ಹುಲಿ ದಾಳಿಗೆ ಕುರಿಗಾಹಿ ಮಹಿಳೆ ಬಲಿ- 9 ದಿನಕ್ಕೆ ಜಿಲ್ಲೆಯಲ್ಲಿ 2ನೇ ಸಾವು

Public TV
1 Min Read

ಚಾಮರಾಜನಗರ: ಹುಲಿ ದಾಳಿಗೆ ಮಹಿಳೆ ಬಲಿಯಾಗಿರುವ ಘಟನೆ ಗುಂಡ್ಲುಪೇಟೆ ತಾಲೂಕಿನ‌ ದೇಶಿಪುರ ಕಾಲೊನಿಯಲ್ಲಿ ನಡೆದಿದೆ. ಜಿಲ್ಲೆಯಲ್ಲಿ ಇದು ಎರಡನೇ ಸಾವಾಗಿದೆ.

ದೇಶಿಪುರ ಕಾಲೊನಿಯ ಪುಟ್ಟಮ್ಮ ಎಂಬಾಕೆ ಹುಲಿಗೆ ಬಲಿಯಾದವರು. ಕಾಲೊನಿ ಸಮೀಪ ಕುರಿಗಳನ್ನು ಮೇಯಿಸುವಾಗ ಹುಲಿಯೊಂದು ಏಕಾಏಕಿ ಮೇಲೆರಗಿದ್ದು ಕುತ್ತಿಗೆ, ಎದೆಭಾಗ, ಹೊಟ್ಟೆ ಭಾಗದಲ್ಲಿ ಬಲವಾಗಿ ದಾಳಿ ನಡೆಸಿ ಕೊಂದಿದೆ. ನಂತರ, ಮಹಿಳೆಯನ್ನು ಅರಣ್ಯದೊಳಗೆ ಎಳೆದೊಯ್ದಿತ್ತು. ಗ್ರಾಮಸ್ಥರು ಹುಡುಕಾಡಿದಾಗ ಪುಟ್ಟಮ್ಮನ ಶವ ದೊರೆತಿದೆ. ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಓಂಕಾರ ಅರಣ್ಯ ವಲಯ ವ್ಯಾಪ್ತಿಯಲ್ಲಿ ಈ ಹುಲಿ ದಾಳಿ ನಡೆದಿದೆ.

ಬಂಡೀಪುರ ಸಿಎಫ್ಒ ಪ್ರಭಾಕರನ್ ಮಾತನಾಡಿ, ಮಹಿಳೆ ಹುಲಿ ದಾಳಿಗೆ ಮೃತಪಟ್ಟಿರುವುದು ದೃಢಪಟ್ಟಿದೆ. ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುವುದು. ಹುಲಿ ಸೆರೆಗೆ ಕಾರ್ಯಾಚರಣೆ ನಡೆಸಲಾಗುವುದು ಎಂದರು.

ಕಳೆದ 10 ರಂದು ಚಾಮರಾಜನಗರ ತಾಲೂಕಿನ ಬೇಡಗುಳಿಯಲ್ಲಿ ಬಹಿರ್ದೆಸೆಗೆಂದು ತೆರಳಿದ್ದ ಮಹಿಳೆ ಮೇಲೆ ಹುಲಿ ದಾಳಿ ಮಾಡಿ ದೇಹದ ಅಲ್ಪಸ್ವಲ್ಪ ತಿಂದಿತ್ತು. ಬಳಿಕ, ಬಿಆರ್‌ಟಿ ಅರಣ್ಯಾಧಿಕಾರಿಗಳು ಕಾರ್ಯಾಚರಣೆ ನಡೆಸಿ ಕೆಲವೇ ತಾಸುಗಳಲ್ಲಿ ಹುಲಿ ಸೆರೆ ಹಿಡಿದಿದ್ದರು.

Share This Article