ರಸ್ತೆ ಗುಂಡಿ – ಎಎಪಿಯಿಂದ ಬೃಹತ್ ಸಹಿ ಸಂಗ್ರಹ ಅಭಿಯಾನ ಆರಂಭ

Public TV
2 Min Read

ಬೆಂಗಳೂರು: ರಾಜಧಾನಿಯ ರಸ್ತೆ ಕಾಮಗಾರಿಗಳಲ್ಲಿ ವ್ಯಾಪಕ ಭ್ರಷ್ಟಾಚಾರ ಹಾಗೂ ನಗರದೆಲ್ಲೆಡೆ ಗುಂಡಿಗಳು ಬಿದ್ದಿರುವುದನ್ನು ಖಂಡಿಸಿ 10 ದಿನಗಳ ಬೃಹತ್ ಸಹಿ ಸಂಗ್ರಹ ಅಭಿಯಾನಕ್ಕೆ ಆಮ್ ಆದ್ಮಿ ಪಾರ್ಟಿ ರಾಜ್ಯ ಸಂಚಾಲಕರಾದ ಪೃಥ್ವಿ ರೆಡ್ಡಿ ಶನಿವಾರ ಚಾಲನೆ ನೀಡಿದರು.

ತೆರೆದ ವಾಹನವನ್ನು ಬಳಸಿಕೊಂಡು ಬೆಂಗಳೂರಿನಾದ್ಯಂತ ಜನಜಾಗೃತಿಗೆ ಆಮ್ ಆದ್ಮಿ ಪಾರ್ಟಿ ಮುಂದಾಗಿದ್ದು, ಮೊದಲ ದಿನದಂದು ವಾಹನವು ಗಾಂಧಿನಗರ, ಮಲ್ಲೇಶ್ವರಂ, ರಾಜಾಜಿನಗರ, ಚಿಕ್ಕಪೇಟೆ ಮಾರ್ಗದಲ್ಲಿ ಸಾಗಿ ಆರ್ಮುಗಂ ವೃತ್ತ ತಲುಪಿತು. ಇದನ್ನೂ ಓದಿ: ಭಾರತೀಯ ಮೂಲದ ಗಣಿತಜ್ಞನಿಗೆ ಸಿಪ್ರಿಯನ್ ಫೊಯಾಸ್ ಪ್ರಶಸ್ತಿ

ಮೆಜೆಸ್ಟಿಕ್ ರೈಲ್ವೆ ನಿಲ್ದಾಣ ಸಮೀಪದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಮಾತನಾಡಿದ ಪೃಥ್ವಿ ರೆಡ್ಡಿ ಅವರು, ಸರ್ಕಾರದ ಬೊಕ್ಕಸದಿಂದ ಬರೋಬ್ಬರಿ 20,000 ಕೋಟಿ ರೂ.ಗಿಂತಲೂ ಅಧಿಕ ಹಣ ಖರ್ಚಾಗಿದ್ದರೂ, ಬೆಂಗಳೂರಿನ ರಸ್ತೆಗಳಲ್ಲಿ ತುಂಬಾ ಗುಂಡಿಗಳಿವೆ. ಇದರಿಂದಾಗಿ ಅಮಾಯಕ ವಾಹನ ಸವಾರರು ಕೈಕಾಲು ಮುರಿದುಕೊಂಡು ಜೀವ ಕಳೆದುಕೊಳ್ಳುತ್ತಿದ್ದಾರೆ. ಸಂಚಾರ ದಟ್ಟಣೆ ಸಮಸ್ಯೆಗೂ ಗುಂಡಿಗಳು ಕಾರಣ. ರಸ್ತೆ ಕಾಮಗಾರಿಗಳಲ್ಲಾದ ಅಕ್ರಮವನ್ನು ಹತ್ತು ದಿನಗಳ ಸಹಿ ಸಂಗ್ರಹ ಅಭಿಯಾನದ ಮೂಲಕ ಮನೆಮನೆಗೆ ತಲುಪಿಸಿ ಜಾಗೃತಿ ಮೂಡಿಸುತ್ತೇವೆ. ಸರ್ಕಾರ ಮಾಡಿರುವ ಈ ಅನ್ಯಾಯದ ವಿರುದ್ಧ ಜನತಾ ನ್ಯಾಯಾಲಯದಲ್ಲಿ ನ್ಯಾಯ ಸಿಗುವ ವಿಶ್ವಾಸವಿದೆ ಎಂದು ಹೇಳಿದರು.

ಬೆಂಗಳೂರು ನಗರ ಎಎಪಿ ಅಧ್ಯಕ್ಷ ಮೋಹನ್ ದಾಸರಿ ಅವರು ಮಾತನಾಡಿ, ಸಹಿ ಸಂಗ್ರಹ ಅಭಿಯಾನವು ಬೆಂಗಳೂರಿನ ಎಲ್ಲ ವಿಧಾನಸಭಾ ಕ್ಷೇತ್ರಗಳ ಮೂಲೆ-ಮೂಲೆಯನ್ನು ತಲುಪಲಿದೆ. ರಾಜ್ಯ ಸರ್ಕಾರ ಹಾಗೂ ಬಿಬಿಎಂಪಿಯ ವಿರುದ್ಧ ಜನಜಾಗೃತಿ ಮೂಡಿಸಿ, ಸರ್ಕಾರದ ಮೇಲೆ ಒತ್ತಡ ಹಾಕಲು ಪ್ರಯತ್ನಿಸುತ್ತೇವೆ. ಸರ್ಕಾರ ಈಗಲೂ ಎಚ್ಚೆತ್ತುಕೊಳ್ಳದಿದ್ದರೆ ಮುಂದಿನ ಚುನಾವಣೆಗಳಲ್ಲಿ ಜನರು ತಕ್ಕ ಪಾಠ ಕಲಿಸಲಿದ್ದಾರೆ. ರಸ್ತೆ ಗುಂಡಿಗಳಿಗೆ ಸಂಬಂಧಿಸಿ ನಾವು ಈ ಹಿಂದೆ ಮಾಡಿದ್ದ ಪ್ರತಿಭಟನೆಗಳು, ರಸ್ತೆಗುಂಡಿ ಹಬ್ಬ ಎಂಬ ವಿನೂತನ ಅಭಿಯಾನ, ಸೋಶಿಯಲ್ ಮೀಡಿಯಾ ಚಳವಳಿಗೆ ಉತ್ತಮ ಜನಬೆಂಬಲ ವ್ಯಕ್ತವಾಗಿದೆ. ಗುಂಡಿಗಳಿಗೆ ಕಾರಣರಾದ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ವಿರುದ್ಧ 70ಕ್ಕೂ ಹೆಚ್ಚು ದೂರುಗಳನ್ನು ಪೊಲೀಸ್ ಠಾಣೆಯಲ್ಲಿ ದಾಖಲಿಸಿದ್ದೇವೆ. ಅದೇ ರೀತಿ, ಈ ಚಳುವಳಿಗೆ ಕೂಡ ಹೆಚ್ಚಿನ ಬೆಂಬಲ ಸಿಗುವ ವಿಶ್ವಾಸವಿದೆ ಎಂದು ತಿಳಿಸಿದರು. ಇದನ್ನೂ ಓದಿ: ಕೆಬಿಸಿ ನಿರೂಪಣೆ ಒಪ್ಪಿಕೊಳ್ಳಲು ನಿಜವಾದ ಕಾರಣ ಬಿಚ್ಚಿಟ್ಟ ಬಿಗ್ ಬಿ

ಆಮ್ ಆದ್ಮಿ ಪಾರ್ಟಿಯ ಮುಖಂಡರಾದ ಬಿ.ಟಿ.ನಾಗಣ್ಣ, ಸುರೇಶ್ ರಾಥೋಡ್, ಜಗದೀಶ್ ಚಂದ್ರ, ಉಷಾ ಮೋಹನ್, ಪಲ್ಲವಿ ಚಿದಂಬರಂ, ಅಶೋಕ್ ಮೃತ್ಯುಂಜಯ, ವಿಜಯ್ ಶಾಸ್ತ್ರಿಮಠ್ ಹಾಗೂ ಇನ್ನಿತರೆ ಮುಖಂಡರು, ಕಾರ್ಯಕರ್ತರು, ಸಾರ್ವಜನಿಕರು ಅಭಿಯಾನದಲ್ಲಿ ಭಾಗಿಯಾಗಿದ್ದರು.

Share This Article
Leave a Comment

Leave a Reply

Your email address will not be published. Required fields are marked *