– ಕ್ರಮಕ್ಕೆ ಒತ್ತಾಯಿಸಿ ಎಎಪಿಯಿಂದ ಪತ್ರಿಕಾ ಪ್ರಕಟಣೆ
ಬೆಂಗಳೂರು: ಹಿರಿಯ ಸ್ವಾತಂತ್ರ್ಯ ಹೋರಾಟಗಾರರಾದ ದೊರೆಸ್ವಾಮಿ ಅವರ ಬಗ್ಗೆ ಬಿಜೆಪಿಗರು ಇತ್ತೀಚಿಗೆ ನೀಡಿದ ಅವಹೇಳನಕಾರಿ ಹೇಳಿಕೆಗಳನ್ನು ಆಮ್ ಆದ್ಮಿ ಪಕ್ಷವು ತೀವ್ರವಾಗಿ ಖಂಡಿಸುತ್ತದೆ.
ಈ ನಾಡು ಕಂಡ ಹಿರಿಯ ಜೀವಿ ದೊರೆಸ್ವಾಮಿ ಅವರ ಸ್ವಾತಂತ್ರ್ಯ ಹೋರಾಟಗಳನ್ನು ಅನುಮಾನಿಸುವ ಹಾಗೂ ಪ್ರಶ್ನಿಸುವ ಮಟ್ಟಿನ ಧಾಷ್ಟ್ರ್ಯ ತನವನ್ನು ತೋರಿಸುತ್ತಿರುವ, ನಕಲಿ ಹೋರಾಟಗಾರರು ಎಂದು ಹೇಳುತ್ತಿರುವ ಬಿಜೆಪಿ ಶಾಸಕ ಬಸವರಾಜ್ ಪಾಟೀಲ್ ಯತ್ನಾಳ್ ನಿಜಕ್ಕೂ ಮತಿಗೆಟ್ಟರುವ ಮತ್ತು ಬುದ್ಧಿಹೀನವಾಗಿರುವಂತೆ ಕಂಡುಬರುತ್ತಿದೆ.
ಇವರ ಹೇಳಿಕೆಗಳಿಗೆ ಪ್ರಚೋದನೆ ಹಾಗೂ ಬೆಂಬಲವನ್ನು ನೀಡಿರುವ ರಾಜ್ಯದ ಸಚಿವ ವಿ. ಸೋಮಣ್ಣನವರ ಹೇಳಿಕೆಯನ್ನು ಸಹ ಆಮ್ ಆದ್ಮಿ ಪಕ್ಷವು ಕಟುವಾಗಿ ಖಂಡಿಸುತ್ತದೆ. ಈ ರೀತಿ ಸ್ವಾತಂತ್ರ್ಯ ಹೋರಾಟಗಾರರನ್ನು ನಿಂದಿಸುವುದು ಪರಿಪಾಠ ಬಿಜೆಪಿಗರಿಗೆ ಇದೇ ಮೊದಲೇನಲ್ಲ.
ಹಿರಿಯ ಸ್ವಾತಂತ್ರ್ಯ ಹೋರಾಟಗಾರರಾದ ದೊರೆಸ್ವಾಮಿಯವರು ಅನೇಕ ದಶಕಗಳಿಂದ ಆಳುವ ಸರ್ಕಾರಗಳ ನಿರ್ಲಜ್ಜ ನಡೆಗಳನ್ನು ಪಕ್ಷಾತೀತವಾಗಿ ವಿರೋಧಿಸುತ್ತಲೇ ಬಂದಿರುವವರು. ಇಂತಹ ಹಿರಿಯ ಮುತ್ಸದ್ದಿಗಳನ್ನು ಒಂದು ಪಕ್ಷಕ್ಕೆ ಮಾತ್ರ ಸೀಮಿತಗೊಳಿಸಿ ಕಾಂಗ್ರೆಸ್ ಏಜೆಂಟ್, ಪಾಕಿಸ್ತಾನ ಏಜೆಂಟ್ ಎಂದು ಸಂಬೋಧಿಸುತ್ತಿರುವ ಬಿಜೆಪಿಗರ ಈ ಪರಿಯನ್ನು ರಾಜ್ಯದ್ಯಂತ ಜನತೆ ಒಕ್ಕೊರಲಿನಿಂದ ವಿರೋಧಿಸುತ್ತಿದೆ ಹಾಗೂ ಖಂಡಿಸುತ್ತದೆ.
ಇನ್ನಾದರೂ ಈ ಇಬ್ಬರು ಮತಿಹೀನ ಮಹನೀಯರುಗಳ ವಿರುದ್ಧ ಭಾರತೀಯ ಜನತಾ ಪಕ್ಷ ಕ್ರಮ ಕೈಗೊಳ್ಳಲೇಬೇಕು ಹಾಗೂ ಇವರಿಬ್ಬರೂ ನಾಡಿನ ಜನತೆಯ ಮುಂದೆ ಕ್ಷಮೆ ಕೋರಬೇಕು ಎಂದು ಆಮ್ ಆದ್ಮಿ ಪಕ್ಷವು ಒತ್ತಾಯಿಸುತ್ತದೆ.