ಈಶ್ವರಪ್ಪ ಬಂಧನಕ್ಕೆ ಆಗ್ರಹಿಸಿ ಎಎಪಿ ಪ್ರತಿಭಟನೆ

Public TV
1 Min Read

ಬೆಂಗಳೂರು: ಗುತ್ತಿಗೆದಾರ ಸಂತೋಷ್ ಪಾಟೀಲ್ ಸಾವಿಗೆ ಸಂಬಂಧಿಸಿ ಪಂಚಾಯತ್ ರಾಜ್ ಸಚಿವ ಈಶ್ವರಪ್ಪ ಬಂಧನಕ್ಕೆ ಆಗ್ರಹಿಸಿ ಆಮ್ ಆದ್ಮಿ ಪಾರ್ಟಿಯ ನೂರಾರು ಕಾರ್ಯಕರ್ತರು ನಗರದ ಶಿವಾನಂದ ವೃತ್ತದಿಂದ ಬೃಹತ್ ಪ್ರತಿಭಟನೆ ನಡೆಸಿದರು.

ಪ್ರತಿಭಟನಾನಿರತ ಎಎಪಿ ಮುಖಂಡರು ಹಾಗೂ ಕಾರ್ಯಕರ್ತರು ಈಶ್ವರಪ್ಪ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಕುಮಾರಕೃಪಾದಲ್ಲಿರುವ ಮುಖ್ಯಮಂತ್ರಿ ನಿವಾಸಕ್ಕೆ ಮುತ್ತಿಗೆ ಹಾಕಲು ಸಾಗುತ್ತಿದ್ದ ಎಎಪಿ ಮುಖಂಡರು ಹಾಗೂ ಕಾರ್ಯಕರ್ತರನ್ನು ಪೊಲೀಸರು ಮಾರ್ಗಮಧ್ಯದಲ್ಲೇ ವಶಕ್ಕೆ ಪಡೆದು ಹೈಗ್ರೌಂಡ್ಸ್ ಠಾಣೆಗೆ ಕರೆದೊಯ್ದರು. ಇದನ್ನೂ ಓದಿ: ದೇಶಿ ನಿರ್ಮಿತ ಪಿಸ್ತೂಲ್ ಇಟ್ಟುಕೊಂಡಿದ್ದ ಶಿಕ್ಷಕಿ ಅರೆಸ್ಟ್

ಇದೇ ಸಂದರ್ಭದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಎಎಪಿ ಬೆಂಗಳೂರು ಅಧ್ಯಕ್ಷ ಮೋಹನ್ ದಾಸರಿ, ಅನ್ಯಾಯದ ವಿರುದ್ಧ ಧ್ವನಿ ಎತ್ತುವ ಧೈರ್ಯ ತೋರಿದ್ದ ಸಂತೋಷ್ ಪಾಟೀಲ್‍ರವರಿಗೆ ನ್ಯಾಯ ಸಿಗಬೇಕೆಂದರೆ ಶೀಘ್ರವೇ ಈಶ್ವರಪ್ಪನವರ ಬಂಧನವಾಗಬೇಕು. ರಾಜ್ಯ ಸಚಿವ ಸಂಪುಟದಲ್ಲಿ ಈಶ್ವರಪ್ಪನವರು ಪ್ರಭಾವಿ ಸಚಿವರಾಗಿದ್ದು, ಈ ಕೂಡಲೇ ಅವರನ್ನು ಬಂಧಿಸದಿದ್ದರೆ ಸಾಕ್ಷ್ಯಾಧಾರಗಳನ್ನು ನಾಶ ಪಡಿಸುವ ಸಾಧ್ಯತೆ ದಟ್ಟವಾಗಿದೆ. ಆರೋಪಿ ಈಶ್ವರಪ್ಪನವರನ್ನು ಬಂಧಿಸುವ ಬದಲು ಆಮ್ ಆದ್ಮಿ ಪಾರ್ಟಿ ನಾಯಕರು ಹಾಗೂ ಕಾರ್ಯಕರ್ತರನ್ನು ಬಂಧಿಸಿರುವ ಪೊಲೀಸರ ನಡೆ ಖಂಡನೀಯ ಎಂದು ಹೇಳಿದರು. ಇದನ್ನೂ ಓದಿ: ಜಲಿಯನ್ ವಾಲಾಬಾಗ್ ಹತ್ಯಾಕಾಂಡದಲ್ಲಿ ಹುತಾತ್ಮರಾದವರ ತ್ಯಾಗ ಮುಂದಿನ ಪೀಳಿಗೆಗೆ ಪ್ರೇರಣೆ: ಮೋದಿ

ಸಂತೋಷ್ ಸಾವಿಗೆ ಈಶ್ವರಪ್ಪನವರೇ ಕಾರಣವೆಂದು ಡೆತ್‍ನೋಟ್‍ನಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಿದರೂ ಈಶ್ವರಪ್ಪನವರ ಬಂಧನವಾಗಿಲ್ಲ. ಸಚಿವರನ್ನು ಬಂಧಿಸದಿದ್ದರೆ ಜನಸಾಮಾನ್ಯರಿಗೇ ಒಂದು ಕಾನೂನು, ಸಚಿವರಿಗೆ ಮತ್ತೊಂದು ಕಾನೂನು ಇದೆ ಎಂಬ ತಪ್ಪು ಸಂದೇಶ ಸಮಾಜಕ್ಕೆ ಹೋಗಲಿದೆ. ಸಚಿವ ಸಂಪುಟದಿಂದ ಈಶ್ವರಪ್ಪನವರನ್ನು ಹೊರಹಾಕಿ, ಅವರನ್ನು ಬಂಧಿಸಿದಿದ್ದರೆ ಪ್ರಕರಣದ ನಿಷ್ಪಕ್ಷಪಾತ ತನಿಖೆ ಸಾಧ್ಯವಿಲ್ಲ ಎಂದು ಮೋಹನ್ ದಾಸರಿ ಹೇಳಿದರು.

ಆಮ್ ಆದ್ಮಿ ಪಾರ್ಟಿ ನಾಯಕರಾದ ಜಗದೀಶ್ ವಿ ಸದಂ, ಚನ್ನಪ್ಪಗೌಡ ನೆಲ್ಲೂರು, ಕುಶಲಸ್ವಾಮಿ, ಉಷಾ ಮೋಹನ್, ಪ್ರಕಾಶ್ ನೆಡುಂಗಡಿ, ಸೀತಾರಾಮ್, ನಂಜಪ್ಪ ಕಾಳೇಗೌಡ, ಗೋಪಿನಾಥ್, ಕುದ್ರತ್, ಜಗದೀಶ್ ಬಾಬು, ಅಬ್ಬಾಸ್ ಸೇರಿದಂತೆ ಅನೇಕ ಮುಖಂಡರು, ಕಾರ್ಯಕರ್ತರು, ಸಾರ್ವಜನಿಕರು ಭಾಗವಹಿಸಿದ್ದರು.

Share This Article
Leave a Comment

Leave a Reply

Your email address will not be published. Required fields are marked *