ಗಡಿ ಭಾಗದಲ್ಲಿ ಕನ್ನಡಾಂಬೆ ದೇಗುಲ ನಿರ್ಮಾಣಕ್ಕೆ ವಿಗ್ರಹ ಸಮೇತ ಯುವಕನ ಬೈಕ್‌ ಯಾತ್ರೆ

Public TV
2 Min Read

ಚಿಕ್ಕಬಳ್ಳಾಪುರ: ಕರ್ನಾಟಕ-ಮಹಾರಾಷ್ಟ್ರ ಗಡಿಭಾಗ ಬೆಳಗಾವಿಯಲ್ಲಿ ಕನ್ನಡಾಂಬೆ ಭುವನೇಶ್ವರಿ ದೇಗುಲ ನಿರ್ಮಾಣ ಮಾಡಬೇಕು ಎಂದು ಯುವಕನೊಬ್ಬ ಚಿಕ್ಕಬಳ್ಳಾಪುರದಿಂದ ಬೆಳಗಾವಿಗೆ ವಿಗ್ರಹ ಸಮೇತ ಬೈಕ್ ಯಾತ್ರೆ ಕೈಗೊಂಡಿದ್ದಾನೆ.

ಮೂಲತಃ ಹಾವೇರಿ ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಮುಗುಳಿ ಗ್ರಾಮದ ಮಂಜುನಾಥ ಭದ್ರಶೆಟ್ಟಿ ಯಾತ್ರೆ ಕೈಗೊಂಡಿರುವ ಯುವಕ.

ಈತ ಚಿಕ್ಕಬಳ್ಳಾಪುರ ತಾಲೂಕು ನಂದಿ ಕ್ರಾಸ್ ಬಳಿಯ ಕೋಚಿಮುಲ್ ಮೆಗಾಡೈರಿಯಲ್ಲಿ ಗುತ್ತಿಗೆ ಆಧಾರದ ಮೇಲೆ ಕಳೆದ 7 ವರ್ಷಗಳಿಂದ ಸೂಪರ್ ವೈಸರ್ ಆಗಿ ಕೆಲಸ ಮಾಡುತ್ತಿರುವ ಮಂಜುನಾಥ ಭದ್ರಶೆಟ್ಟಿ ಅಪ್ಪಟ ಕನ್ನಡಾಭಿಮಾನಿ. ಕಳೆದ ವರ್ಷ ಕೂಡ ಕರ್ನಾಟಕ-ಆಂಧ್ರ ಗಡಿ ಭಾಗ ಚಿಕ್ಕಬಳ್ಳಾಪುರದಿಂದ ಬೆಳಗಾವಿಗೆ ನಾಡಧ್ವಜ ಹೊತ್ತು ಪಾದಯಾತ್ರೆ ಕೈಗೊಂಡಿದ್ದಾಗ ಮಾರ್ಗ ಮಧ್ಯೆ ನಿಪ್ಪಾಣಿ ಬಳಿ ಕೆಲ ಮಹಾರಾಷ್ಟ್ರ ಮೂಲದವರು ನಾಡಧ್ವಜ ಸುಟ್ಟು ಹಾಕಿ ಪಾದಯಾತ್ರೆಗೆ ಅಡ್ಡಿಪಡಿಸಿ ಧಮ್ಕಿ ಹಾಕಿ ವಾಪಾಸ್ಸು ಕಳುಹಿಸಿದ್ದರು. ಇದನ್ನೂ ಓದಿ: ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ- ಸಂಪುಟ ಸಭೆಯಲ್ಲಿ ದಿನಾಂಕ ನಿಗದಿ: ಸಿಎಂ ಸ್ಪಷ್ಟನೆ

ಕರ್ನಾಟಕದ ಬೆಳಗಾವಿಯಲ್ಲಿ ಭುವನೇಶ್ವರಿ ದೇಗುಲ ನಿರ್ಮಾಣ ಮಾಡಲೇಬೇಕು ಎಂದು ಪಣ ತೊಟ್ಟಿರುವ ಯುವಕ, ಕಲ್ಲಿನ ವಿಗ್ರಹವನ್ನು ಹಿಂದೂಪುರದಲ್ಲಿ ಸಿದ್ದಪಡಿಸಿಕೊಂಡು ನವೆಂಬರ್ 1 ರಿಂದ ಕರ್ನಾಟಕ-ಆಂಧ್ರ ಗಡಿಭಾಗದ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರಿನಿಂದ ಬೆಳಗಾವಿಗೆ ಬೈಕ್ ಯಾತ್ರೆ ಕೈಗೊಂಡಿದ್ದಾನೆ. ಸರಿಸುಮಾರು 2 ಅಡಿ ಎತ್ತರದ ವಿಗ್ರಹವನ್ನು ಸ್ಕೂಟಿಯ ಹಿಂಬದಿ ಸೀಟಿನಲ್ಲಿ ಇಟ್ಟುಕೊಂಡು ಬೆಳಗಾವಿಯತ್ತ ಪ್ರಯಾಣ ಬೆಳೆಸಿದ್ದಾನೆ. ಸರಿಸುಮಾರು 700 ಕಿಲೋಮೀಟರ್‌ಗಳ ಬೈಕ್ ಯಾತ್ರೆ ಕೈಗೊಂಡಿದ್ದಾರೆ. ಸಿದ್ಧಗಂಗಾ ಮಠದ ಶ್ರೀಗಳಿಂದಲೂ ಯಾತ್ರೆಗೆ ಆಶೀರ್ವಾದ ಪಡೆದಿದ್ದಾರೆ. ಅಲ್ಲದೇ ಅನೇಕ ಕನ್ನಡಪರ ಸಂಘಟನೆಗಳೂ ಬೆಂಬಲ ಸೂಚಿಸಿವೆ. ಕರ್ತವ್ಯಕ್ಕೆ 10 ದಿನಗಳ ಕಾಲ ರಜೆ ಹಾಕಿ ನವೆಂಬರ್ 1 ರಿಂದ ಯಾತ್ರೆ ಆರಂಭಿಸಿದ್ದಾರೆ.

ವಿಗ್ರಹದ ತಯಾರಿಗೆ ಬೇಕಾದ ಹಣವನ್ನು ಕೋಚಿಮುಲ್‌ನ ಮಾಜಿ ನಿರ್ದೇಶಕ ಕಾಂತರಾಜು ಅವರು ಧನ ಸಹಾಯ ಮಾಡಿದ್ದಾರೆ. ಮಂಜುನಾಥ್ ಬಳಿ ಬೈಕ್ ಇಲ್ಲದ ಕಾರಣ ತಮ್ಮ ಸಹೋದ್ಯೋಗಿಯಿಂದ ಬೈಕ್‌ನ್ನು ಯಾತ್ರೆಗಾಗಿ ಪಡೆದುಕೊಂಡಿದ್ದಾರೆ. ಇದನ್ನೂ ಓದಿ: ಅಪ್ಪು ಸಮಾಧಿ ಬಳಿ ನೃತ್ಯ ನಮನ ಸಲ್ಲಿಸಿದ ಪುಟಾಣಿಗಳು

“ಬೆಳಗಾವಿಯಲ್ಲಿ ದೇವಾಲಯಕ್ಕೆ ಜಿಲ್ಲಾಡಳಿತ ಯಾವುದೇ ಜಾಗ ಮೀಸಲಿಟ್ಟಿಲ್ಲ. ದೇಗುಲಕ್ಕಾಗಿ ಜಾಗ ಕೊಡುವುದಾಗಿಯೂ ಹೇಳಿಲ್ಲ. ಹೀಗಾಗಿ ಬೆಳಗಾವಿಯಲ್ಲಿ ದೇಗುಲ ನಿರ್ಮಾಣಕ್ಕೆ ಜಾಗ ಕೊಡಬೇಕು. ಸ್ಥಳೀಯ ಕನ್ನಡಪರ ಸಂಘಟನೆಗಳು ಸಾಥ್ ನೀಡಬೇಕು. ಬೆಳಗಾವಿ ತಲುಪುವಷ್ಟರಲ್ಲಿ ಸರ್ಕಾರ ಜಾಗ ಗುರುತಿಸಿ ದೇಗುಲ ನಿರ್ಮಾಣ ಕಾರ್ಯಕ್ಕೆ ಅನುವು ಮಾಡಿಕೊಡಬೇಕು” ಎಂದು ಮಂಜುನಾಥ್‌ ಒತ್ತಾಯಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *