ಹರಿಯಾಣದಿಂದ ದೆಹಲಿಗೆ ಬರುವ ನೀರನ್ನು ಬಿಜೆಪಿ ತಡೆಯುತ್ತಿದೆ: ಅತಿಶಿ ಆರೋಪ

Public TV
1 Min Read

ನವದೆಹಲಿ: ಹರಿಯಾಣದಿಂದ ದೆಹಲಿಗೆ ಹರಿದು ಬರುವ ಯಮುನಾ ನದಿಯ (Yamuna Water) ನೀರನ್ನು ಬಿಜೆಪಿ ಸರ್ಕಾರ ಉದ್ದೇಶಪೂರ್ವಕವಾಗಿ ತಡೆದಿದ್ದು, ಚುನಾವಣಾ ಸಂದರ್ಭದಲ್ಲಿ ರಾಷ್ಟ್ರರಾಜಧಾನಿಯಲ್ಲಿ ನೀರಿನ ಸಮಸ್ಯೆ ಹೆಚ್ಚಿಸುವ ಸಂಚು ಮಾಡಿದೆ ಎಂದು ಆಪ್ (AAP) ಸರ್ಕಾರದ ಸಚಿವೆ ಅತಿಶಿ ಆರೋಪಿಸಿದ್ದಾರೆ.

ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮತದಾನಕ್ಕೂ ಮುನ್ನ ಆಪ್ ಪಕ್ಷವನ್ನು ಟಾರ್ಗೆಟ್ ಮಾಡಲು ನೀರು ತಡೆಯುವ ಈ ಮೂಲಕ ಜನರಿಗೆ ತೊಂದರೆ ನೀಡುತ್ತಿದೆ. ದೆಹಲಿ ಬಿಜೆಪಿಯ (BJP) ಈ ಸಂಚಿಗೆ ಹರಿಯಾಣ ಸರ್ಕಾರ ಬೆಂಬಲ ನೀಡಿದ್ದು, ದೆಹಲಿಯ ಹಲವು ಪ್ರದೇಶಗಳಲ್ಲಿ ನೀರಿನ ಸಮಸ್ಯೆ ಹೆಚ್ಚುತ್ತಿದೆ ಎಂದರು.

ನೀರಿನ ಸಮಸ್ಯೆಯ ದೂರುಗಳೇ ಬರದ ಕೆಲವು ಪ್ರದೇಶಗಳಿಂದ ನೀರಿನ ಕೊರತೆಯ ಸಮಸ್ಯೆ ಬಂದ ಬಳಿಕ ಈ ಬಗ್ಗೆ ತನಿಖೆ ನಡೆಸಲಾಯಿತು. ತನಿಖೆಯಲ್ಲಿ ಹರಿಯಾಣದಿಂದ ನೀರಿನ ಹರಿವು ಕಡಿಮೆಯಾಗಿರುವುದು ಗೊತ್ತಾಗಿದೆ. ದೆಹಲಿಯ ಯಮುನೆಯ ಇತಿಹಾಸದಲ್ಲೇ ಮೊದಲ ಬಾರಿಗೆ ನೀರಿನ ಮಟ್ಟ 671 ಅಡಿಗಿಂತ ಕೆಳಗಿಳಿದಿದೆ. ನಮ್ಮ ಸರ್ಕಾರವು ಶೀಘ್ರದಲ್ಲೇ ಹರಿಯಾಣ ಸರ್ಕಾರಕ್ಕೆ ಪತ್ರ ಬರೆಯಲಿದೆ ಮತ್ತು ಅಗತ್ಯವಿದ್ದರೆ ನ್ಯಾಯಾಲಯಕ್ಕೆ ತುರ್ತು ಅರ್ಜಿಯನ್ನು ಸಲ್ಲಿಸುತ್ತೇವೆ ಎಂದು ಅತಿಶಿ (Atishi) ಹೇಳಿದರು.

ನೀರಿನ ಸಮಸ್ಯೆ ಪರಿಹರಿಸಲು ಟ್ಯಾಂಕರ್ ವ್ಯವಸ್ಥೆ ಮಾಡಲಾಗುತ್ತಿದೆ. ಮುಂದಿನ 24 ಗಂಟೆಗಳಲ್ಲಿ ವೇಗವಾಗಿ ನೀರು ಪೂರೈಸಲು ನಿರ್ದೇಶನ ನೀಡಿದೆ ಎಂದ ಅತಿಶಿ, ನೀವು ದೆಹಲಿಯ ಜನರನ್ನು ಮರುಳು ಮಾಡಲು ಸಾಧ್ಯವಿಲ್ಲ. ನೀವು ಏನೇ ಮಾಡಿದರು ಜನರು ದೆಹಲಿ ಎಲ್ಲಾ 7 ಸ್ಥಾನಗಳನ್ನು ಇಂಡಿಯಾ ಒಕ್ಕೂಟಕ್ಕೆ ನೀಡಲು ನಿರ್ಧರಿಸಿದ್ದಾರೆ ಎಂದು ತಿಳಿಸಿದರು.

Share This Article