ಮಂಗಳೂರು: ಯುವತಿಯರು ಬಟ್ಟೆ ಬದಲಿಸುವ ವೀಡಿಯೋ ಮಾಡಿ ವೈರಲ್ ಮಾಡಿದ್ದ ಆರೋಪದಡಿ ರೂಮ್ ಮೇಟ್ ಆಗಿದ್ದ ಮತ್ತೊಬ್ಬ ಯುವತಿಯನ್ನು ಪೊಲೀಸರು ಬಂಧಿಸಿದ್ದಾರೆ.
ಚಿಕ್ಕಮಗಳೂರು ಜಿಲ್ಲೆಯ ಕಲಶದ ಯುವತಿ ಬಂಧಿತ ಆರೋಪಿ. ಮಂಗಳೂರಿನ ಕದ್ರಿ ಪೊಲೀಸರು ಆಕೆಯನ್ನು ಬಂಧಿಸಿದ್ದಾರೆ.
ಮಂಗಳೂರಿನ ಕುದ್ಕೋರಿಗುಡ್ಡೆಯ ಮನೆಯೊಂದರಲ್ಲಿ ಯುವತಿಯರು ಬಾಡಿಗೆಗಿದ್ದರು. ಮಂಗಳೂರಿನಲ್ಲಿ ಉದ್ಯೋಗ ಮಾಡಿಕೊಂಡು ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಈ ವೇಳೆ ಯುವತಿಯರಿಬ್ಬರ ಬಟ್ಟೆ ಬದಲಿಸುವ ವಿಡಿಯೋವನ್ನು ಆರೋಪಿ ಯುವತಿ ಮಾಡಿದ್ದಳು. ವಿಡಿಯೋ ಮಾಡಿ ಉಡುಪಿ ಜಿಲ್ಲೆಯ ಕಾರ್ಕಳ ನಿವಾಸಿಯೊಬ್ಬನಿಗೆ ಕಳುಹಿಸಿದ್ದ ಆರೋಪ ಈಕೆ ಮೇಲಿದೆ.
ಕಳೆದ ಅ.9 ರಂದು ಕಾರ್ಕಳದಲ್ಲಿ ಆ ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದ. ಸುದೀರ್ಘ ಡೆತ್‌ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾದ. ಡೆತ್‌ನೋಟ್‌ನಲ್ಲಿ ಯುವತಿ ಹಾಗೂ ಇತರರ ವಿರುದ್ಧ ಹನಿಟ್ರ‍್ಯಾಪ್ ಆರೋಪ ಮಾಡಿದ್ದ. ಅಲ್ಲದೇ ಯುವತಿ ತನ್ನ ರೂಮ್‌ನಲ್ಲಿದ್ದ ಇಬ್ಬರು ಯುವತಿಯರ ವಿಡಿಯೋ ಮಾಡಿ ವೈರಲ್ ಮಾಡಿದ್ದ ಬಗ್ಗೆಯೂ ಡೆತ್‌ನೋಟ್‌ನಲ್ಲಿ ಉಲ್ಲೇಖ ಮಾಡಿದ್ದ. ಜೊತೆಗೆ ಸಾಯುವ ಮುನ್ನ ವಾಟ್ಸಪ್ ಗ್ರೂಪ್ ಮಾಡಿ ಅದರಲ್ಲಿ ಕೆಲ ವಿಡಿಯೋ ಹರಿಬಿಟ್ಟಿದ್ದ. ಅದರಲ್ಲಿ ಈ ಇಬ್ಬರ ಯುವತಿಯರ ವಿಡಿಯೋ ಕೂಡ ಇದ್ದ ಹಿನ್ನೆಲೆ ಕದ್ರಿ ಠಾಣೆಗೆ ಯುವತಿಯರು ದೂರು ದಾಖಲಿಸಿದ್ದರು.
ಸದ್ಯ ಪ್ರಕರಣ ದಾಖಲಿಸಿಕೊಂಡು ಯುವತಿಯನ್ನು ಕದ್ರಿ ಪೊಲೀಸರು ಬಂಧಿಸಿದ್ದಾರೆ. ಬಿಎನ್‌ಎಸ್ 77, 78(2), 294(2)(ಚಿ) ಅಡಿ ಪ್ರಕರಣ ದಾಖಲಾಗಿದೆ.