ಕ್ಷಣ ಕ್ಷಣಕ್ಕೂ ಕಾಡುವ ಕರಾಳ ರಾತ್ರಿ!

Public TV
2 Min Read

ರೇಟಿಂಗ್: 4/5
ದಯಾಳ್ ಪದ್ಮನಾಭನ್ ಕನ್ನಡ ಚಿತ್ರರಂಗ ಕಂಡ ಅತ್ಯಂತ ಚತುರ ಸಿನಿಮಾ ತಂತ್ರಜ್ಞ. ಔಟ್ ಅಂಡ್ ಔಟ್ ಕಮರ್ಷಿಯಲ್ ಫಾರ್ಮುಲಾಗಳನ್ನು ಒಳಗೊಂಡ ಸಿನಿಮಾಗಳ ಬರಹಗಾರರಾಗಿ, ಸಂಭಾಷಣೆಕಾರರಾಗಿ ಚಿತ್ರರಂಗಕ್ಕೆ ಬಂದು ನಂತರ ನಿರ್ದೇಶನದಲ್ಲೂ ಹೆಸರು ಮಾಡಿದವರು. ವ್ಯಾಪಾರಿ ದೃಷ್ಟಿಯ ಸಿನಿಮಾಗಳನ್ನು ಮಾಡುತ್ತಿದ್ದ ದಯಾಳ್ ಇದ್ದಕ್ಕಿದ್ದಂತೆ ಹಗ್ಗದ ಕೊನೆ ಸಿನಿಮಾ ಮಾಡಿ, ಸೂಕ್ಷ್ಮ ಕಥಾಹಂದರವನ್ನು ಮುಟ್ಟಿ ಗೆದ್ದಾಗಲೇ ದಯಾಳ್ ಕ್ರಿಯಾಶೀಲ ಸಿನಿಮಾಗಳನ್ನು ಮಾಡಬಲ್ಲರು ಅನ್ನೋದು ಸಾಬೀತಾಗಿತ್ತು. ಈಗ ದಯಾಳ್ ಅವರ `ಆ ಕರಾಳ ರಾತ್ರಿ’ ಸಿನಿಮಾ ತೆರೆಗೆ ಬಂದಿದೆ. ಈ ಬಾರಿ ದಯಾಳ್ ಮತ್ತಷ್ಟು ಅಚ್ಚರಿ ಮೂಡಿಸಿದ್ದಾರೆ. ಕಲಾತ್ಮಕ ಚೌಕಟ್ಟಿನ ಕಥೆಯೊಂದನ್ನು ಕಮರ್ಷಿಯಲ್ ಸಿನಿಮಾವನ್ನಾಗಿಸುವ ಕೆಲಸ ನೆರೆಯ ತಮಿಳು, ಮಲಯಾಳಂ ಸಿನಿಮಾರಂಗದಲ್ಲಿ ನಡೆಯುತ್ತಿದೆ. ಆದರೆ ನಾವು ಕನ್ನಡದವರೂ ಏನು ಕಮ್ಮಿಯಿಲ್ಲ. ಕೇವಲ ಅವಾರ್ಡ್ ದೃಷ್ಟಿಯಲ್ಲಿಟ್ಟುಕೊಂಡು ಸದಭಿರುಚಿಯ ಸಿನಿಮಾಗಳನ್ನು ಮಾಡಿದರೆ ಏನು ಪ್ರಯೋಜನ? ಅದು ಜನ ನೋಡುವ ಸಿನಿಮಾಗಳಾಗಿಯೂ ಮಾರ್ಪಡಬೇಕು ಎನ್ನುವ ಕೊರಗನ್ನು ದಯಾಳ್ ನೀಗಿಸಿದ್ದಾರೆ.

 

ಒಂದು ಗ್ರಾಮ, ಆ ಗ್ರಾಮದಿಂದ ಮೂರು ಕಿಲೋಮೀಟರು ದೂರದಲ್ಲೊಂದು ಮನೆ, ಆ ಮನೆಯಲ್ಲಿ ಗಂಡ, ಹೆಂಡತಿ ಮತ್ತು ಅವರ ಮುದ್ದಾದ ಮಗಳ ವಾಸ. ಅಲ್ಲಿಗೆ ಅಪರಿಚಿತ ವ್ಯಕ್ತಿಯೊಬ್ಬ ಎಂಟ್ರಿ ಕೊಡುತ್ತಾನೆ. ಆತ ಉಳಿದುಕೊಳ್ಳಲು ಈ ಮನೆಯಲ್ಲಿ ಜಾಗ ಸಿಗುತ್ತದೆ. ಹಾಗೆ ಸ್ಥಳಾವಕಾಶ ಪಡೆದವನ ಬಳಿ ಹೇರಳವಾದ ಸಂಪತ್ತೂ ಇರುತ್ತದೆ. ಒಬ್ಬಂಟಿಗನಲ್ಲಿರುವ ಐಶ್ವರ್ಯವನ್ನು ಕಂಡು ಕುಟುಂಬದ ಮೂವರು ಸದಸ್ಯರ ಕಣ್ಣು ಆಸೆಯಲ್ಲಿ ತೇಲಿಹೋದರೆ, ಮನಸ್ಸು ದುಷ್ಟತನದ ಹೊಂದಲ್ಲಿ ಮುಳುಗುತ್ತದೆ. ಆನಂತರ ಏನೇನು ನಡೆಯುತ್ತದೆ ಅನ್ನೋದು `ಆ ಕರಾಳ ರಾತ್ರಿ’ಯ ಅಂತಿಮ ಸೀಕ್ರೇಟು.

ನಾಯಕ ನಟಿ ಅನುಪಮಾ ಗೌಡ ತೀರಾ ಸೊಗಸಾಗಿ ನಟಿಸಿದ್ದಾರೆ. ರಂಗಾಯಣ ರಘು, ವೀಣಾ ಸುಂದರ್ ಮತ್ತು ನವೀನ್ ಕೃಷ್ಣ ಪಾತ್ರಗಳಲ್ಲಿ ಮುಳುಗಿಹೋಗಿದ್ದಾರೆ. ಬರೀ ಹದಿಮೂರು ಪಾತ್ರಗಳ ಮೂಲಕ ಇಡೀ ಸಿನಿಮಾವನ್ನು ತೆರೆದಿಟ್ಟಿದ್ದಾರೆ ದಯಾಳ್. ಹೀಗೆ ಬಂದು ಹಾಗೆ ಹೋದರೂ ಕುರುಡನ ಪಾತ್ರದಲ್ಲಿ ಕಾಣಿಸಿಕೊಂಡಿರುವ ನವರಸನ್ ಗಮನ ಸೆಳೆಯುತ್ತಾರೆ. ಪಿಕೆಎಚ್ ದಾಸ್ ಅವರ ಕ್ಯಾಮೆರಾ ಕೆಲಸ ನೋಡುಗರನ್ನು ಸೆಳೆಯುತ್ತದೆ. ಹಿನ್ನೆಲೆ ಸಂಗೀತ ಸಿನಿಮಾಗೆ ಪೂರಕವಾಗಿದೆ. ಒಟ್ಟಾರೆ ಈ ವರ್ಷದ ಕೆಲವೇ ಅತ್ಯುತ್ತಮ ಸಿನಿಮಾಗಳಲ್ಲಿ ಆ ಕರಾಳ ರಾತ್ರಿಯೂ ಸೇರಿಹೋಗಿದೆ.

Share This Article
Leave a Comment

Leave a Reply

Your email address will not be published. Required fields are marked *