ಉಪವಾಸ ಸತ್ಯಾಗ್ರಹದ ವೇಳೆ ಹದಗೆಟ್ಟ ಆರೋಗ್ಯ – ಆಪ್‌ ಸಚಿವೆ ಅತಿಶಿ ಆಸ್ಪತ್ರೆಗೆ ದಾಖಲು

Public TV
2 Min Read

ನವದೆಹಲಿ: ಸಮರ್ಪಕ ನೀರಿನ ಪೂರೈಕೆಗೆ ಆಗ್ರಹಿಸಿ ಅನಿರ್ದಿಷ್ಟಾವಧಿಗೆ ಉಪವಾಸ ಸತ್ಯಾಗ್ರಹ (Hunger Strike0 ಆರಂಭಿಸಿರುವ ಸಚಿವೆ ಅತಿಶಿ (Minister Atishi) ಅವರ ಆರೋಗ್ಯ ಸ್ಥಿತಿ ಹದಗೆಟ್ಟಿದ್ದು, ಮಂಗಳವಾರ ನಸುಕಿನ ಜಾವ ಅವರನ್ನ ಆಸ್ಪತ್ರೆಗೆ ದಾಖಲಿಸಲಾಗಿದೆ.

ಇಂದು (ಮಂಗಳವಾರ) ಮುಂಜಾನೆ ಅತಿಶಿ ಅವರನ್ನು ರಾಷ್ಟ್ರ ರಾಜಧಾನಿಯ ಲೋಕನಾಯಕ ಜೈ ಪ್ರಕಾಶ್ (LNJP) ಆಸ್ಪತ್ರೆಗೆ ದಾಖಲಿಸಲಾಗಿದೆ. ಅತಿಶಿ ಅವರ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಮಂಗಳವಾರ 5ನೇ ದಿನಕ್ಕೆ ಕಾಲಿಟ್ಟಿದೆ. ಹರಿಯಾಣ ದೆಹಲಿಯ ಪಾಲಿನ ನೀರನ್ನು ಬಿಡುಗಡೆ ಮಾಡುತ್ತಿಲ್ಲ ಎಂದು ಅವರು ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ.

ವೈದರ ಸಲಹೆ ತಿರಸ್ಕಾರ:
ಉಪವಾಸ ಸತ್ಯಾಗ್ರಹ ಹಿನ್ನೆಲೆಯಲ್ಲಿ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ವೈದ್ಯರು ಸಲಹೆ ನೀಡಿದ್ದರು. ಆದರೂ ವೈದ್ಯರ ಸಲಹೆ ತಿರಸ್ಕರಿಸಿದ ಸಚಿವೆ ಅತಿಶಿ ಆರೋಗ್ಯ (Health) ಹದಗೆಟ್ಟಿದ್ದರೂ, ಹರಿಯಾಣವು (Haryana) ದೆಹಲಿಯ ನ್ಯಾಯಯುತವಾದ ನೀರನ್ನು (Delhi Water Crisis) ಬಿಡುಗಡೆ ಮಾಡುವವರೆಗೆ ಅನಿರ್ದಿಷ್ಟ ಉಪವಾಸ ಮುಂದುವರೆಸುವುದಾಗಿ ಪ್ರತಿಜ್ಞೆ ಮಾಡಿದ್ದರು. ನನ್ನ ದೇಹವು ಎಷ್ಟೇ ನರಳಿದರೂ ಹರಿಯಾಣ ನೀರು ಬಿಡುವವರೆಗೆ ನಾನು ಉಪವಾಸ ಮುಂದುವರಿಸುತ್ತೇನೆ ಎಂದು ಅತಿಶಿ ಕಳೆದ ಒಂದು ದಿನದ ಹಿಂದೆಯಷ್ಟೇ ಕೂಗಿ ಹೇಳಿದ್ದರು.

ಈ ನಡುವೆ ದೆಹಲಿ ಕ್ಯಾಬಿನೆಟ್ ಮಂತ್ರಿಗಳು ಜಂಗ್ಪುರದ ಉಪವಾಸ ಸತ್ಯಾಗ್ರಹ ಸ್ಥಳದಲ್ಲಿ ಸಭೆ ನಡೆಸಿದ್ದರು ಮತ್ತು ಪರಿಹಾರ ಕೋರಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆಯಲು ನಿರ್ಧರಿಸಿದ್ದರು. ಎಎಪಿ ಅತಿಶಿ ಅವರ ಉಪವಾಸ ಬೆಂಬಲಿಸಿ ಕ್ಯಾಂಡಲ್‌ಲೈಟ್ ಮೆರವಣಿಗೆ ಮಾಡಲು ಘೋಷಿಸಲಾಗಿದೆ.

ಬೇಡಿಕೆಯೇನು?
ರಾಷ್ಟ್ರ ರಾಜಧಾನಿಗೆ ಸಮರ್ಪಕ ನೀರಿನ ಪೂರೈಸುವಂತೆ ಆಗ್ರಹಿಸಿ ಇದೇ ತಿಂಗಳ ಜೂನ್‌ 22ರಂದು ಸಚಿವೆ ಅತಿಶಿ ಉಪವಾಸ ಸತ್ಯಾಗ್ರಹ ಆರಂಭಿಸಿದ್ದರು. ದೆಹಲಿಗೆ ಒಟ್ಟು 1005 MGD ನೀರಿನ ಅಗತ್ಯವಿದೆ, ಅದರಲ್ಲಿ 613 MGD ಹರಿಯಾಣದ ಮೂಲವಾಗಿದೆ. ಕಳೆದ ಕೆಲ ವಾರಗಳಲ್ಲಿ ಈ ಮಟ್ಟದ ನೀರಿನ ಪೂರೈಕೆಯು ಗಣನೀಯವಾಗಿ ಕಡಿಮೆಯಾಗಿದೆ. ಕೇವಲ 513 MGD ನೀರನ್ನು ಬಿಡುಗಡೆ ಮಾಡಲಾಗುತ್ತಿದೆ. ಒಂದು MGD ನೀರು 28,500 ಜನರ ಬಳಕೆಗೆ ಬರಲಿದೆ. ಹರಿಯಾಣ 100 MGD ಕಡಿಮೆ ನೀರನ್ನು ನೀಡಿದರೆ 28 ಲಕ್ಷಕ್ಕೂ ಹೆಚ್ಚು ಜನರಿಗೆ ದಿನದ ನೀರಿನ ಕೊರತೆಯಾಗಲಿದೆ ಹಾಗಾಗಿ ಸಮರ್ಪಕವಾಗಿ ನೀರು ಪೂರೈಕೆ ಆಗಬೇಕು ಎಂಬುದು ಅವರ ಆಗ್ರಹವಾಗಿದೆ.

ಕಳೆದ ಶುಕ್ರವಾರವೂ ಸಹ ಹರಿಯಾಣವು ದೆಹಲಿಗೆ 110 ಎಂಜಿಡಿ ಕಡಿಮೆ ನೀರನ್ನು ಕಳುಹಿಸಿದೆ, ನಾನು ದೆಹಲಿಯ ನೀರಿನ ಸರಿಯಾದ ಪಾಲನ್ನು ಪಡೆಯಲು ಸಾಧ್ಯವಿರುವ ಎಲ್ಲ ಪ್ರಯತ್ನಗಳನ್ನು ಮಾಡಿದ್ದೇನೆ. ಆದರೆ ಹರಿಯಾಣದ ಬಿಜೆಪಿ ಸರ್ಕಾರವು ದೆಹಲಿಯ ಜನರನ್ನು ನಿರ್ಲಕ್ಷಿಸಿದೆ. ಅನಿರ್ದಿಷ್ಟಾವಧಿ ಮುಷ್ಕರದಲ್ಲಿ ಕುಳಿತುಕೊಳ್ಳುವುದನ್ನು ಬಿಟ್ಟು ನನಗೆ ಬೇರೆ ದಾರಿಯೇ ಇಲ್ಲ ಎಂದು ಅತಿಶಿ ಹೇಳಿದ್ದರು.

Share This Article