ಭದ್ರಾ ಮೇಲ್ದಂಡೆ ಭೂ ಸ್ವಾಧೀನಕ್ಕೆ ನಮ್ಮವರೇ ಅಡ್ಡಿಯಾಗಿದ್ದಾರೆ: ಎ.ನಾರಾಯಣಸ್ವಾಮಿ

Public TV
3 Min Read

ಚಿತ್ರದುರ್ಗ: ಭದ್ರಾ ಮೇಲ್ದಂಡೆ ಭೂ ಸ್ವಾಧೀನಕ್ಕೆ ನಮ್ಮವರೇ ಅಡ್ಡಿಯಾಗಿದ್ದಾರೆ. ಹೀಗಾಗಿ ನೀರಾವರಿ ಹೋರಾಟ ಸಮಿತಿ ಹಾಗೂ ರೈತ ಸಂಘಟನೆಗಳು ಇಂತಹ ಅಡೆತಡೆಗಳನ್ನು ನಿವಾರಿಸುವ ನಿಟ್ಟಿನಲ್ಲಿ ಗಂಭೀರ ಪ್ರಯತ್ನ ನಡೆಸಬೇಕು ಎಂದು ಕೇಂದ್ರದ ಸಾಮಾಜಿಕ ನ್ಯಾಯ ಹಾಗೂ ಸಬಲೀಕರಣ ಸಚಿವ ಎ.ನಾರಾಯಣಸ್ವಾಮಿ ಹೇಳಿದರು.

ನಗರದ ರೈತ ಭವನದಲ್ಲಿ ನೀರಾವರಿ ಹೋರಾಟ ಸಮಿತಿಯಿಂದ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ತರಿಕೆರೆ ತಾಲೂಕಿನ ಅಬ್ಬಿನಹೊಳಲು ಬಳಿ 1.9 ಕಿ.ಮೀ ಉದ್ದದ ಕಾಲುವೆ ನಿರ್ಮಾಣಕ್ಕೆ ಅಲ್ಲಿನ ರೈತರು ತಡೆ ಮಾಡುತ್ತಿದ್ದಾರೆ. ಇದಕ್ಕೆ ಚಿತ್ರದುರ್ಗ ಜಿಲ್ಲೆಯವರೇ ಬೆಂಬಲ ಸೂಚಿಸಿದ್ದಾರೆ. ಪೊಲೀಸರ ಮೂಲಕ ಸರ್ಕಾರ ಭೂ ಸ್ವಾಧೀನ ಪ್ರಕ್ರಿಯೆ ಪೂರ್ಣಗೊಳಿಸಬಹುದು. ಆದರೆ ಈ ರೀತಿಯ ಪ್ರಯತ್ನಗಳು ಬೇಡ. ಸಂಘರ್ಷ ಒಳ್ಳೆಯದಲ್ಲ, ಮಾತುಕತೆ ಮೂಲಕ ಬಗೆಹರಿಸಿಕೊಳ್ಳಬೇಕು ಎಂದರು.

ರೈತರ ಮನವೊಲಿಸುವ ಪ್ರಯತ್ನ ಮಾಡಬೇಕು. ಈ ನಿಟ್ಟಿನಲ್ಲಿ ತಾವು ರೈತರೊಂದಿಗೆ ಮಾತುಕತೆ ನಡೆಸಿದ್ದು, ಕೊನೆಯ ಘಳಿಗೆಯಲ್ಲಿ ಅಡ್ಡಗಾಲು ಹಾಕಲಾಯಿತು. ಅಬ್ಬಿನಹೊಳಲು ಹತ್ತಿರದ ಕಾಲುವೆ ನಿರ್ಮಾಣ ಕಾಮಗಾರಿ ಪೂರ್ಣಗೊಂಡಿದ್ದರೆ ಇಷ್ಟೊತ್ತಿಗೆ ಎರಡು ಮೋಟಾರು ಪಂಪುಗಳ ಚಾಲನೆ ಮಾಡಿ, ವಿವಿ ಸಾಗರ ಜಲಾಶಯಕ್ಕೆ 125 ಅಡಿ ನೀರು ತುಂಬಿಸಬಹುದಿತ್ತು. ಇದು ಸಾಧ್ಯವಾಗದೇ ಹೋಗಿದೆ. ಈ ನೆಲದಲ್ಲಿ ಹುಟ್ಟಿದ ಎಲ್ಲರೂ ಈ ಬಗ್ಗೆ ಚಿಂತನೆ ನಡೆಸಬೇಕು. ಹೋರಾಟಗಳು ಮುಗಿದಿಲ್ಲ, ಇನ್ನೂ ಬಾಕಿ ಇದೆ ಎಂದು ಭಾವಿಸಬೇಕು. ನಮ್ಮವರಿಂದಲೇ ಎದುರಾಗುತ್ತಿರುವ ತೊಡರುಗಳ ಬಗ್ಗೆ ಎಚ್ಚರವಹಿಸಬೇಕೆಂದು ನಾರಾಯಣಸ್ವಾಮಿ ಹೇಳಿದರು. ಇದನ್ನೂ ಓದಿ: ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಳಿಸಿ, ನೇರ ರೈಲ್ವೆ ಕಾಮಗಾರಿ ಆರಂಭಿಸಿ- ಅಧಿಕಾರಿಗಳಿಗೆ ಎ.ನಾರಾಯಣಸ್ವಾಮಿ ಸೂಚನೆ

ಜಿಲ್ಲೆಯ ಜನರ ಹೋರಾಟದ ಫಲವಾಗಿ ಭದ್ರಾ ಮೇಲ್ದಂಡೆ ಯೋಜನೆ ಜಾರಿಯಾಗಿ ವಿವಿ ಸಾಗರಕ್ಕೆ ನೀರು ಹರಿದು ಬಂದಿದೆ. ಎಲ್ಲಿಯೂ ನಾನೇ ನೀರು ತಂದೆ ಎಂದು ಹೇಳಿಲ್ಲ. ಅದು ಮೂರ್ಖತನವಾಗುತ್ತದೆ. ಸ್ಥಗಿತಗೊಂಡಿದ್ದ ಅಜ್ಜಂಪುರ ಅಂಡರ್ ಪಾಸ್ ಕಾಮಗಾರಿ ಚುರುಕುಗೊಳಿಸಿ, ಪೂರ್ಣಗೊಳಿಸಲಾಯಿತು. ಇದಕ್ಕೆ ಹಿಂದಿನ ರೇಲ್ವೆ ಸಚಿವ ಸುರೇಶ್ ಅಂಗಡಿಯವರ ಶ್ರಮ ನೆನೆಯಬೇಕು. ಅವರು ಸಹಾಯ ಮಾಡದಿದ್ದರೆ ಅಂಡರ್ ಪಾಸ್ ಕಾಮಗಾರಿ ವಿಳಂಬವಾಗುತ್ತಿತ್ತು ಎಂದರು.

ಭೂ ಸ್ವಾಧೀನ ಪ್ರಕ್ರಿಯೆ ಚುರುಕುಗೊಳಿಸುವುದು ಸೇರಿದಂತೆ ಕಾಮಗಾರಿ ಪ್ರಗತಿ ಬಗ್ಗೆ ಚರ್ಚಿಸಲು ಗುರುವಾರ ಸಭೆ ಕರೆಯಲಾಗಿದೆ. ಚಿತ್ರದುರ್ಗ ಜಿಲ್ಲೆಯ ಜನ ತಮ್ಮ ಮೇಲೆ ವಿಶ್ವಾಸವಿಟ್ಟು ಗೆಲ್ಲಿಸಿ ಸಚಿವನನ್ನಾಗಿ ಮಾಡಿದ್ದಾರೆ. ಅವರ ಋಣ ತೀರಿಸುತ್ತೇನೆ. ರಾಷ್ಟ್ರೀಯ ಯೋಜನೆಯಾಗಲು ಕೇಂದ್ರ ಮಟ್ಟದಲ್ಲಿ ಒತ್ತಡ ಹಾಕುವುದಾಗಿ ನಾರಾಯಣಸ್ವಾಮಿ ಹೇಳಿದರು. ಇದನ್ನೂ ಓದಿ: ಚಾರ್ಜ್ ಶೀಟ್‍ನಲ್ಲಿ ಅನುಶ್ರೀ ಆರೋಪಿಯೆಂದು ಉಲ್ಲೇಖವಾಗಿಲ್ಲ: ಮಂಗಳೂರು ಪೊಲೀಸ್ ಆಯುಕ್ತರ ಸ್ಪಷ್ಟನೆ 

ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಟಿ.ನುಲೇನೂರು ಎಂ.ಶಂಕರಪ್ಪ ಮಾತನಾಡಿ, ಅಜ್ಜಂಪುರ ರೇಲ್ವೆ ಅಂಡರ್ ಪಾಸ್ ಕಾಮಗಾರಿ ಪೂರ್ಣಗೊಳಿಸಲು ನಾರಾಯಣಸ್ವಾಮಿ ಮಾಡಿದ ಹಠ ಹೋರಾಟಗಾರರಲ್ಲಿ ಸ್ಫೂರ್ತಿಗೆ ಕಾರಣವಾಗಿತ್ತು. ಜಿಲ್ಲೆಗೆ ಇನ್ನೂ ಪೂರ್ಣ ಪ್ರಮಾಣದಲ್ಲಿ ನೀರು ಬಂದಿಲ್ಲ. ಹಲವು ಕೆಲಸಗಳು ಬಾಕಿ ಉಳಿದಿವೆ. ಭೂ ಸ್ವಾಧೀನ ಪ್ರಕ್ರಿಯೆ ಪೂರ್ಣಗೊಳಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರದ ಮೇಲೆ ಒತ್ತಡ ಹಾಕಬೇಕೆಂದು ವಿನಂತಿಸಿದರು.

ನೀರಾವರಿ ಹೋರಾಟ ಸಮಿತಿ ಕಾರ್ಯಾಧ್ಯಕ್ಷ ಬಿ.ಎ.ಲಿಂಗಾರೆಡ್ಡಿ ಮಾತನಾಡಿ, ಭೂ ಸ್ವಾಧೀನಕ್ಕೆ ಸಂಬಂಧಿಸಿದಂತೆ ಅವಾರ್ಡ್ ಆದ ಮೊತ್ತವನ್ನು ರೈತರು ಪಡೆದುಕೊಳ್ಳುತ್ತಿಲ್ಲ. ನ್ಯಾಯಾಲಯದಲ್ಲಿಯೂ ಡಿಪಾಜಿಟ್ ಮಾಡುವ ಕೆಲಸಗಳು ನಡೆಯುತ್ತಿಲ್ಲ. ಈ ಸಂಬಂಧ ಹೋರಾಟ ಸಮಿತಿ ವತಿಯಿಂದ ತರಿಕೆರೆ ಉಪ ವಿಭಾಗಾಧಿಕಾರಿ ಭೇಟಿ ಮಾಡಿ ಚರ್ಚಿಸಲಾಗಿದೆ. ಇದೊಂದು ಸೂಕ್ಷ್ಮ ವಿಚಾರವಾಗಿದ್ದು, ಸಚಿವರು ಅಲ್ಲಿಯ ಜಿಲ್ಲಾಧಿಕಾರಿಗಳ ಬಳಿ ಚರ್ಚಿಸಿ ಭೂ ಸ್ವಾಧೀನಕ್ಕೆ ಎದುರಾಗಿರುವ ಕಂಟಕಗಳ ನಿವಾರಣೆ ಮಾಡಬೇಕು. ಅಬ್ಬಿನಹೊಳಲು ಗ್ರಾಮದಲ್ಲಿ ಅಡ್ಡಿಯಾಗಿರುವ ಭೂ ಸ್ವಾಧೀನ ಪೂರ್ಣಗೊಳಿಸಲು ಹೋರಾಟ ಸಮಿತಿ ರೈತರೊಂದಿಗೆ ಚರ್ಚಿಸಲು ಸಿದ್ಧವಿದೆ ಎಂದರು.

ಸಿಪಿಐ ಜಿಲ್ಲಾ ಕಾರ್ಯದರ್ಶಿ ಸುರೇಶ್ ಬಾಬು, ಹಮಾಲರ ಸಂಘದ ಅಧ್ಯಕ್ಷ ಬಸವರಾಜಪ್ಪ, ಕಾರ್ಯಧ್ಯಕ್ಷ ಹೊರಕೇರಪ್ಪ, ರಾಜ್ಯ ಮುಖಂಡ ಬೇಡರೆಡ್ಡಿಹಳ್ಳಿ ಬಸವರೆಡ್ಡಿ, ಜಿಲ್ಲಾ ಉಪಾಧ್ಯಕ್ಷ ಚಿಕ್ಕಪ್ಪನಹಳ್ಳಿ ರುದ್ರಸ್ವಾಮಿ, ಮಹಿಳಾ ಘಟಕದ ರಾಜ್ಯ ಕಾರ್ಯದರ್ಶಿ ಲಕ್ಷ್ಮಿ, ಕಲ್ಪನ, ತಾಲೂಕು ಅಧ್ಯಕ್ಷ ಧನಂಜಯ ಇದ್ದರು.

Share This Article
Leave a Comment

Leave a Reply

Your email address will not be published. Required fields are marked *