16 ವರ್ಷಗಳ ಬಳಿಕ ತುಂಬಿದ ಕೆರೆಯ ಮಧ್ಯೆ ಬೃಹತ್ ತೆಪ್ಪೋತ್ಸವ

Public TV
2 Min Read

ಚಿಕ್ಕಮಗಳೂರು: ಕಳೆದ 16 ವರ್ಷಗಳ ನಂತರ ಕೆರೆಗೆ ಕೋಡಿ ಬಿದ್ದಿದ್ದರಿಂದ ಗ್ರಾಮದ ಕಲ್ಲೇಶ್ವರ ಸ್ವಾಮಿಗೆ ಅದ್ಧೂರಿಯಾಗಿ ತೆಪ್ಪೋತ್ಸವ ಆಚರಿಸಿ ಗ್ರಾಮಸ್ಥರು ತಮ್ಮ ಭಕ್ತಿಯನ್ನು ಮೆರೆದರು.

ಜಿಲ್ಲೆಯ ಕಡೂರು ತಾಲೂಕಿನ ಸಿಂಗಟಗೆರೆ ಗ್ರಾಮದ ಕೆರೆ ಭರ್ತಿಯಾಗಿದೆ. ಈ ಹಿನ್ನೆಲೆಯಲ್ಲಿ 7 ಗ್ರಾಮದ ಗ್ರಾಮಸ್ಥರು ಸೇರಿ ಅದ್ಧೂರಿಯಾಗಿ ತೆಪ್ಪೋತ್ಸವ ನಡೆಸಿದರು. ತೆಪ್ಪದಲ್ಲಿ ಕಲ್ಲೇಶ್ವರ ಸ್ವಾಮಿ ಮತ್ತು ಆಂಜನೇಯ ಸ್ವಾಮಿ ಉತ್ಸವ ಮೂರ್ತಿಯನ್ನು ಕೂರಿಸಿ 7 ಹಳ್ಳಿ ಫಿರ್ಕಾ ಗ್ರಾಮಸ್ಥರಲ್ಲಿ ಎಲ್ಲಾ ಕೋಮಿನ ಒಬ್ಬರನ್ನು ತೆಪ್ಪದಲ್ಲಿ ಕೂರಿಸಿದ್ದು, ಜಾತ್ಯಾತೀತ ಮನೋಭಾವನೆಗೆ ಸಾಕ್ಷಿಯಾಯಿತು.

ತೆಪ್ಪೋತ್ಸವ ನಡೆಸುವ ಮುನ್ನ ತೆಪ್ಪವು ದಡದಲ್ಲಿ ಗಟ್ಟಿಯಾಗಿ ಹೂತುಕೊಂಡಿದ್ದ ಪರಿಣಾಮ ಗಂಟೆಗೂ ಹೆಚ್ಚು ಹೊತ್ತು ಭಕ್ತರು ಹರಸಾಹಸಪಟ್ಟರು. ನಂತರ ತೆಪ್ಪವನ್ನು ಚಲಿಸುವಂತೆ ಮಾಡಿದರು. ಈ ವೇಳೆ ಭಕ್ತರಿಂದ ದೇವರ ನಾಮಸ್ಮರಣೆ ಎಲ್ಲೆಡೆ ಹಬ್ಬಿತ್ತು. ಇದನ್ನೂ ಓದಿ: ಕೊರೊನಾದೊಂದಿಗೆ ಪ್ರತಿಪಕ್ಷಗಳು ಸ್ನೇಹ ಬೆಳೆಸುತ್ತಿದೆ: ಯೋಗಿ ಆದಿತ್ಯನಾಥ್

ಕಡೂರು ಶಾಶ್ವತ ಬರಗಾಲಕ್ಕೆ ತುತ್ತಾದ ತಾಲೂಕು. ಇಲ್ಲಿ ವಾರ್ಷಿಕ ವಾಡಿಕೆ ಮಳೆಯೂ ಬೀಳುವುದು ತುಂಬಾ ಕಡಿಮೆ. ಆದರೆ, ಈ ವರ್ಷ ಇತಿಹಾಸದಲ್ಲಿ ಕಂಡು-ಕೇಳರಿಯದಷ್ಟು ಮಳೆಯಾಗಿದೆ. ವರ್ಷಗಳಿಂದ ನಿಂತಿದ್ದ ಬೋರ್‌ಗಳಿಗೆ ಮರುಜೀವ ಬಂದಿದೆ. ಕೆರೆ-ಕಟ್ಟೆ ತುಂಬಿ ಜನ-ಜಾನುವಾರುಗಳಿಗೆ ಸಮೃದ್ಧ ನೀರಾಗಿದೆ.

ಈ ಹಿನ್ನೆಲೆಯಲ್ಲಿ ಸಿಂಗಟಗೆರೆ ಮತ್ತು ಫಿರ್ಕಾ 7 ಹಳ್ಳಿ ಗ್ರಾಮಸ್ಥರು ಕಳೆದೊಂದು ತಿಂಗಳಿನಿಂದ ತೆಪ್ಪೋತ್ಸವಕ್ಕೆ ಸಿದ್ಧತೆ ಮಾಡಿದ್ದರು. ಕೆರೆ ಕೋಡಿ ಬಿದ್ದ ವೇಳೆ ಈ ರೀತಿ ತೆಪ್ಪೋತ್ಸವ ನಡೆಸುವುದು ವಾಡಿಕೆ. 2005ರಲ್ಲಿ ತೆಪ್ಪೋತ್ಸವ ನಡೆದಿತ್ತು. 16 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಕೆರೆ ಕೋಡಿ ಬಿದ್ದಿದೆ. ಇದರಿಂದಾಗಿ ತೆಪ್ಪೋತ್ಸವವನ್ನು ಅದ್ಧೂರಿಯಾಗಿ ಆಚರಿಸಿದರು. ಇದನ್ನೂ ಓದಿ:  ಓಮಿಕ್ರಾನ್ ಆತಂಕ – ಇಂದಿನಿಂದ ದೆಹಲಿಯಲ್ಲಿ ನೈಟ್ ಕರ್ಫ್ಯೂ

ಇದನ್ನು ನೋಡಲು ಸಿಂಗಟಗೆರೆ ಸುತ್ತಮುತ್ತಲಿನ ನೂರಾರು ಹಳ್ಳಿಗರ ಜೊತೆ ಚಿತ್ರದುರ್ಗ, ದಾವಣಗೆರೆ, ತುಮಕೂರು, ಶಿವಮೊಗ್ಗ, ಹಾಸನ, ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಗಳಿಂದ ಅಸಂಖ್ಯಾತ ಭಕ್ತರು ಆಗಮಿಸಿದ್ದರು. ಇದನ್ನೂ ಓದಿ: ಪ್ರಧಾನಿ ಮೋದಿ ಕ್ಷಮೆ ಕೇಳುವುದು ಬೇಡ: ರಾಕೇಶ್ ಟಿಕಾಯತ್

ತೆಪ್ಪೋತ್ಸವವನ್ನು ನೋಡಲು ಬೆಳಗ್ಗೆಯಿಂದಲೂ ಸಾವಿರಾರು ಜನ ಕಾದು ಕೂತಿದ್ದರು. ಕೆರೆ ಏರಿ ಸುತ್ತಲು ಮರದಿಂದ ತಡೆಗೋಡೆ ನಿರ್ಮಿಸಲಾಗಿತ್ತು. ಯಾವುದೇ ಅಹಿತಕರ ಘಟನೆ ನಡೆಯದಂತೆ ಸಿಂಗಟಗೆರೆ, ಪಂಚನಹಳ್ಳಿ, ಯಗಟಿ, ಬೀರೂರು, ಕಡೂರು ಪೊಲೀಸರು ಬಂದೋಬಸ್ತ್ ಕಲ್ಪಿಸಿದ್ದರು.

Share This Article
Leave a Comment

Leave a Reply

Your email address will not be published. Required fields are marked *