ರಾಷ್ಟ್ರಪತಿಗಳಿಗೆ ಬಂದ ರಹಸ್ಯ ಪತ್ರದಿಂದ ಭಾರತ, ಚೀನಾ ಸಂಬಂಧ ಸುಧಾರಣೆ!

By
2 Min Read

ನವದೆಹಲಿ: ಟ್ರಂಪ್‌ (Donald Trump) ಸುಂಕ ಸಮರ (Tariffs War) ಆರಂಭಿಸಿದ ಬೆನ್ನಲ್ಲೇ ಭಾರತ (India) ಮತ್ತು ಚೀನಾದ (China) ಸಂಬಂಧ ಈಗ ಉತ್ತಮವಾಗುತ್ತಿದೆ. ಈಗ ಎರಡು ದೇಶಗಳ ಮಧ್ಯೆ ಉತ್ತಮ ಸಂಬಂಧ ಬೆಳೆಯಲು ರಹಸ್ಯ ಪತ್ರ ಕಾರಣ ಎಂಬ ವಿಚಾರ ಬೆಳಕಿಗೆ ಬಂದಿದೆ.

ಈ ವರ್ಷದ ಆರಂಭದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಚೀನಾದೊಂದಿಗಿನ ವ್ಯಾಪಾರ ಸಮರ ಆರಂಭಿಸಿದ್ದರು. ಈ ಸಂದರ್ಭದಲ್ಲಿ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ (Xi Jinping) ಅವರು ರಾಷ್ಟ್ರಪತಿ ದ್ರೌಪದಿ ಮುರ್ಮು (Droupadi Murmu) ಅವರಿಗೆ ಖಾಸಗಿ ಪತ್ರವನ್ನು ಬರೆದಿದ್ದರು ಎಂದು ಮಾಧ್ಯಮವೊಂದು ವರದಿ ಮಾಡಿದೆ.

ಭಾರತದ ಜೊತೆ ಸಂಬಂಧವನ್ನು ಮರುಸ್ಥಾಪಿಸಲು ಚೀನಾ ಬಯಸಿದೆ ಎಂದು ಜಿನ್‌ಪಿಂಗ್‌ ಪತ್ರದಲ್ಲಿ ಉಲ್ಲೇಖಿಸಿದರು. ಈ ಪತ್ರವನ್ನು ರಾಷ್ಟ್ರಪತಿಗಳು ಕೂಡಲೇ ಪ್ರಧಾನಿ ಸಚಿವಾಲಯಕ್ಕೆ ಕಳುಹಿಸಿದ್ದರು. ಈ ಪತ್ರದ ಬಳಿಕ ಹದಗೆಟ್ಟಿದ್ದ ಭಾರತ ಮತ್ತು ಚೀನಾ ನಡುವಿನ ಸಂಬಂಧ ಹಂತ ಹಂತವಾಗಿ ಸುಧಾರಣೆಯಾಗತೊಡಗಿತು. ಇದನ್ನೂ ಓದಿ: ಒಂದಲ್ಲ, 4 ಬಾರಿ ಟ್ರಂಪ್‌ ಕರೆ ಮಾಡಿದ್ರೂ ಉತ್ತರಿಸದ ಮೋದಿ!

ಟ್ರಂಪ್ ಸುಂಕ ನೀತಿ ಪರಿಣಾಮ ಎರಡೂ ದೇಶಗಳು ಭಿನ್ನಾಭಿಪ್ರಾಯ ಬದಿಗೊತ್ತಿ ಮಾತುಕತೆ ನಡೆಸಲು ಮುಂದಾಯಿತು ಎಂದು ವರದಿಯಾಗಿದೆ. ನಂತರದ ದಿನ ವಿದೇಶಾಂಗ ಸಚಿವ ಜೈಶಂಕರ್‌ ಚೀನಾ ಪ್ರವಾಸ ಕೈಗೊಂಡು ಕ್ಸಿ ಜಿನ್‌ಪಿಂಗ್‌ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದರು.

ಭಾರತ ಮತ್ತು ಚೀನಾ ನಡುವಿನ ನೇರ ಪ್ರಯಾಣಿಕ ವಿಮಾನಗಳು ಕೆಲ ದಿನಗಳಲ್ಲಿ ಆರಂಭಗೊಳ್ಳುವ ಸಾಧ್ಯತೆಯಿದೆ. ಚೀನಾ ಭಾರತಕ್ಕೆ ಯೂರಿಯಾ ಸಾಗಣೆಯ ಮೇಲಿನ ನಿರ್ಬಂಧಗಳನ್ನು ಸಡಿಲಿಸಿದೆ. ಇನ್ನೊಂದು ಕಡೆ ಭಾರತ ಚೀನಿ ಪ್ರಜೆಗಳಿಗೆ ಪ್ರವಾಸಿ ವೀಸಾಗಳನ್ನು ಮತ್ತೆ ತೆರೆದಿದೆ. ಇದನ್ನೂ ಓದಿ: ಜಪಾನ್‌ಗೆ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿ

ಶಾಂಘೈ ಸಹಕಾರ ಸಂಸ್ಥೆ (SCO) ಶೃಂಗಸಭೆಗಾಗಿ ಈ ವಾರದ ಕೊನೆಯಲ್ಲಿ ನಡೆಯಲಿರುವ ತಮ್ಮ ಚೀನಾ ಪ್ರವಾಸದಲ್ಲಿ ಪ್ರಧಾನಿ ಮೋದಿ ಅಧ್ಯಕ್ಷ ಕ್ಸಿ ಅವರನ್ನು ಭೇಟಿಯಾಗಿ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ. 7 ವರ್ಷದ ನಂತರ ಮೋದಿಯವರು ಚೀನಾಗೆ ಭೇಟಿ ನೀಡುತ್ತಿದ್ದಾರೆ. ಕಳೆದ ವರ್ಷ ರಷ್ಯಾದ ಕಜಾನ್‌ನಲ್ಲಿ ನಡೆದ ಬ್ರಿಕ್ಸ್ ಶೃಂಗಸಭೆಯಲ್ಲಿ ಇಬ್ಬರೂ ನಾಯಕರು ಕೊನೆಯ ಬಾರಿಗೆ ವೇದಿಕೆ ಹಂಚಿಕೊಂಡಿದ್ದರು.

Share This Article