ಮರ್ಯಾದೆ ಕೊಡ್ತಿಲ್ಲ ಅಂತ ಬೆಂಗಳೂರಲ್ಲಿ ಚಿಕ್ಕಪ್ಪನಿಂದಲೇ ಮಗನ ಕೊಲೆ

Public TV
1 Min Read

ಬೆಂಗಳೂರು: ನಗರದಲ್ಲಿ ಮತ್ತೆ ನೆತ್ತರು ಹರಿದಿದೆ. ನನಗೆ ಮರ್ಯದೆ ಕೊಡ್ತಿಲ್ಲ ಅಂತ, ಸಿಟ್ಟಲ್ಲಿ ಬರ್ಬರವಾಗಿ ಕೊಲೆ ಮಾಡಿದ ಆಸಾಮಿ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.

ಸ್ವಂತ ಚಿಕ್ಕಪ್ಪನಿಂದಲೇ ಮಗನ ಕೊಲೆಯಾಗಿದೆ. ಕೆಂಗೇರಿಯ ಹೊಯ್ಸಳ ಸರ್ಕಲ್ ಬಳಿ ಈ ಘಟನೆ ನಡೆದಿದೆ. ಕೊಲೆಯಾದ ವ್ಯಕ್ತಿ ನವೀನ್. ಕೊಲೆ ಮಾಡಿದವ ಸ್ವಂತ ಚಿಕ್ಕಪ್ಪ ಕುಮಾರ್. ನವೀನ್ ಕುಡಿದಾಗ ನನಗೆ ಮರ್ಯಾದೆ ಕೊಡಲ್ಲ ಎಂಬ ಹಳೆ ದ್ವೇಷ ಇಟ್ಕೊಂಡು ನಿನ್ನೆ ರಾತ್ರಿ, ಕೆಂಗೇರಿ ಉಪನಗರದ ಹ್ಯಾಪಿ ಡೇ ಬಾರ್ ಸಮೀಪ ಮಾರಕಾಸ್ತ್ರಗಳಿಂದ ಮನಬಂದಂತೆ ಕೊಚ್ಚಿ ಕೊಲೆ ಮಾಡಿದ್ದಾನೆ. ಇದನ್ನೂ ಓದಿ: ಕುಡಿಯಲು ನೀರು ತರಲು ಹೋದಾಗ ಕೆರೆಯಲ್ಲಿ ಮುಳುಗಿ ಚಿಕ್ಕಪ್ಪ, ಮಗ ಸಾವು

ಕುಡಿದು ಮರ್ಯಾದೆ ಕೊಡದ ಹಾಗೆ ಮಾತನಾಡ್ತಿದ್ದ ನವೀನ್ ಮೇಲೆ, ಚಿಕ್ಕಪ್ಪ ಕುಮಾರ್ ದ್ವೇಷ ಬೆಳೆಸಿಕೊಂಡಿದ್ದ. ನಿನ್ನೆ ಸಂಜೆ ತನ್ನ ಸ್ನೇಹಿತರ ಜೊತೆ ಹ್ಯಾಪಿ ಡೇ ಬಾರ್‌ಗೆ ಬಂದಿದ್ದ ಕುಮಾರ್, ಕಂಠಪೂರ್ತಿ ಕುಡಿದ ಬಳಿಕ, ನವೀನ್‌ನನ್ನ ಬಾರ್ ಬಳಿಗೆ ಕರೆಸಿಕೊಂಡು ಎಣ್ಣೆ ಕುಡಿಸಿದ್ದಾನೆ. ಬಳಿಕ ಜಗಳ ತೆಗೆದ ಕುಮಾರ್, ಬಾರ್ ಪಕ್ಕದಲ್ಲೇ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾನೆ. ಈ ವೇಳೆ ತನ್ನ ಕಾಲಿಗೂ ಗಾಯ ಆಗಿದ್ದು, ರಕ್ತಸ್ರಾವ ಆಗ್ತಿದ್ರೂ ಒಂದು ಕಿಲೋಮೀಟರ್ ದೂರ ಓಡಿ ಹೋಗಿ ಸುಸ್ತಾಗಿ ಬಿದ್ದಿದ್ದಾನೆ. ರಕ್ತದ ಗುರುತಿನ ಹೆಜ್ಜೆಗಳನ್ನ ಆಧಾರಿಸಿ ಹೋದ ಪೊಲೀಸರಿಗೆ ಆರೋಪಿ ಸಿಕ್ಕಿದ್ದಾನೆ. ಸ್ಥಳಕ್ಕೆ ಭೇಟಿ ನೀಡಿದ್ದ ಪಶ್ಚಿಮ ವಿಭಾಗದ ಡಿಸಿಪಿ ಲಕ್ಷಣ್ ನಿಂಬರಗಿ ಕೊಲೆಯ ಬಗ್ಗೆ ಮಾಹಿತಿ ನೀಡಿದ್ದಾರೆ.

ಪ್ರಕರಣ ದಾಖಲಿಸಿಕೊಂಡಿರುವ ಕೆಂಗೇರಿ ಪೊಲೀಸರು, ಉಳಿದ ಆರೋಪಿಗಳಿಗಾಗಿ ತಲಾಶ್ ನಡೆಸುತ್ತಿದ್ದಾರೆ. ಸದ್ಯ ನವೀನ್ ಮೃತದೇಹವನ್ನು ಆರ್‌ಆರ್ ಆಸ್ಪತ್ರೆಗೆ ರವಾನೆ ಮಾಡಲಾಗಿದ್ದು, ಬಾರ್‌ನ ಸಿಸಿಟಿವಿ ದೃಶ್ಯ ಆಧರಿಸಿ ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ. ಇದನ್ನೂ ಓದಿ: ಅಪ್ಪ-ಅಮ್ಮ ನನಗಿಂತ ಹೆಚ್ಚು ಪ್ರೀತಿಸ್ತಾರೆಂದು ತಮ್ಮನನ್ನೇ ಮುಗಿಸಿದ ಅಪ್ರಾಪ್ತೆ!

Share This Article