ಮಂಗಳೂರು: ಚಾಲಕನಿಲ್ಲದ ಸಂದರ್ಭದಲ್ಲಿ ಚಲಿಸಿದ ಜೀಪೊಂದು 5 ವರ್ಷದ ಬಾಲಕನಿಕೆ ಡಿಕ್ಕಿ ಹೊಡೆದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಮಂಜಲ್ಪಡ್ಪು ಎಂಬಲ್ಲಿ ನಡೆದಿದೆ.
ಪುತ್ತೂರಿನ ಮಂಜಲ್ಪಡು ರಸ್ತೆಯೊಂದರಲ್ಲಿ ಜೂನ್ 3ರಂದು ಕಾರಿನ ಹಿಂಬದಿಯ ಡಿಕ್ಕಿಯಿಂದ ತಾಯಿ ಮತ್ತು ಮಗು ಏನನ್ನೋ ತೆಗೆಯುತ್ತ ನಿಂತಿದ್ದರು. ಈ ಕಾರಿನ ಹಿಂಬದಿಯಲ್ಲಿ ಜೀಪೊಂದನ್ನು ನಿಲ್ಲಿಸಲಾಗಿತ್ತು. ಏಕಾಏಕಿಯಾಗಿ ಜೀಪು ಚಲಿಸಿ ತಾಯಿ ಹಾಗೂ ಮಗುವಿನ ಮೇಲೆ ಎರಗಿದೆ. ಕೂಡಲೇ ಎಚ್ಚೆತ್ತ ತಾಯಿ ಅಲ್ಲಿಂದ ಸರಿದಿದ್ದಾಳೆ. ಆದರೆ ಆ 5 ವರ್ಷದ ಮಗು ಎರಡೂ ವಾಹನಗಳ ನಡುವೆಯೇ ಸಿಕ್ಕಿಹಾಕಿಕೊಂಡಿದೆ.
ಕೂಡಲೇ ತಾಯಿ ಅಕ್ಕಪಕ್ಕದಲ್ಲಿದ್ದ ಜನರನ್ನು ಸಹಾಯಕ್ಕಾಗಿ ಕೂಗಿ ಕರೆಸಿದ್ದಾಳೆ. ತಕ್ಷಣವೇ ಜನರು ಸೇರಿ ಜೀಪನ್ನು ಹಿಂದಕ್ಕೆ ನೂಕಿ ಮಗುವನ್ನು ಆಪತ್ತಿನಿಂದ ರಕ್ಷಿಸುತ್ತಿರುವ ದೃಶ್ಯ ಸಿಸಿ ಟಿವಿ ದೃಶ್ಯಾವಳಿಗಳಲ್ಲಿ ಸೆರೆಯಾಗಿದೆ.
ಯಾರೂ ಇಲ್ಲದಿದ್ದರೂ ಜೀಪು ತಾನಾಗಿಯೇ ಚಲಿಸಿ ತಾಯಿ-ಮಗುವಿನ ಮೇಲೆರಗಿದೆ. ಅಲ್ಲದೇ ಜೀಪನ್ನು ಚಾಲಕ ಏರು ಪ್ರದೇಶಕ್ಕೆ ಮುಖ ಮಾಡಿಯೇ ನಿಲ್ಲಿಸಿ ಹೋಗಿದ್ದ. ಆದರೂ ಜೀಪು ಮುಂಬದಿಗೆ ಚಲಿಸಿದ್ದು ಮಾತ್ರ ಅಲ್ಲಿದ್ದವರ ಆಶ್ಚರ್ಯಕ್ಕೆ ಕಾರಣವಾಗಿದೆ.