ಶ್ರದ್ಧಾವಾಕರ್ ಹತ್ಯೆ ಪ್ರಕರಣ – ಪಾಲಿಗ್ರಾಫ್ ಪರೀಕ್ಷೆ ವೇಳೆ ಅಫ್ತಾಬ್‍ಗೆ ಕೇಳಿದ ಪ್ರಶ್ನೆಗಳೇನು?

Public TV
2 Min Read

ನವದೆಹಲಿ: ಶ್ರದ್ಧಾ ವಾಕರ್ (Shraddha Walkar) ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಅಫ್ತಾಬ್ ಅಮೀನ್ ಪೂನಾವಾಲಾಗೆ (Aaftab Poonawala) ಶುಕ್ರವಾರ ಎರಡನೇ ದಿನದ ಪಾಲಿಗ್ರಾಫ್ ಪರೀಕ್ಷೆಗೆ (Polygraph Test) ಒಳಪಡಿಸಲಾಯಿತು. ಸುಮಾರು ಮೂರು ಗಂಟೆಗಳ ಕಾಲ ನಡೆದ ಪರೀಕ್ಷೆಯಲ್ಲಿ ಹಲವು ಪ್ರಶ್ನೆಗಳಿಗೆ ಸರಿಯಾದ ಉತ್ತರ ನೀಡಿದರೆ, ಇನ್ನು ಕೆಲವು ಪ್ರಶ್ನೆಗಳಿಗೆ ಉತ್ತರ ನೀಡದೇ ತಪ್ಪಿಸಿಕೊಂಡಿದ್ದಾನೆ ಎಂದು ಪೊಲೀಸ್ ಮೂಲಗಳು ಹೇಳಿವೆ.

ಪಾಲಿಗ್ರಾಫ್ ಪರೀಕ್ಷೆಗೆ ಸಾಕೇತ್ ಜಿಲ್ಲಾ ನ್ಯಾಯಲಯ ಅನುಮತಿ ನೀಡಿದ ಬಳಿಕ ರೋಹಿಣಿಯಲ್ಲಿರುವ ವಿಧಿ ವಿಜ್ಞಾನ ಪ್ರಯೋಗಾಲಯದಲ್ಲಿ ಪರೀಕ್ಷೆ ನಡೆಸಲಾಯಿತು. ಪರೀಕ್ಷೆ ತೀವ್ರವಾಗುತ್ತಿದ್ದಂತೆ ಕೆಮ್ಮು ಆರಂಭಿಸಿದ ಅಫ್ತಾಬ್ ನಾಡಿ ಮಿಡಿತ, ಹೃದಯ ಬಡಿತ, ಮಾನಸಿಕ ಒತ್ತಡ ಸರಿಯಾಗಿ ದಾಖಲಾಗದ ಹಾಗೇ ಮಾಡಿದ ಎನ್ನಲಾಗಿದೆ. ಇದನ್ನೂ ಓದಿ: ಏಕರೂಪ ನಾಗರಿಕ ಸಂಹಿತೆ ಜಾರಿ, 20 ಲಕ್ಷ ಉದ್ಯೋಗ ಸೃಷ್ಟಿ – ಗುಜರಾತ್ ಚುನಾವಣೆಯಲ್ಲಿ ಬಿಜೆಪಿ ಭರವಸೆ

ಅಫ್ತಾಬ್ ಉದ್ದೇಶ ಪೂರ್ವಕವಾಗಿ ಅನಾರೋಗ್ಯಕ್ಕೆ ಈಡಾದಂತೆ ಕಂಡು ಬಂದ ಹಿನ್ನೆಲೆ ಮತ್ತೊಮ್ಮೆ ಪರೀಕ್ಷೆ ನಡೆಸಲು ನಿರ್ಧರಿಸಿ ಶುಕ್ರವಾರ ಪರೀಕ್ಷೆಯನ್ನು ಅರ್ಧಕ್ಕೆ ಮೊಟಕುಗೊಳಿಸಲಾಯಿತು. ಮುಂದಿನ ಪರೀಕ್ಷೆಯಲ್ಲಿ ಅಫ್ತಾಬ್ ಪೊಲೀಸರ ದಾರಿ ತಪ್ಪಿಸುವ ಪ್ರಯತ್ನ ಮಾಡಿದಲ್ಲಿ ನಾರ್ಕೊ ವಿಶ್ಲೇಷಣೆ ಪರೀಕ್ಷೆಗೆ ಒಳಗಾಗಬಹುದು ಎಂದು ಮೂಲಗಳು ಹೇಳಿವೆ.

ಪಾಲಿಗ್ರಾಫ್ ಪರೀಕ್ಷೆ ಎಂದರೇನು?
ಸುಳ್ಳು ಪತ್ತೆಕಾರಕ ಪರೀಕ್ಷೆಯನ್ನು ಪಾಲಿಗ್ರಾಫ್‌ ಪರೀಕ್ಷೆ ಎಂದು ಕರೆಯಲಾಗುತ್ತದೆ. ಇದು ಮಾನವನ ದೇಹದ ಮೇಲೆ ಸೆನ್ಸಾರ್‌ಗಳನ್ನು ಸ್ಥಾಪಿಸಿ, ಅದರ ಸಹಾಯದಿಂದ, ಪ್ರಶ್ನೆಯನ್ನು ಕೇಳಿದ ಸಮಯದಲ್ಲಿ ದೇಹದಲ್ಲಿ ಸಂಭವಿಸುವ ಜೈವಿಕ ಭೌತಿಕ ಬದಲಾವಣೆಗಳನ್ನು ಪತ್ತೆಹಚ್ಚಲು ಸಾಧ್ಯವಿದೆ. ಸರಳವಾಗಿ ಹೇಳುವುದಾದರೆ, ನಿರ್ದಿಷ್ಟ ಘಟನೆಯ ಬಗ್ಗೆ ಅಭ್ಯರ್ಥಿಯನ್ನು ಕೇಳಿದಾಗ, ಒಬ್ಬ ವ್ಯಕ್ತಿಯು ಸುಳ್ಳು ಹೇಳುತ್ತಿದ್ದಾನೆಯೇ ಅಥವಾ ಸತ್ಯ ಹೇಳುತ್ತಾನೆಯೇ ಎಂದು ಪ್ರತಿಪಾದಿಸಲು ಅನುಮತಿಸುವ ದತ್ತಾಂಶವನ್ನು ಪರದೆಯು ಪ್ರದರ್ಶಿಸುತ್ತದೆ. ಈ ಒಟ್ಟಾರೆ ಪ್ರಕ್ರಿಯೆಗೆ ಪಾಲಿಗ್ರಾಫ್‌ ಪರೀಕ್ಷೆ ಎಂದು ಹೇಳಲಾಗುತ್ತದೆ.

ಶುಕ್ರವಾರ ನಡೆದ ಪಾಲಿಗ್ರಾಫ್ ಪರೀಕ್ಷೆಯಲ್ಲಿ ಹತ್ತಾರು ಪ್ರಶ್ನೆಗಳನ್ನು ಕೇಳಲಾಗಿದೆ. ಮುಖ್ಯವಾಗಿ, ಶ್ರದ್ಧಾಳನ್ನು ಕೊಂದಿದ್ದೇಕೆ ಮತ್ತು ಕೊಲ್ಲಲು ಯಾವ ಆಯುಧವನ್ನು ಬಳಸಿದ್ದೀರಿ? ಶ್ರದ್ಧಾ ದೇಹವನ್ನು ಹೇಗೆ ಕತ್ತರಿಸಿದ್ದೀರಿ? ಕತ್ತರಿಸುವಾಗ ತಪ್ಪಿತಸ್ಥ ಭಾವನೆ ಬರಲಿಲ್ಲವೇ? ಕತ್ತರಿಸಿದ ದೇಹದ ಭಾಗಗಳನ್ನು ಎಲ್ಲಿ ಎಸೆದಿದ್ದೀರಿ? ಶ್ರದ್ಧಾ ವಾಕರ್ ಹತ್ಯೆ ನಂತರ ನೀವು ಏನು ಮಾಡಿದ್ದೀರಿ? ಕೊಲೆಯ ಆಯುಧ ಎಲ್ಲಿದೆ? ಕೊಲ್ಲುವ ಏಕೈಕ ಉದ್ದೇಶದಿಂದ ಶ್ರದ್ಧಾಳನ್ನು ದೆಹಲಿಗೆ ಕರೆತಂದಿದ್ದೀರಾ ಹೀಗೆ ಹಲವು ಪ್ರಶ್ನೆಗಳನ್ನು ಕೇಳಿದ್ದಾರೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *