ಪ್ರೀತಿಸುತ್ತಿದ್ದ ಹುಡುಗಿ ಕೈಕೊಟ್ಟಿದ್ದಕ್ಕೆ ಸಿಟ್ಟು; ಆಕೆಯ ಗಂಡನಿಗೆ ಇರಿದು ಹತ್ಯೆ ಮಾಡಿದ ಪಾಗಲ್‌ ಪ್ರೇಮಿ

Public TV
1 Min Read

– ಕೆಎಸ್‌ಆರ್‌ಟಿಸಿ ಬಸ್‌ನಲ್ಲೇ ಹತ್ಯೆ

ಕಾರವಾರ: ಹತ್ತು ವರ್ಷದಿಂದ ಪ್ರೀತಿಸುತ್ತಿದ್ದ ಹುಡುಗಿ ಕೈಕೊಟ್ಟು ಸಿಟ್ಟಿಗೆ ಆಕೆಯ ಗಂಡನನ್ನೇ ಬಸ್‌ನಲ್ಲಿ ಪಾಗಲ್ ಪ್ರೇಮಿ ಚಾಕುವಿನಿಂದ ಇರಿದು ಕೊಲೆ ಮಾಡಿದ ಘಟನೆ ನಡೆದಿದೆ.

ಉತ್ತರ ಕನ್ನಡ ಜಿಲ್ಲೆಯ ಶಿರಸಿ ನಗರದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಸಮೀಪದ ಬೆಂಗಳೂರಿಗೆ ಸಂಚರಿಸುತಿದ್ದ ಕೆಎಸ್‌ಆರ್‌ಟಿಸಿ ಬಸ್‌ನಲ್ಲೇ ಕೊಲೆ ನಡೆದಿದೆ.

ಸಾಗರ ತಾಲೂಕಿನ ನೀಚಡಿಯ ಗಂಗಾಧರ್ ಹತ್ಯೆಯಾದವನಾಗಿದ್ದು, ಪ್ರೀತಮ್ ಡಿಸೋಜ ಚಾಕು ಇರಿದು ಪರಾರಿಯಾಗಿದ್ದಾನೆ. ಕಳೆದ ಹತ್ತು ವರ್ಷದಿಂದ ಶಿರಸಿಯ ಮಹಿಳೆಯನ್ನು ಪ್ರೀತಮ್ ಡಿಸೋಜ ಪ್ರೀತಿಸುತಿದ್ದ. ಆಕೆಯೂ ಈತನನ್ನು ಪ್ರೀತಿಸುತಿದ್ದಳು. ಆದರೆ, ಕೆಲಸಕ್ಕಾಗಿ ಬೆಂಗಳೂರಿಗೆ ಹೋದ ಮಹಿಳೆ ಅಲ್ಲಿ ಪರಿಚಯವಾದ ಸಾಗರದ ಗಂಗಾಧರ್‌ನನ್ನು ನಾಲ್ಕು ತಿಂಗಳ ಹಿಂದೆ ವಿವಾಹವಾಗಿದ್ದಳು.

ಪತ್ನಿಯ ಸಂಬಂಧಿಕರ ಕಾರ್ಯಕ್ರಮಕ್ಕೆ ಪತ್ನಿಯೊಂದಿಗೆ ಬಂದಿದ್ದ ಗಂಗಾಧರ್ ಇಂದು ರಾತ್ರಿ ಬೆಂಗಳೂರಿಗೆ ಬಸ್‌ನಲ್ಲಿ ತೆರಳುತ್ತಿದ್ದ. ಪ್ರೀತಮ್ ಕೂಡ ಬಸ್‌ಗೆ ಹತ್ತಿದ್ದು ಏಕಾಏಕಿ ಗಂಗಾಧರ್‌ನೊಂದಿಗೆ ಜಗಳ ತೆಗೆದು ಆತನ ಹೃದಯದ ಭಾಗಕ್ಕೆ ಚುಚ್ಚಿ ಹತ್ಯೆ ಮಾಡಿ ಪರಾರಿಯಾಗಿದ್ದಾನೆ.

ಘಟನೆ ಸಂಬಂಧ ಶಿರಸಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಗಂಗಾಧರ್ ಪತ್ನಿಯನ್ನು ಪೊಲೀಸರು ವಶಕ್ಕೆ ಪಡೆದು ತನಿಖೆ ಕೈಗೊಂಡಿದ್ದಾರೆ.

Share This Article