ಪ್ರಿಯಕರನ ಜೊತೆ ಸೇರಿ ಪತಿ ಕೊಲೆ; ಮೃತದೇಹ ಸುಟ್ಟುಹಾಕಲು ಹೋಗಿದ್ದ ಆರೋಪಿಗಳು ಪೊಲೀಸರಿಗೆ ಲಾಕ್‌

Public TV
1 Min Read

– ಪೊಲೀಸರ ಕಂಡೊಡನೆ ಶವವಿದ್ದ ಕಾರು ಬಿಟ್ಟು ಎಸ್ಕೇಪ್‌ಗೆ ಮುಂದಾಗಿದ್ದ ಆರೋಪಿಗಳು

ಕೋಲಾರ: ಅಕ್ರಮ ಸಂಬಂಧದ ಹಿನ್ನೆಲೆಯಲ್ಲಿ ಪ್ರಿಯಕರನೊಂದಿಗೆ ಸೇರಿ ಪತ್ನಿಯೇ ಪತಿಯನ್ನ ಕೊಲೆ ಮಾಡಿದ್ದ ಪ್ರಕರಣದಲ್ಲಿ ಮೂವರು ಆರೋಪಿಗಳನ್ನ ಪೊಲೀಸರು ಬಂಧಿಸಿದ್ದಾರೆ.

ಪತಿಯನ್ನ ಕೊಲೆ ಮಾಡಿ ತಲೆಮರೆಸಿಕೊಂಡಿದ್ದ ಪತ್ನಿ ಸೇರಿ ಮೂವರನ್ನ ಕೋಲಾರದ ರಾಯಲ್ಪಾಡು ಪೊಲೀಸರು ಬಂಧಿಸಿದ್ದಾರೆ. ಕೋಲಾರ ಜಿಲ್ಲೆ ಶ್ರೀನಿವಾಸಪುರ ತಾಲ್ಲೂಕು ರಾಯಲ್ಪಾಡು ಹೋಬಳಿಯ ಎಸ್.ಗೊಲ್ಲಪಲ್ಲಿ ಗ್ರಾಮದ ವೆಂಕಟರಮಣ ಎಂಬವನನ್ನ 2 ದಿನಗಳ ಹಿಂದೆ ಕೊಲೆ ಮಾಡಲಾಗಿತ್ತು. ವೆಂಕಟರಮಣನ ಪತ್ನಿ, ಆಕೆಯ ಪ್ರಿಯಕರ ವೇಣುಗೋಪಾಲ್ ಹಾಗೂ ಆತನಿಗೆ ಸಹಾಯ ಮಾಡಿದ ಬಾಲಾಜಿ ಎಂಬವರನ್ನ ಬಂಧಿಸಲಾಗಿದೆ.

ಆ.24 ರ ರಾತ್ರಿ ಕೊಲೆ ಮಾಡಿದ್ದ ಆರೋಪಿಗಳು, ವೆಂಕಟರಮಣ ಶವವನ್ನ ಬುಲೆರೋ ಕಾರ್‌ನಲ್ಲಿ ಹಾಕಿಕೊಂಡು ಚಿಕ್ಕಬಳ್ಳಾಪುರ, ತುಮಕೂರು, ಹಿಂದೂಪುರ ಸೇರಿ ಹಲವೆಡೆ ಸುತ್ತಾಡಿದ್ದರು. ಎಲ್ಲಿಯೂ ಶವವನ್ನು ಬಿಸಾಡಲು ಜಾಗ ಸಿಗದೇ ರಾಯಲ್ಪಾಡು ಬಳಿ ಅರಣ್ಯದಲ್ಲಿ ಸುಟ್ಟು ಹಾಕಲು ತೆರಳುವ ವೇಳೆ ಪೊಲೀಸರ ಕಂಡು ಕಾರು ಬಿಟ್ಟು ಪರಾರಿಯಾಗಲು ಯತ್ನಿಸಿದ್ದಾರೆ.

ನಂಬರ್ ಪ್ಲೇಟ್ ಮೇಲೆ ಸ್ಟಿಕ್ಕರ್ ಅಂಟಿಸಿದ್ದ ಹಿನ್ನೆಲೆ ಅನುಮಾನಗೊಂಡ ರಾಯಲ್ಪಾಡು ಪಿಎಸ್‌ಐ, ವಾಹನ ಪರಿಶೀಲನೆ ನಡೆಸಿದ ವೇಳೆ ಡಿಕ್ಕಿಯಲ್ಲಿ ವೆಂಕಟರಮಣನ ಶವ ಪತ್ತೆಯಾಗಿತ್ತು. ವೆಂಕಟರಮಣನನ್ನ ಕೊಂದ ಪತ್ನಿ ಸೇರಿ ಆಕೆಗೆ ಸಹಾಯ ಮಾಡಿ ಮೂವರು ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

Share This Article