ಬೆಂಗಳೂರು: ಎರಡು ವರ್ಷದ ಹಿಂದೆ ಮನೆ ಬಿಟ್ಟಿದ್ದ ವ್ಯಕ್ತಿ ಅಸ್ಥಿಪಂಜರವಾಗಿ ಪತ್ತೆಯಾಗಿದ್ದಾರೆ. ವ್ಯಕ್ತಿ ಧರಿಸಿದ್ದ ಟೀ-ಶರ್ಟ್ ಮತ್ತು ಹಲ್ಲು ಸೆಟ್‌ನಿಂದ ಗುರುತು ಪತ್ತೆಯಾಗಿದೆ.
ಇತ್ತೀಚೆಗೆ ಕೊತ್ತನೂರು ಠಾಣೆ ವ್ಯಾಪ್ತಿಯ ದೊಡ್ಡಗುಬ್ಬಿ ಬಳಿ 10 ವರ್ಷದಿಂದ ಪಾಳು ಬಿದ್ದ ಅಪಾರ್ಟ್ಮೆಂಟ್‌ನಲ್ಲಿ ಕಾರ್ಮಿಕ ಕ್ಲೀನ್ ಮಾಡ್ತಿದ್ದಾಗ ಕಿರುಚುತ್ತಾ ಕಟ್ಟಡದಿಂದ ಹೊರಗೆ ಓಡಿಬಂದಿದ್ದ. ಎಲ್ಲರೂ ಒಳಗೆ ಹೋಗಿ ನೋಡಿದಾಗ ಮಲಗಿದ್ದ ಸ್ಥಿತಿಯಲ್ಲೇ ವ್ಯಕ್ತಿಯ ಅಸ್ತಿಪಂಜರವೊಂದು ಪತ್ತೆಯಾಗಿತ್ತು. ಅ.4 ರಂದು ನಿರ್ಮಾಣ ಹಂತದ ಸಮೃದ್ಧಿ ಅಪಾರ್ಟ್ಮೆಂಟ್‌ನಲ್ಲಿ ಕಳೇಬರ ಸಿಕ್ಕಿತ್ತು. ಮಾಹಿತಿ ಪಡೆದ ಕೊತ್ತನೂರು ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದರು. ಇದನ್ನೂ ಓದಿ: Bengaluru | ರಿಪೇರಿ ಮಾಡುತ್ತಿದ್ದಾಗ ಕ್ರೇನ್ ತುಂಡಾಗಿ ಬಿದ್ದು ಐವರಿಗೆ ಗಾಯ – ಓರ್ವ ಗಂಭೀರ
ಅಸ್ತಿಪಂಜರದ ಜೊತೆ ಸಿಕ್ಕ ವ್ಯಕ್ತಿಯ ಬಟ್ಟೆ, ಚಪ್ಪಲಿ ಮತ್ತು ತಲೆಬುರುಡೆ ಜೊತೆ ಸಿಕ್ಕ ಹಲ್ಲಿನ ಸೆಟ್ ಅನ್ನು FSLಗೆ ಕಳಿಸಿದ್ದರು. ಅಲ್ಲಿ ಸಿಕ್ಕ ಟೀ-ಶರ್ಟ್ ವಾಶ್ ಮಾಡಿ ನೋಡಿದಾಗ ಅದು ಸ್ಟೈಲ್ ಯೂನಿಯನ್ ಬ್ರಾಂಡ್‌ನದ್ದು ಅನ್ನೋದು ಗೊತ್ತಾಗಿತ್ತು. ಆತ ಪ್ಯಾರಗಾನ್ ಹವಾಯ್ ಚಪ್ಪಲಿ ಧರಿಸಿದ್ದ. ಎರಡು ವರ್ಷದ ಹಿಂದೆ ಸತ್ತಿರಬಹುದು ಎಂದು FSL ವರದಿ ಬಂದಿತ್ತು. ಎರಡು ವರ್ಷದ ಹಿಂದೆ ಆ ಟೀ-ಶರ್ಟ್ ಮತ್ತು ಹವಾಯ್ ಚಪ್ಪಲಿ ಹಾಕಿದ ವ್ಯಕ್ತಿ ಕಾಣೆಯಾದ ದೂರು ಇದೆಯಾ ಎಂದು ಚೆಕ್ ಮಾಡಿದಾಗ, ಅವಲಹಳ್ಳಿ ಠಾಣೆಯಲ್ಲಿ ಸ್ಟೈಲ್ ಯೂನಿಯನ್ ಟೀ-ಶರ್ಟ್ ಧರಿಸಿದ್ದ ವ್ಯಕ್ತಿ ಕಾಣೆಯಾಗಿದ್ದ ದೂರು ದಾಖಲಾಗಿತ್ತು. ದೂರುದಾರನನ್ನ ಕರೆಸಿ ಕೊತ್ತನೂರು ಪೊಲೀಸರು ಮಾಹಿತಿ ಪಡೆದಾಗ ಅಸ್ಥಿಪಂಜರವಾಗಿ ಸಿಕ್ಕ ವ್ಯಕ್ತಿಯ ಗುರುತು ಪತ್ತೆಯಾಗಿದೆ.
69 ವರ್ಷದ ಸೋಮಯ್ ಅಸ್ಥಿ ಪಂಜರವಾಗಿ ಸಿಕ್ಕವರು. ಸ್ವಲ್ಪ ಮಟ್ಟಿಗೆ ಮಾನಸಿಕ ಅಸ್ವಸ್ಥ ಮತ್ತು ಮೂರ್ಚೆ ಕಾಯಿಲೆಯಿಂದ ಬಳಲುತ್ತಿದ್ದರು. 2023 ರಲ್ಲಿ ಮನೆಯಿಂದ ಹೊರಗೆ ಹೋದವರು ವಾಪಸ್ ಬಂದಿರಲಿಲ್ಲ. ತಂದೆ ಕಾಣೆಯಾಗಿದ್ದಾರೆ ಅಂತ ಮಗ ಕಿರಣ್, ಅವಲಹಳ್ಳಿ ಠಾಣೆಗೆ ಮಿಸ್ಸಿಂಗ್ ಕಂಪ್ಲೆಂಟ್ ನೀಡಿದ್ದರು. ಸೋಮಯ್ಯನ ಹುಡುಕಾಟ ನಡೆಸಿದ್ದ ಪೊಲೀಸರಿಗೆ ಯಾವುದೇ ಸುಳಿವು ಸಿಕ್ಕಿರಲಿಲ್ಲ. ಕೊನೆಯದಾಗಿ ಅಂಗಡಿಯೊಂದರಿಂದ ನೀರಿನ ಬಾಟಲಿ ತೆಗೆದುಕೊಂಡು ಹೋಗುವ ಸಿಸಿ ಕ್ಯಾಮೆರಾ ದೃಶ್ಯ ಮಾತ್ರ ಸಿಕ್ಕಿತ್ತು. ಈ ಹಿಂದೆ ಕೂಡ ಹಲವು ಬಾರಿ ಹೀಗೆ ಮಾಡಿದ್ದ ಸೋಮಯ್ಯ, ಮತ್ತೆ ಬರಬಹುದು ಎಂದು ಕೇಸನ್ನ ಅಲ್ಲಿಗೆ ನಿಲ್ಲಿಸಲಾಗಿತ್ತು. ಸದ್ಯ ಕೊತ್ತನೂರು ಬಳಿ ಸಿಕ್ಕ ಅಸ್ಥಿಪಂಜರ ಸೋಮಯ್ಯನದ್ದು ಅನ್ನೋದು ದೃಢವಾಗಿದೆ. ಹಲ್ಲಿನ ಸೆಟ್, ಚಪ್ಪಲಿ, ಟೀ-ಶರ್ಟ್‌ನಿಂದ ಇವರು ನನ್ನ ತಂದೆ ಎಂದು ಪುತ್ರ ಕಿರಣ್ ಕನ್ಫರ್ಮ್ ಮಾಡಿದ್ದಾರೆ. ಸದ್ಯ ಅಸ್ಥಿಪಂಜರವನ್ನು ಕೊತ್ತನೂರು ಪೊಲೀಸರು ಮಗನ ವಶಕ್ಕೆ ನೀಡಿದ್ದಾರೆ. ಇದನ್ನೂ ಓದಿ: ಪಶ್ಚಿಮ ಬಂಗಾಳ ವೈದ್ಯಕೀಯ ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ – ಮೂವರು ಅರೆಸ್ಟ್