2,000 ರೂ. ನೋಟಿನ ಕಥೆ ಮುಗಿದರೂ, ಕಾಫಿನಾಡ ಯುವಕನ ಬಾಳಲ್ಲಿ ಆ ನೋಟು ಎವರ್‌ಗ್ರೀನ್‌!

Public TV
2 Min Read

ಚಿಕ್ಕಮಗಳೂರು: ಆರ್‌ಬಿಐ (RBI) 2,000 ರೂ. ಮುಖಬೆಲೆಯ ನೋಟುಗಳ ಚಲಾವಣೆಗೆ ಬ್ರೇಕ್‌ ಹಾಕಿದ್ದು, ಬ್ಯಾಂಕ್‌ಗಳಲ್ಲಿ ನೋಟುಗಳ ವಿನಿಯಮಕ್ಕೆ ದೇಶದ ಜನರಿಗೆ ಗಡುವು ನೀಡಿದೆ. ಇನ್ನು 4 ತಿಂಗಳಲ್ಲಿ 2,000 ರೂ. ಮುಖಬೆಲೆ ನೋಟಿಗೆ ಕೊನೆ ಮೊಳೆ ಕೂಡ ಬೀಳಲಿದೆ. ಆದರೆ ಜಿಲ್ಲೆಯ ಕಳಸ ತಾಲೂಕಿನ ತೇಜು ಎಂಬ ಯುವಕನ ಬದುಕಲ್ಲಿ ಎಷ್ಟೇ ವರ್ಷಗಳು ಕಳೆದರೂ ಆ 2,000 ರೂಪಾಯಿ ಮುಖಬೆಲೆಯ ನೋಟು ಅಚ್ಚಹಸಿರಾಗೇ ಇರಲಿದೆ.

ಏಕೆಂದರೆ, ಆ ಯುವಕ ಪ್ರಧಾನಿ ಮೋದಿ ಮೇಲಿನ ಅಭಿಮಾನಕ್ಕಾಗಿ ತನ್ನ ಮದುವೆಯ ಆಮಂತ್ರಣ ಪತ್ರಿಕೆಯ ಫ್ರೆಂಡ್ಸ್ ಕಾರ್ಡ್‍ನ್ನ 2,000 ರೂ. ನೋಟಿನಲ್ಲೇ ಮುದ್ರಣ ಹಾಕಿಸಿದ್ದ. ಆ ಮದುವೆ ಆಮಂತ್ರಣ ಪತ್ರಿಕೆಯನ್ನ ನೋಡಿದರೆ 2,000 ರೂ. ನೋಟನ್ನ ನೋಡುವುದೇ ಬೇಡ. ಅಷ್ಟು ಅಚ್ಚುಕಟ್ಟಾಗಿ ಮಾಡಿಸಿದ್ದರು. ನೋಟಿನಲ್ಲಿರುವ ನಂಬರ್, ನೋಟಿನ ಮಧ್ಯ ಭಾಗದಲ್ಲಿ ಇರುವ ಎಲ್ಲಾ ಭಾಷೆಯಲ್ಲಿ 2,000 ರೂ. ಎಂದು ಇರುವ ಜಾಗದಲ್ಲಿ ತನ್ನ ಹೆಸರಿನ ಜೊತೆ ಮದುವೆಯಾಗುವ ಹುಡುಗಿಯ ಹೆಸರನ್ನ ಹಾಕಿಸಿದ್ದರು. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಎಂದು ಇರುವ ಜಾಗದಲ್ಲಿ ಲವ್ ಬ್ಯಾಂಕ್ ಆಫ್ ಇಂಡಿಯಾ ಎಂದು ನಮೂದು ಮಾಡಿಸಿದ್ದರು. ಇದನ್ನೂ ಓದಿ: 2,000 ರೂ. ಮುಖಬೆಲೆಯ ನೋಟ್‌ ಬ್ಯಾನ್‌ ಮಾಡಿದ RBI

ನೋಟಿನ ಮಧ್ಯದಲ್ಲಿ ಮಹಾತ್ಮ ಗಾಂಧಿಜೀಯವರ ಫೋಟೋ ಇರುವ ಜಾಗದಲ್ಲಿ ವಧು-ವರರನ್ನ ಆಶೀರ್ವದಿಸುತ್ತಿರುವ ಗಣಪತಿಯ ಭಾವಚಿತ್ರವಿದೆ. ನೋಟಿನ ಮತ್ತೊಂದು ಬದಿಯಲ್ಲಿ ಸ್ಕ್ಯಾನರ್ ಕೂಡ ಇದ್ದು, ಅದನ್ನ ಸ್ಕ್ಯಾನ್ ಮಾಡಿದರೆ ಕಳಸ ತಾಲೂಕಿನ ಮದುವೆ ಮಂಟಪಕ್ಕೆ ಬರುವ ಮಾರ್ಗ ತೋರಿಸುವಂತಿತ್ತು. ಸುಮಾರು 1,500 ಕಾರ್ಡ್ ಮಾಡಿಸಿದ್ದ ಯುವಕ ಸ್ನೇಹಿತರಿಗೆಲ್ಲಾ ಅದೇ ಕಾರ್ಡ್ ಹಂಚಿದ್ದ. ಇದೀಗ ಆರ್‌ಬಿಐ 2,000 ನೋಟನ್ನ ಹಿಂಪಡೆಯುತ್ತಿರುವಂತೆ ಯುವಕ ತೇಜು ಸ್ನೇಹಿತರು ಆ ನೋಟಿನ ಇನ್ವಿಟೇಷನ್ ಕಾರ್ಡ್‌ ಕಳಿಸಿ ನೆನಪಿಸಿಕೊಳ್ಳುತ್ತಿದ್ದಾರೆ.

ಉಡುಪಿಯಲ್ಲಿ ಪ್ರಿಂಟ್ ಹಾಕಿಸಿದ್ದ ಈ ಕಾರ್ಡನ್ನ ಅಚ್ಚುಕಟ್ಟಾಗಿ ಪ್ರಿಂಟ್ ಹಾಕಿಕೊಡಲು ಉಡುಪಿಯ ಆಪ್‍ಸೆಟ್ ಪ್ರಿಂಟರ್‌ನವರು ಕೂಡ ವಾರಗಟ್ಟಲೇ ಟೈಂ ತೆಗೆದುಕೊಂಡಿದ್ದರು. ಇನ್ಮುಂದೆ ಅದೆಲ್ಲ ನೆನಪಷ್ಟೆ. ಮೋದಿ ಮೇಲಿನ ಅಭಿಮಾನಕ್ಕಾಗಿ ವಿಶೇಷವಾಗಿ ಮದುವೆ ಆಮಂತ್ರಣ ಕಾರ್ಡ್ ಮಾಡಿಸಬೇಕೆಂದು ಡಿಫರೆಂಟ್ ಆಗಿ ಕಾರ್ಡ್ ಮಾಡಿಸಿದ್ದ ಕಳಸ ತಾಲೂಕಿನ ಯುವಕನ ಬಾಳಲ್ಲಿ 2,000 ರೂಪಾಯಿ ನೋಟು ಎಂದೆಂದೂ ಅಚ್ಚಹಸಿರಾಗಿರಲಿದೆ. ಇದನ್ನೂ ಓದಿ: 2000 ರೂ.ಗೆ ಗುಡ್‌ಬೈ – ಗೊಂದಲ ಬೇಡ, ನಿಮ್ಮ ಹಲವು ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ

Share This Article