ಹೋಟೆಲ್‌ನಲ್ಲಿ ಕೆಲಸ ಮಾಡ್ತಿದ್ದ ಕಾರ್ಮಿಕನ ಕೂಡಿಹಾಕಿ ಹಿಂಸೆ, ಹಲ್ಲೆ – ಚಿಕಿತ್ಸೆ ಫಲಿಸದೇ ಸಾವು

By
1 Min Read

ಬೆಳಗಾವಿ: ಹೋಟೆಲ್‌ನಲ್ಲಿ ಕೆಲಸ ಮಾಡ್ತಿದ್ದ ಕಾರ್ಮಿಕನ ಕೂಡಿಹಾಕಿ ಹಿಂಸೆ ನೀಡಿ, ಹಲ್ಲೆ ಮಾಡಿದ ಪರಿಣಾಮ ಗಂಭೀರ ಗಾಯಗೊಂಡ ಯುವಕ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿರುವ ಘಟನೆ ಬೆಳಗಾವಿ (Belagavi) ಜಿಲ್ಲೆಯ ಖಾನಾಪುರ (Khanapura) ತಾಲೂಕಿನಲ್ಲಿ ನಡೆದಿದೆ.

ಮಾಣಿಕವಾಡಿ ನಿವಾಸಿ ವೆಂಕಪ್ಪ ಮೈಯೆಕರ್(18) ಸಾವನ್ನಪ್ಪಿದ ಕಾರ್ಮಿಕ ಎಂದು ಗುರುತಿಸಲಾಗಿದೆ. ಖಾನಾಪುರ ಹೊರವಲಯದ ಸ್ವರಾಜ್ ಹೋಟೆಲ್‌ನಲ್ಲಿ ಮೂರು ತಿಂಗಳಿನಿಂದ ಯುವಕ ಕೆಲಸ ಮಾಡುತ್ತಿದ್ದ. ಆ.20 ರಂದು ಯುವಕನ ಮೇಲೆ ಕಳ್ಳತನ ಆರೋಪ ಹೊರಿಸಿ, ಆತನನ್ನು ಕೂಡಿ ಹಾಕಿ ಹೋಟೆಲ್ ಮಾಲೀಕ ನಾಗೇಶ್ ಗುಂಡು ಬೆಡರೆ, ಸಹೋದರ ವಿಜಯ್ ಬೆಡರೆ ಕಿರುಕುಳ ನೀಡಿ, ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಇದನ್ನೂ ಓದಿ: ಸ್ಪೈ ಕ್ಯಾಮೆರಾ ಬಳಸಿ ಮಹಿಳೆ ವೀಡಿಯೋ ರೆಕಾರ್ಡ್‌ – ದೆಹಲಿಯಲ್ಲಿ ಪೈಲಟ್‌ ಬಂಧನ

 ತೀವ್ರವಾಗಿ ಗಾಯಗೊಂಡ ಯುವಕನನ್ನು ಬಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಗಂಭೀರ ಗಾಯಗೊಂಡಿದ್ದ ಯುವಕ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದ. ಈ ಬಗ್ಗೆ ಪ್ರಶ್ನೆ ಮಾಡಲು ಹೋದ ಯುವಕನ ಪೋಷಕರಿಗೆ ಹೋಟೆಲ್ ಮಾಲೀಕ 10 ಸಾವಿರ ರೂ. ಹಣ ನೀಡಿ, ದೂರು ನೀಡದಂತೆ ಧಮ್ಕಿ ಹಾಕಿದ್ದ ಎನ್ನಲಾಗಿದೆ. ಹೋಟೆಲ್ ಮಾಲೀಕನ ಧಮ್ಕಿಗೆ ಹೆದರಿ ಪೊಲೀಸರಿಗೆ ದೂರು ನೀಡಲು ಯುವಕನ ತಂದೆ, ತಾಯಿ ಹಿಂಜರಿದಿದ್ದರು. ಇದನ್ನೂ ಓದಿ: ಸಿಗರೇಟ್ ವಿಚಾರಕ್ಕೆ ಗಲಾಟೆ – ರಿಪೀಸ್‌ ಪಟ್ಟಿಯಿಂದ ಮಾರಣಾಂತಿಕ ಹಲ್ಲೆ, ಇಬ್ಬರು ಅರೆಸ್ಟ್

ಈ ವಿಚಾರ ತಿಳಿದ ಗ್ರಾಮಸ್ಥರು ಯುವಕನ ತಂದೆಯ ಬೆನ್ನಿಗೆ ನಿಂತು, ಖಾನಾಪುರ ಪೊಲೀಸ್ (Khanapura Police) ಠಾಣೆಗೆ ದೂರು ನೀಡಿದ್ದಾರೆ. ಇದೀಗ ಪೊಲೀಸರು ಕೊಲೆ ಕೇಸ್ ದಾಖಲಿಸಿಕೊಂಡಿದ್ದಾರೆ. ಇದ್ದ ಒಬ್ಬ ಮಗನನ್ನು ಕಳೆದುಕೊಂಡ ಪೋಷಕರು ಮಗನ ಸಾವಿಗೆ ನ್ಯಾಯ ಕೊಡಿಸುವಂತೆ ಕಣ್ಣೀರಿಟ್ಟಿದ್ದಾರೆ.

Share This Article