ಬೆಂಗಳೂರು| ನೀರು ಹಿಡಿಯುವಾಗ ಕರೆಂಟ್ ಶಾಕ್‌ ಹೊಡೆದು ಮಹಿಳೆ ಸಾವು

Public TV
1 Min Read

– ಸ್ಥಳಕ್ಕೆ ಸಚಿವ ಜಮೀರ್ ಬಂದು ನಮಗೆ ನ್ಯಾಯ ಕೊಡಬೇಕು: ಜನರ ಬಿಗಿಪಟ್ಟು

ಬೆಂಗಳೂರು: ನೀರು ಹಿಡಿಯುವಾಗ ಕರೆಂಟ್ ಶಾಕ್ ಹೊಡೆದು ಮಹಿಳೆ ದಾರುಣ ಸಾವಿಗೀಡಾಗಿರುವ ಘಟನೆ ಕೆ.ಆರ್. ಮಾರ್ಕೆಟ್ ರಸ್ತೆಯ ಆನಂದಪುರದಲ್ಲಿ ನಡೆದಿದೆ.

ಸೆಲ್ವಿ ಮೃತ ಮಹಿಳೆ. ಇಲ್ಲಿರುವ ಯಾವ ಮನೆಗೂ ನೀರಿನ ಸಂಪರ್ಕ ಇಲ್ಲ. ದೊಡ್ಡ ಪೈಪ್‌ನಲ್ಲಿ ಅಲ್ಲಲ್ಲಿ ಮೋಟರ್ ಕನೆಕ್ಷನ್ ನೀಡಲಾಗಿದೆ. ಮೋಟರ್ ಸ್ಟಾರ್ಟ್ ಮಾಡುವಾಗ ಕರೆಂಟ್ ತಗುಲಿ ಮಹಿಳೆ ಮೃತಪಟ್ಟಿದ್ದಾರೆ. ಇಂದು ಬೆಳಗ್ಗೆ 5:30ರ ಸುಮಾರಿಗೆ ದುರ್ಘಟನೆ ಸಂಭವಿಸಿದೆ. ಇದನ್ನೂ ಓದಿ: ಉಡುಪಿ| ನಟೋರಿಯಸ್ ರೌಡಿ ಇಸಾಕ್ ಕಾಲಿಗೆ ಗುಂಡೇಟು

ಆಕ್ರೋಶಗೊಂಡ ಸ್ಥಳೀಯರಿಂದ ರಸ್ತೆ ತಡೆ ನಡೆಸಿ ಪ್ರತಿಭಟನೆ ಮಾಡಿದ್ದಾರೆ. ಪರಿಣಾಮ ಮಾರ್ಕೆಟ್ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದೆ. ಚಾಮರಾಜಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಮೈಸೂರು ರಸ್ತೆ ಎರಡೂ ಕಡೆ ಸಂಪೂರ್ಣ ಬಂದ್ ಆಗಿದ್ದು, ನ್ಯಾಯ ಬೇಕು ಎಂದು ಘೋಷಣೆ ಕೂಗಿ ಸಾರ್ವಜನಿಕರು ಪ್ರತಿಭಟಿಸಿದ್ದಾರೆ. ಜಲಮಂಡಳಿ ವಿರುದ್ಧ ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ: ದೆಹಲಿಯಲ್ಲಿ ಇಂಗ್ಲೆಂಡ್‌ ಮೂಲದ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ

ಹಲವು ವರ್ಷಗಳಿಂದ ನೀರಿನ ಸಮಸ್ಯೆ ಬಗೆಹರಿದಿಲ್ಲ. ನೀರಿಗಾಗಿ ಪರದಾಡ್ತಿದ್ದೀವಿ. ನೀರು ಕೇಳಿದರೆ ನಮ್ಮ ಮೇಲೆ ಎಫ್‌ಐಆರ್ ಹಾಕ್ತಾರೆ. ನೀರು ಕೊಟ್ಟಿದ್ರೆ ನಾವ್ಯಾಕೆ ಮೋಟರ್ ಹಾಕ್ತಿದ್ವಿ ಎಂದು ಸ್ಥಳೀಯ ಶಾಸಕ ಜಮೀರ್ ವಿರುದ್ಧ ಜನರು ಕಿಡಿಕಾರಿದ್ದಾರೆ.

ನಾಲ್ಕೈದು ಜನ ಇದೇ ರೀತಿ ಸಾವನ್ನಪ್ಪಿದ್ದಾರೆ. ಯಾರೂ ನಮ್ಮ ಸಮಸ್ಯೆ ಕೇಳ್ತಿಲ್ಲ. ನಮ್ಮ ಸಮಸ್ಯೆ ಈಡೇರಿಲ್ಲ ಅಂದ್ರೆ, ಸಾವಿಗೆ ನ್ಯಾಯ ಸಿಕ್ಕಿಲ್ಲ ಅಂದ್ರೆ ನಮ್ಮ ಪ್ರತಿಭಟನೆ ಮುಂದುವರೆಯುತ್ತೆ ಎಂದು ಸಂಪೂರ್ಣ ರಸ್ತೆ ಬಂದ್ ಮಾಡಿ ಜನರು ಕುಳಿತಿದ್ದಾರೆ.

ಸಚಿವ ಜಮೀರ್ ಅಹ್ಮದ್ ಅವರು ಸ್ಥಳಕ್ಕೆ ಬರಬೇಕು. ಕೇವಲ ವೋಟ್ ಕೇಳೋಕೆ ಬರ್ತಾರೆ. ನೀರಿಗಾಗಿ ಪ್ರಾಣಗಳು ಹೋಗ್ತಿವೆ. ನೀರಿಗಾಗಿ ನಮ್ಮ ಪರದಾಟ ಮುಂದುವರೆದಿದೆ. ನಮ್ಮ ನೀರಿನ ಸಮಸ್ಯೆ ಬಗೆಹರಿಯಬೇಕು, ಸಾವಿಗೆ ನ್ಯಾಯ ಸಿಗಬೇಕು. ಸಚಿವ ಜಮೀರ್ ಅವ್ರು ಬರೋವರೆಗೂ ನಾವು ಬಿಡಲ್ಲ. ಮೈಸೂರು ರಸ್ತೆ ಸಂಪೂರ್ಣ ಬಂದ್ ಮಾಡಿ ಆಕ್ರೋಶ ಹೊರಹಾಕಿದ್ದಾರೆ.

Share This Article