ಚಿತ್ರದುರ್ಗ: ಖಾಸಗಿ ಶಾಲೆಗಳ ಭರಾಟೆಯಿಂದಾಗಿ ಸರ್ಕಾರಿ ಶಾಲೆಗಳು ಮುಚ್ಚುತ್ತಿವೆ ಎನ್ನುವುದು ಅನೇಕರ ಕಳವಳ. ಆದರೆ ಮೂರು ವರ್ಷದಿಂದ ಮುಚ್ಚಿದ್ದ ಜಿಲ್ಲೆಯ ಸರ್ಕಾರಿ ಶಾಲೆಗೆ ಅನ್ನೇಹಾಲ್ ಗ್ರಾಮಸ್ಥರು ಪುನರ್ ಜನ್ಮ ನೀಡಿದ್ದಾರೆ.
ಚಿತ್ರದುರ್ಗದ ತಾಲೂಕು ಅನ್ನೇಹಾಲ್ ಗ್ರಾಮಸ್ಥರು ಸಹ ಇಂಗ್ಲೀಷ್ ವ್ಯಾಮೋಹಕ್ಕೆ ಒಳಗಾಗಿದ್ದರು. ಹೀಗಾಗಿ ತಮ್ಮ ಮಕ್ಕಳನ್ನು ಸಮೀಪದ ನಗರಗಳ ಕಾನ್ವೆಂಟ್‍ಗಳಿಗೆ ಸೇರಿಸಿದ್ದರು. ಆದರೆ ಬರಗಾಲದಿಂದ ಖಾಸಗಿ ಸಂಸ್ಥೆಗಳ ದುಬಾರಿ ಶುಲ್ಕದಿಂದ ಕಂಗೆಟ್ಟ ಅವರು ತಮ್ಮ ಗ್ರಾಮದಲ್ಲಿದ್ದ ಸರ್ಕಾರಿ ಶಾಲೆಗೆ ಆಧುನಿಕ ಸ್ಪರ್ಶ ನೀಡಿ, ತಮ್ಮ ಮಕ್ಕಳನ್ನು ಅಲ್ಲಿಗೆ ಈಗ ಕಳುಹಿಸುತ್ತಿದ್ದಾರೆ.
ಅನ್ನೇಹಾಲ್ ಗ್ರಾಮಸ್ಥರ ಒತ್ತಾಯದಿಂದ 2017 ಜೂನ್ 9ರಂದು ಶಿಕ್ಷಣ ಇಲಾಖೆ ಇಬ್ಬರು ಶಿಕ್ಷಕರನ್ನು ನೇಮಿಸಿ ಶಾಲೆ ಪ್ರಾರಂಭಿಸಿತು. ಆಗ 1 ರಿಂದ 5ನೇ ತರಗತಿಗಳು ಪ್ರಾರಂಭವಾಯಿತು. ಸುಮಾರು 60 ವಿದ್ಯಾರ್ಥಿಗಳು ಶಾಲೆಗೆ ಸೇರ್ಪಡೆಯಾದರು. ಆದರೆ ಶಿಕ್ಷಕ ಸಮಸ್ಯೆ ಕಾಡುತ್ತಿರುವುದನ್ನು ಅರಿತ ಗ್ರಾಮಸ್ಥರು ತಮ್ಮ ಹಣದಲ್ಲಿಯೇ ಹೆಚ್ಚುವರಿಯಾಗಿ 6 ಜನ ಶಿಕ್ಷಕರನ್ನು ನೇಮಕ ಮಾಡಿಕೊಂಡಿದ್ದಾರೆ.
ಸುತ್ತಮುತ್ತಲಿನ ಗ್ರಾಮದ ವಿದ್ಯಾರ್ಥಿಗಳನ್ನು ಕರೆದುಕೊಂಡು ಬರಲು ಸದ್ಯ ಶಾಲೆಗೆ ವಾಹನದ ವ್ಯವಸ್ಥೆ ಕೂಡಾ ಮಾಡಲಾಗಿದೆ. ಮಕ್ಕಳ ಸಂಖ್ಯೆ 100 ಗಡಿ ದಾಟಿದೆ. ಅಲ್ಲದೇ ಕಡಿಮೆ ಖರ್ಚಿನಲ್ಲಿ ಖಾಸಗಿ ಶಾಲೆಗಿಂತಲೂ ಉತ್ತಮ ಶಿಕ್ಷಣ ನಮ್ಮ ಮಕ್ಕಳಿಗೆ ಸಿಗುತ್ತಿದೆ ಎಂದು ಗ್ರಾಮಸ್ಥರು ಪಬ್ಲಿಕ್ ಟಿವಿ ಜೊತೆಗೆ ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ.
ಮೂರು ವರ್ಷದಿಂದ ಮುಚ್ಚಿದ್ದ ಸರ್ಕಾರಿ ಶಾಲೆ ಪ್ರಾರಂಭಿಸಿ, ಅಭಿವೃದ್ಧಿಗೆ ಶ್ರಮಿಸುವ ಮೂಲಕ ಅನ್ನೇಹಾಲ್ ಗ್ರಾಮಸ್ಥರು ಇತರರಿಗೆ ಮಾದರಿಯಾಗಿದ್ದಾರೆ.
https://www.youtube.com/watch?v=qqaFFCFnAi4