ಉಡುಪಿ| ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಆರೋಪಿ ಸಾವು

Public TV
2 Min Read

ಉಡುಪಿ: ಮಹಿಳೆ ಮತ್ತು ಮಕ್ಕಳಿಗೆ ಕಿರುಕುಳ ನೀಡಿದ ಆರೋಪದಲ್ಲಿ ಪೊಲೀಸ್ ವಶದಲ್ಲಿದ್ದ ವ್ಯಕ್ತಿಯೊಬ್ಬರು ಠಾಣೆಯಲ್ಲೇ ಸಾವಿಗೀಡಾಗಿರುವ ಘಟನೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ (Brahmavar Police Station) ನಡೆದಿದೆ.

ಕೇರಳದ ಬಿಜು ಮೋಹನ್ ಮಹಿಳೆ ಮತ್ತು ಮಕ್ಕಳಿಗೆ ಕಿರುಕುಳ ನೀಡಿದ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದ. ಠಾಣೆಗೆ ಕರೆಸಿ ಪ್ರಾಥಮಿಕ ತನಿಖೆ ನಡೆಸಿದ ಬ್ರಹ್ಮಾವರ ಪೊಲೀಸರು, ಲಾಕಪ್‌ನಲ್ಲಿ ಇರಿಸಿದ್ದರು. ಮುಂಜಾನೆ ಕುಸಿದು ಬಿದ್ದ ಸ್ಥಿತಿಯಲ್ಲಿದ್ದ ಆತನನ್ನು ಪೊಲೀಸರೇ ಆಸ್ಪತ್ರೆಗೆ ಸಾಗಿಸಿದ್ದಾರೆ. ಚಿಕಿತ್ಸೆ ನೀಡುವ ಮೊದಲೇ ಆತ ಕೊನೆಯುಸಿರೆಳೆದಿದ್ದ. ಲಾಕಪ್ ಡೆತ್ ಪ್ರಕರಣ ಪೊಲೀಸರಿಗೆ ತಲೆನೋವು ತಂದಿದೆ. ಇದನ್ನೂ ಓದಿ: ಚೆಕ್ ಡ್ಯಾಂನಲ್ಲಿ ಈಜಾಡಲು ಹೋಗಿದ್ದ ಬಾಲಕ ನೀರಲ್ಲಿ ಮುಳುಗಿ ಸಾವು

ಈತನ ಹೆಸರು ಬಿಜು ಥಾಮಸ್. ಕೇರಳ ರಾಜ್ಯದ ಕೊಲ್ಲಂ ಮೂಲದ ವ್ಯಕ್ತಿ. ಕೆಲ ಸಮಯದಿಂದ ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಕೊಚ್ಚಿನ್ ಶಿಪ್ ವಾರ್ಡಿನಲ್ಲಿ ಕೂಲಿ ಕೆಲಸಕ್ಕೆ ಬಂದಿದ್ದ. ವಿಪರೀತ ಕುಡಿತದ ಚಟ ಇರುವ ಬಿಜು, ಕಳೆದ ಸಂಜೆ ಚೇರ್ಕಾಡಿ ಗ್ರಾಮದಲ್ಲಿ ಮನೆಗೆ ಹೋಗಿ ಮಹಿಳೆ ಮತ್ತು ಆಕೆಯ ಮಕ್ಕಳನ್ನು ಚುಡಾಯಿಸಿದ್ದ. ಸ್ಥಳೀಯರು ಈ ಕುರಿತು ಬ್ರಹ್ಮಾವರ ಪೊಲೀಸ್ ಠಾಣೆಗೆ ಫೋನ್ ಮಾಡಿ ಮಾಹಿತಿ ನೀಡಿದ್ದರು. ತಕ್ಷಣ ಸಿಬ್ಬಂದಿ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ ವ್ಯಕ್ತಿಯನ್ನು ವಶಕ್ಕೆ ಪಡೆದಿದ್ದರು. ಶನಿವಾರ ರಾತ್ರಿ ಈ ಕುರಿತು ಬ್ರಹ್ಮಾವರ ಠಾಣೆಯಲ್ಲಿ ದೂರು ದಾಖಲಾಗಿತ್ತು.

ಪೊಲೀಸರು ಈ ಬಗ್ಗೆ ರಾತ್ರಿಯೇ ಪ್ರಾಥಮಿಕ ತನಿಖೆಯನ್ನು ಮಾಡಿ ಮಾಹಿತಿ ದಾಖಲು ಮಾಡಿಕೊಂಡಿದ್ದರು. ಕಳೆದ ರಾತ್ರಿ ಲಾಕಪ್ನಲ್ಲೇ ಇರಿಸಿದ್ದರು. ಕಳೆದ ರಾತ್ರಿ 3:45 ಸುಮಾರಿಗೆ ಕರ್ತವ್ಯದಲ್ಲಿದ್ದ ಸಿಬ್ಬಂದಿ ಆರೋಪಿ ಕುಸಿದು ಬಿದ್ದಿರೋದನ್ನು ಗಮನಿಸಿದ್ದಾರೆ. ಎಸ್‌ಐ ಗೆ ಮಾಹಿತಿ ನೀಡಿ, ತಕ್ಷಣ ಅಂಬುಲೆನ್ಸ್ ಮೂಲಕ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ರವಾನಿಸಿದ್ದಾರೆ. ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಬಿಜು ಮೋಹನ್ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಬ್ರಹ್ಮಾವರ ಪೊಲೀಸ್ ಠಾಣೆ ಮತ್ತು ಸಾರ್ವಜನಿಕ ಆರೋಗ್ಯ ಕೇಂದ್ರಕ್ಕೆ ಎಸ್ಪಿ ಡಾ. ಅರುಣ್ ಕುಮಾರ್ ಭೇಡಿ ನೀಡಿ ಮಾಹಿತಿ ಸಂಗ್ರಹ ಮಾಡಿದ್ದಾರೆ. ಪಶ್ಚಿಮ ವಲಯ ಐಜಿಪಿ ಅಮಿತ್ ಸಿಂಗ್ ಕೇಂದ್ರ ಸ್ಥಾನದಲ್ಲಿ ಇಲ್ಲದಿರುವ ಕಾರಣ ಮಂಗಳೂರು ಕಮಿಷನರ್ ಅನುಪಮ್ ಅಗರ್ವಾಲ್ ಬ್ರಹ್ಮಾವರಕ್ಕೆ ಆಗಮಿಸಿದ್ದಾರೆ. ಠಾಣೆಯ ಸಿಬ್ಬಂದಿ ಅಧಿಕಾರಿಗಳಿಂದ ಮಾಹಿತಿ ಸಂಗ್ರಹ ಮಾಡಿದ್ದಾರೆ. ಪೊಲೀಸ್ ಠಾಣೆಯಲ್ಲಿ ಮೃತಪಟ್ಟ ಪ್ರಕರಣ ಆಗಿರುವುದರಿಂದ ತನಿಖೆ ಸಿಐಡಿಗೆ ವರ್ಗಾವಣೆ ಆಗಲಿದೆ ಎಂದು ಮಂಗಳೂರು ಕಮಿಷನರ್ ಅನುಪಮ್ ಅಗರ್ವಾಲ್ ತಿಳಿಸಿದ್ದಾರೆ. ಇದನ್ನೂ ಓದಿ: ಕೌಟುಂಬಿಕ ಕಲಹ – ಪತ್ನಿಯ ಕತ್ತಿಗೆ ಟವೆಲ್ ಬಿಗಿದು ಹತ್ಯೆಗೈದ ಪಾಪಿ ಪತಿ

Share This Article