ಅಪ್ಪ-ಅಮ್ಮನ ಜಗಳಕ್ಕೆ ಮಕ್ಕಳು ಬಲಿ; ತಂದೆ ನೇಣಿಗೆ ಶರಣು, ಪ್ರಾಣಪಾಯದಿಂದ ತಾಯಿ ಪಾರು

Public TV
1 Min Read

ಬೆಂಗಳೂರು ಗ್ರಾಮಾಂತರ: ಗಂಡ-ಹೆಂಡತಿ ಜಗಳಕ್ಕೆ ಇಬ್ಬರು ಮಕ್ಕಳು ಬಲಿಯಾಗಿರುವ ಘಟನೆ ಹೊಸಕೋಟೆಯ ಗೊಣಕನಹಳ್ಳಿ ಗ್ರಾಮದಲ್ಲಿ ನಡೆದಿದೆ. ಅಲ್ಲದೇ, ಪತಿಯೂ ಆತ್ಮಹತ್ಯೆಗೆ ಶರಣಾಗಿದ್ದು, ಪತ್ನಿ ಪ್ರಾಣಪಾಯದಿಂದ ಪಾರಾಗಿದ್ದಾರೆ.

ಗಂಡ ಶಿವು, ಮಗಳು ಚಂದ್ರಕಲಾ, ಮಗ ಉದಯ ಸೂರ್ಯ ಸಾವನ್ನಪ್ಪಿದ್ದಾರೆ. ಶಿವು ಪತ್ನಿ ಮಂಜುಳಾ ಪ್ರಾಣಪಾಯದಿಂದ ಪಾರಾಗಿದ್ದಾಳೆ. ಗಂಡ-ಹೆಂಡತಿ ಇಬ್ಬರೂ ಸಹ ಸಾಲದ ಬಾಧೆಯಲ್ಲಿ ಸಿಲುಕಿಕೊಂಡಿದ್ದರು. ಗಂಡನಿಗೆ ಕೆಲ ದಿನಗಳ ಹಿಂದೆ ಅಪಘಾತವಾಗಿತ್ತು ಎನ್ನಲಾಗಿದೆ. ಇದರಿಂದ ಎಲ್ಲರೂ ಸಹ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದಾರೆ ಎಂಬುದು ಮೇಲ್ನೋಟಕ್ಕೆ ಕಂಡುಬಂದಿದೆ. ಆದರೆ, ಮಂಜುಳಾ ಮಾತ್ರ ಪ್ರಾಣಪಾಯದಿಂದ ಪಾರಾಗಿದ್ದು, ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

ಪತಿ ಶಿವು ಆಟೋ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದ. ಕೆಲ ದಿನಗಳ ಹಿಂದೆ ಶಿವುಗೆ ಅಪಘಾತವಾಗಿದ್ದು, ಕೆಲಸಕ್ಕೆ ಹೋಗುವ ಪರಿಸ್ಥಿತಿಯಲ್ಲಿ ಇರಲಿಲ್ಲ. ಜೊತೆಗೆ ಮಂಜುಳಾ ಸಹ ಕೆಲಸಕ್ಕೆ ಹೋಗುತ್ತಿರಲಿಲ್ಲ. ಇದರಿಂದ ದಿನ ಕಳೆದಂತೆ ಸಾಲಗಳು ಹೆಚ್ಚಾಗಿತ್ತು ಎನ್ನಲಾಗಿದೆ. ಅಲ್ಲದೇ, ಮನೆಯಲ್ಲಿ ಆಗಾಗ್ಗೆ ಇದೇ ವಿಚಾರವಾಗಿ ಜಗಳವಾಗುತ್ತಿತ್ತಂತೆ. ನಿನ್ನೆ ಮಧ್ಯಾಹ್ನ ಮಂಜುಳಾ ಹಾಗೂ ಶಿವು ಇಬ್ಬರ ಕುಟುಂಬದವರೆಲ್ಲಾ ಆತ್ಮಹತ್ಯೆಗೆ ನಿರ್ಧರಿಸಿ ಇಬ್ಬರು ಮದ್ಯಪಾನ ಮಾಡಿ ಮಕ್ಕಳನ್ನು ಒಬ್ಬರಾದ ಮೇಲೆ ಒಬ್ಬರಂತೆ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾರೆ. ಆನಂತರ ಶಿವುಗೆ ಮದ್ಯಪಾನ ಮಾಡಿದ್ದರಿಂದ ಆರೋಗ್ಯ ಸಮಸ್ಯೆಯಾಗಿದ್ದು, ಈ ಸಮಯದಲ್ಲಿ ಪತ್ನಿಯನ್ನು ಅಂಗಡಿಗೆ ಕಳಿಸಿದ್ದಾನೆ. ಪತ್ನಿ ಫೋನಿನಲ್ಲಿ ಮಾತನಾಡಿಕೊಂಡು ಅಂಗಡಿಯಿಂದ ಬರುವುದು ತಡ ಮಾಡಿದ್ದಾಳೆ. ಬರುವಷ್ಟರಲ್ಲಿ ಶಿವು ಸಹ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಅಲ್ಲದೇ, ಮಂಜುಳಾ ಸಹ ಆತ್ಮಹತ್ಯೆಗೆ ಯತ್ನಿಸಿದ್ದರು. ಆದರೂ ಸಹ ಈ ಮೂರು ಮಂದಿಯ ಸಾವಿನ ಹಿಂದೆ ಹಲವು ಅನುಮಾನಗಳು ಮೂಡಿವೆ. ವಿವಿಧ ಆಯಾಮಗಳಲ್ಲಿ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಮಂಜುಳಾರನ್ನು ವಶಕ್ಕೆ ಪಡೆದ ಹೊಸಕೋಟೆ ಪೊಲೀಸರು ಪ್ರಕರಣವನ್ನು ಕೈಗೆತ್ತಿಕೊಂಡಿದ್ದಾರೆ.

Share This Article