ರಾಜಕುಮಾರನ ಜೇಮ್ಸ್ ಜಾತ್ರೆ – ಸಿನಿಮಾದಲ್ಲಿ ಸಾವು ಗೆದ್ದ ಅಪ್ಪು ಬದುಕಲ್ಲಿ ಗೆಲ್ಲಬಾರದಿತ್ತೇ..!

Public TV
2 Min Read

* ಪವಿತ್ರ ಕಡ್ತಲ, ಮೆಟ್ರೋ ಬ್ಯೂರೋ ಚೀಫ್, ಪಬ್ಲಿಕ್ ಟಿವಿ

ಶಿಳ್ಳೆ , ಚಪ್ಪಾಳೆ, ಹರ್ಷೋದ್ಘಾರ, ಪಟಾಕಿಯ ಸದ್ದು, ಹಾಲಿನ ಅಭಿಷೇಕ ಇಡೀ ಬೆಂಗಳೂರಿನಲ್ಲಿ ಇಂದು ಪುನೀತೋತ್ಸವ. ಆದ್ರೇ ಇವೆಲ್ಲವನ್ನೂ ಮೀರಿ ಪ್ರತಿಯೊಬ್ಬರ ಮನದಲ್ಲಿ ದುಃಖದ ಕಾರ್ಮೋಡವಿತ್ತು. ಜೇಮ್ಸ್ ಸಿನಿಮಾದಲ್ಲಿ ಅಪ್ಪು ಖಡಕ್ ಲುಕ್, ಫಿಟ್ ಆಂಡ್ ಫೈನ್ ಆಗಿ ರಾಯಲ್ ಆಗಿ ಕಾಣ್ತಿರುವ ಅಪ್ಪು ನಿಜವಾಗಲೂ ಇನ್ನಿಲ್ವಾ… ಸಿನಿಮಾದಲ್ಲಿ ಅಬ್ಬರಿಸ್ತಾ ಇರುವ ಈ ರಾಜ ನಮ್ಮನ್ನು ಹೀಗೆ ಬಿಟ್ಟು ಹೋಗೇಬಿಟ್ರಾ ಎನ್ನುವ ನೋವಿನ ಭಾವ ಪ್ರತಿ ಕ್ಷಣದಲ್ಲಿ ಮತ್ತೆ ಮತ್ತೆ ಕಾಡಿ ಎದೆ ಭಾರವೆನಿಸುವ ಕ್ಷಣವದು.

ಅಪ್ಪುವಿನ ಫುಲ್ ಪ್ರೇಮ್ ಥಿಯೇಟರ್ ಪರದೆಯಲ್ಲಿ ಬಂದಾಗೆಲ್ಲ ದುಃಖ ತಡೆಯಲಾರದೇ ಅದೆಷ್ಟೋ ಜನ ಸ್ಕ್ರೀನ್ ತಬ್ಬಿ ಹಿಡಿದು ಅಪ್ಪು ಅಪ್ಪು ಅಂತಾ ಮೌನವಾಗಿ ಕಣ್ಣೀರಾದ್ರು. ಹೀಗೆ ನಡುನೀರಿನಲ್ಲಿ ತಾನು ಕೋಟ್ಯಂತರ ಅಭಿಮಾನಿಗಳನ್ನು ಬಿಟ್ಟು ಹೋಗುತ್ತೇನೆ, ಇವರೆಲ್ಲ ನನ್ನ ಸಾವನ್ನು ಅರಗಿಸಿಕೊಳ್ಳಲಾರರು ಅಂತಾ ಅಪ್ಪುವಿಗೆ ಮೊದಲೇ ಗೊತ್ತಿದ್ದು, ಆ ನೋವಿಗೆ ಮುಲಾಮು ಹಚ್ಚೋಕೆ ಜೇಮ್ಸ್ ಸಿನಿಮಾ ಮಾಡಿದ್ರಾ ಅನ್ನೋವಷ್ಟು ಕಾಡಿಬಿಡುತ್ತೆ ಸಿನಿಮಾ. ಇದನ್ನೂ ಓದಿ: ಗುರುವಾರಕ್ಕೂ ಪುನೀತ್ ಸಿನಿಮಾ ರಿಲೀಸಿಗೂ ಏನದು ನಂಟು?

ಜೇಮ್ಸ್ ಇಡೀ ಸಿನಿಮಾದ ಕಥೆ, ಸಂದೇಶ, ಡ್ಯಾನ್ಸು ಸಾಂಗ್ಸ್.. ಊಹೂ ಅದ್ಯಾವುದೂ ಅಭಿಮಾನಿಗಳ ಪಾಲಿಗೆ ಮುಖ್ಯವಾಗಲೇ ಇಲ್ಲ. ಕೇವಲ ಅಪ್ಪು ಜಪ. ಅಪ್ಪುವನ್ನು ಕಣ್ಣುತುಂಬಿಸಿಕೊಳ್ಳುವ ತವಕ. ಮತ್ತೆ ಎಂದೂ ತೆರೆಯ ಮೇಲೆ ಈ ‘ರಾಜಕುಮಾರ’ನ ನೋಡಲಾರೆವು ಎನ್ನುವ ಕಹಿ ಸತ್ಯ ಪದೇ ಪದೇ ಕಣ್ಣೀರಾಗಿಸುವ ಸಂದರ್ಭದಲ್ಲಿಯೂ ಜೇಮ್ಸ್ ಕೋಟಿ ಕಂಗಳ ಕಣ್ಣೀರು ಒರೆಸುವ ಪುಟ್ಟ ಕರ್ಚೀಫಿನಂತೆ, ಥೇಟು ಅಪ್ಪುವಿನ ನಿಷ್ಕಲ್ಮಷ ನಗೆಯಂತೆ ಕಾಣಿಸಿದೆ.

ಅಪ್ಪು ಕೊನೆಯ ಸಿನಿಮಾ ಹೇಗಿದೆ..!?: ಚೇತನ್ ಕುಮಾರ್ ನಿರ್ದೇಶನದ ಜೇಮ್ಸ್ ನಲ್ಲಿ ಅಪ್ಪುವಿನದ್ದು ಸೆಕ್ಯೂರಿಟಿ ಏಜೆನ್ಸಿ ಸಿಬ್ಬಂದಿ ಹಾಗೂ ಸೈನಿಕನಾಗಿ ಡಬಲ್ ಶೇಡ್ ಇರುವ ಪಾತ್ರ. ಇಡೀ ಸಮಾಜವನ್ನು ಡ್ರಗ್ಸ್ ಮಾಫಿಯವನ್ನು ಕಿತ್ತೊಗೆಯಲು ನಾಯಕನ ಶ್ರಮ ಸಿನಿಮಾದ ಹೈಲೈಟ್ಸ್. ಇದನ್ನೂ ಓದಿ: ಮದಗಜ ಚಿತ್ರ ಖ್ಯಾತಿಯ ನಿರ್ದೇಶಕ ಮಹೇಶ್ ಕಂಡಂತೆ ‘ಜೇಮ್ಸ್’ ಸಿನಿಮಾ: ಸೆಲೆಬ್ರಿಟಿ ಫಸ್ಟ್ ರಿವ್ಯೂ

ಸೈನಿಕ ಹಾಗೂ ಏಜೆನ್ಸಿ ಸೆಕ್ಯೂರಿಟಿ ಆಗಿ ಡಬಲ್ ಶೇಡ್‍ನಲ್ಲಿ ಪಾತ್ರ ನಿರ್ವಹಿಸಿದ ಪುನೀತ್‍ಗೆ ಗೆ ಪ್ರಿಯಾ ಆನಂದ್ ಜೋಡಿಯಾಗಿದ್ದಾರೆ. ಆರಂಭದಲ್ಲಿಯೇ ಕಾರ್ ಚೇಸಿಂಗ್ ನಲ್ಲಿ ಪವರ್ ಸ್ಟಾರ್ ಮಾಸ್ ಎಂಟ್ರಿ ಅಭಿಮಾನಿಗಳ ಮೈಯಲ್ಲಿ ಮಿಂಚು ಹರಿಸುತ್ತೆ. ಇನ್ನು ಅಪ್ಪು ಫೈಟಿಂಗ್, ಯಾರೂ ಬೀಟ್ ಮಾಡಲು ಆಗದ ಸಕತ್ ಡ್ಯಾನ್ಸ್, ಜೇಮ್ಸ್ ಸಿನಿಮಾದ ಸೆಂಟರ್ ಆಫ್ ಅಟ್ರ್ಯಾಕ್ಷನ್. ಅಪ್ಪುವಿನ ಧ್ವನಿಯನ್ನು ಕೊಂಚ ಮಿಸ್ ಮಾಡಿಕೊಳ್ಳುವ ಅಭಿಮಾನಿಗಳಿಗೆ ಶಿವಣ್ಣನ ಧ್ವನಿ ಕೊಂಚ ಸಮಾಧಾನ ಕೊಡುತ್ತೆ.

ಸಿನಿಮಾದಲ್ಲಿ ಸಾವು ಗೆದ್ದ ಅಪ್ಪು..! ರಿಯಲ್ ಲೈಫ್ ನಲ್ಲಿ ಚಾನ್ಸ್ ಕೊಡದ ವಿಧಿ.!: ರಿಯಲ್ ಲೈಫ್ ನಲ್ಲಿ ಕೊಂಚವೂ ವಿನಾಯಿತಿ ತೋರದಂತೆ ಅಪ್ಪುವನ್ನು ವಿಧಿ ಕಿತ್ತುಕೊಂಡಿತ್ತು. ಆದ್ರೆ ಸಿನಿಮಾದಲ್ಲಿ ಅಪ್ಪು ಇಪ್ಪತ್ತು ದಿನಗಳ ಕಾಲ ಐಸಿಯುನಲ್ಲಿದ್ದು ಸಾವು ಬದುಕಿನ ಮಧ್ಯೆ ಹೋರಾಡಿ ಸಾವು ಗೆಲ್ಲುವ ಸೀನ್ ಅಭಿಮಾನಿಗಳನ್ನು ಕಣ್ಣೀರಗಾಗಿಸಿತು. ನಿಜ ಜೀವನದಲ್ಲೂ ಹೀಗಾಗಬಾರದಾಗಿತ್ತೇ.., ಅಪ್ಪು ಒಂದು ಬಾರಿ ಎದ್ದು ಬರಬಾರದಿತ್ತೇ ಅಂತಾ ಅನಿಸುವಂತಿತ್ತು. ಅಭಿಮಾನಿಗಳ ಕಣ್ಮನ ತಣಿಸುವ ಪುನೀತ್ ಸಂಭ್ರಮ ಜೇಮ್ಸ್ ಜಾತ್ರೆಯನ್ನು ತಡಮಾಡದೇ ಕಣ್ತುಂಬಿಸಿಕೊಳ್ಳಿ. ಇದನ್ನೂ ಓದಿ: ‘ಜೇಮ್ಸ್’ ಸಿನಿಮಾ ಫಸ್ಟ್ ಹಾಫ್ ಹೇಗಿದೆ? – ಕಣ್ಣಿಗೆ ಹಬ್ಬ, ಮನಸ್ಸಿಗೆ ಬೇಸರ

Share This Article
Leave a Comment

Leave a Reply

Your email address will not be published. Required fields are marked *