ಬಾಗಲಕೋಟೆ: ಚಾಲಕನ ಅಚಾತುರ್ಯದಿಂದ ಎರಡು ಬಸ್ಸುಗಳಿಗೆ ಲಾರಿ (Lorry) ಡಿಕ್ಕಿ ಹೊಡೆದು ಪಲ್ಟಿಯಾಗಿರುವ ಘಟನೆ ಬಾಗಲಕೋಟೆ (Bagalkote) ತಾಲೂಕಿನ ಸಿದ್ನಾಳ್ ಕ್ರಾಸ್ ಬಳಿಯ ರಾಷ್ಟ್ರೀಯ ಹೆದ್ದಾರಿ 218 ರಲ್ಲಿ ರಲ್ಲಿ ನಡೆದಿದೆ.
ಮುಧೋಳ ಮೂಲದ ಲಾರಿ ಇದಾಗಿದ್ದು, ಸುಣ್ಣದ ಕಲ್ಲು ಲೋಡ್ ತುಂಬಿಕೊಂಡು ಹುಬ್ಬಳ್ಳಿ ಕಡೆಗೆ ಹೊರಟಿತ್ತು. ಈ ವೇಳೆ ಚಾಲಕ ಅಚಾತುರ್ಯದಿಂದ ಹುಬ್ಬಳ್ಳಿ ಕಡೆಗೆ ಹೊರಟಿದ್ದ ಬಸ್ಸಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದು, ನಂತರ ವಿಜಯಪುರ ಕಡೆಗೆ ಹೊರಟಿದ್ದ ಬಸ್ಸಿನ ಮುಂಭಾಗಕ್ಕೆ ಡಿಕ್ಕಿ ಹೊಡೆದು ಪಲ್ಟಿಯಾಗಿದೆ.
ಎರಡು ಬಸ್ಸುಗಳಿಗೆ ಲಾರಿ ಗುದ್ದಿದ್ದರಿಂದ ನಿರ್ವಾಹನ ತಲೆಗೆ ಗಾಯವಾಗಿದ್ದು, ಲಾರಿ ಚಾಲಕನ ಕೈ ಕಾಲಿಗೆ ಗಂಭೀರ ಗಾಯವಾಗಿದೆ. ಇಬ್ಬರನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಲಾರಿ ಚಾಲಕ ವೇಗವಾಗಿ ವಾಹನ ಚಲಾಯಿಸಿದ್ದರಿಂದ ಈ ಘಟನೆ ಸಂಭವಿಸಿದೆ.
ಯಾವುದೇ ಪ್ರಾಣಹಾನಿ ಸಂಭವಿಸದ ಕಾರಣ ನಡೆಯಬಹುದಾಗಿದ್ದ ದೊಡ್ಡ ಅನಾಹುತ ತಪ್ಪಿದೆ. ಬಸ್ಸಿನಲ್ಲಿದ್ದ ಸುಮಾರು ಐದಾರು ಜನರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಯಾರಿಗೂ ದೊಡ್ಡ ಪ್ರಮಾಣದ ಹಾನಿಯಾಗಿಲ್ಲ. ಸ್ಥಳಕ್ಕೆ ಆಗಮಿಸಿದ ಕಲಾದಗಿ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.