ತಾಯಿ ಶವವನ್ನು ಹೆಗಲ ಮೇಲೆ ಹೊತ್ತೊಯ್ದ ಮಗ- ಬಳ್ಳಾರಿಯಲ್ಲೊಂದು ಮನಕಲಕುವ ಘಟನೆ

Public TV
1 Min Read

ಹೊಸಪೇಟೆ: ಸರ್ಕಾರಿ ಆಸ್ಪತ್ರೆಯಲ್ಲಿ ಸರಿಯಾದ ಚಿಕಿತ್ಸೆ ನೀಡದೆ ತನ್ನ ಪೋಷಕರಿಬ್ಬರೂ ಒಂದೇ ದಿನ ಮೃತಪಟ್ಟಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ ವ್ಯಕ್ತಿಯೊಬ್ಬ, ಆಸ್ಪತ್ರೆ ಸಿಬ್ಬಂದಿ ವಿರುದ್ಧ ಪ್ರತಿಭಟನಾರ್ಥವಾಗಿ ತಾಯಿ ಶವವನ್ನು ಹೆಗಲ ಮೆಲೇಯೇ ಹೊತ್ತು ಹೊರನಡೆದಿದ್ದಾರೆ. ಇದಕ್ಕೆ ಸಂಬಂಧಿಸಿದ ಚಿತ್ರಗಳು ಸೋಮವಾರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಮೂಲತಃ ಬಳ್ಳಾರಿ ತಾಲೂಕಿನ ಕೊರ್ಲಗುಂದಿಯ ಮಾರೆಪ್ಪ (76) ಹಾಗೂ ಅವರ ಪತ್ನಿ ತಿಪ್ಪಮ್ಮ (70) ಅವರನ್ನು ಭಾನುವಾರ ಬೆಳಗ್ಗೆ ಇಲ್ಲಿನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸಂಜೆ ವೇಳೆ ಮಾರೆಪ್ಪ ಮೃತಪಟ್ಟರೆ, ರಾತ್ರಿ ತಿಪ್ಪಮ್ಮ ಮೃತಪಟ್ಟಿದ್ದಾರೆ. ಹೀಗಾಗಿ ಸರಿಯಾಗಿ ಚಿಕಿತ್ಸೆ ನೀಡದೇ ಇರುವುದರಿಂದಲೇ ತನ್ನ ತಂದೆ-ತಾಯಿ ಮೃತ ಪಟ್ಟಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿ ಮೃತ ದಂಪತಿಯ ಮಗ ರವಿ, ವೈದ್ಯರಿಗೂ ತಿಳಿಸದೆ, ಸ್ಟ್ರೆಚರ್ ನೆರವೂ ಕೇಳದೆ ತನ್ನ ತಾಯಿಯ ಶವವನ್ನು ಹೊತ್ತು ಹೊರ ನಡೆದಿದ್ದಾರೆ.

ಘಟನೆ ಬಗ್ಗೆ ಪ್ರತಿಕ್ರಿಯಿಸಿದ ರವಿ ಅವರ ಹಿರಿಯ ಸಹೋದರ ತಿರುಪತಿ, ಬೆಳಿಗ್ಗೆಯೇ ಆಸ್ಪತ್ರೆಗೆ ದಾಖಲಿಸಿದ್ದರೂ ಅಲ್ಲಿಯ ಸಿಬ್ಬಂದಿ ಸಂಜೆವರೆಗೂ ವೃಥಾ ಕಾಲಹರಣ ಮಾಡಿದ್ದರು. ಅಪ್ಪನ ಶವವನ್ನು ಸಾಗಿಸುವ ಸಿದ್ಧತೆಯಲ್ಲಿದ್ದಾಗಲೇ ರಾತ್ರಿ ತಾಯಿಯೂ ತೀರಿಕೊಂಡರು. ಅಲ್ಲಿನ ಸಿಬ್ಬಂದಿ ಸ್ಟ್ರೆಚರ್, ಆಂಬುಲೆನ್ಸ್ ವ್ಯವಸ್ಥೆಯನ್ನೂ ಮಾಡಿಕೊಡಲಿಲ್ಲ. ಇದರಿಂದ ಬೇಸತ್ತ ನನ್ನ ತಮ್ಮ, ತಾನೇ ಶವ ಹೊತ್ತು ಸಾಗಿಸಿದ ಎಂದು ಹೇಳಿದರು. ಹೊಸಪೇಟೆ ತಾಲೂಕಿನ ಗಾಳೆಮ್ಮನ ಗುಡಿ ಗ್ರಾಮದಲ್ಲಿ ಸೋಮವಾರ ಸಂಜೆ ಇಬ್ಬರದ್ದೂ ಅಂತ್ಯಸಂಸ್ಕಾರ ನೆರವೇರಿಸಲಾಯಿತು ಎಂದು ಅವರು ತಿಳಿಸಿದರು.

ಈ ಘಟನೆಯಲ್ಲಿ ವೈದ್ಯರಲ್ಲಿ ಮಾನವೀಯತೆಯೇ ಮರೆತು ಹೋಗಿದ್ದು, ಚಿಕಿತ್ಸೆ ನೀಡಲು ನಿರ್ಲಕ್ಷ್ಯವಹಿಸಿದವರ ವಿರುದ್ಧ ಕಠಿಣ ಕ್ರಮಕೈಗೊಳ್ಳಲು ಅಗ್ರಹಿಸಿದ್ದಾರೆ.

https://www.youtube.com/watch?v=zIOOhuEd6fE

Share This Article
Leave a Comment

Leave a Reply

Your email address will not be published. Required fields are marked *