇಶದಲ್ಲಿ ಹೇಳಿದೆ.

Share This Article
Leave a Comment

Leave a Reply

Your email address will not be published. Required fields are marked *