ಕಿಚ್ಚನ ಪಂಚಾಯತಿಯಲ್ಲೇ ಸಂಗೀತಾಗೆ ಕ್ಲಾಸ್

Public TV
2 Min Read

ವಾರದ ಕಥೆ ಕೇಳಲು ಕಿಚ್ಚ (Sudeep) ರೆಡಿಯಾಗಿದ್ದಾರೆ. ಸಖತ್ ಕಾಸ್ಟ್ಯೂಮ್ ಹಾಕಿಕೊಂಡು ವೇದಿಕೆಗೆ ಎಂಟ್ರಿ ಕೂಡ ಕೊಟ್ಟಿದ್ದಾರೆ. ಕಿಚ್ಚನ ಪಂಚಾಯತಿಯಲ್ಲಿ ಈ ವಾರ ಏನೆಲ್ಲ ಇರಬಹುದು ಎನ್ನುವ ಅಂದಾಜು ಕೂಡ ನಡೆದಿದೆ. ಈ ವಾರವೂ ಮನೆಯಲ್ಲಿ ಜಗಳ, ತಮಾಷೆ, ಕಾಲೆಳೆತ, ಮಾತಿನ ಚಕಮಕಿ ಎಲ್ಲವೂ ನಡೆದಿದೆ. ಜೊತೆಗೆ ನಡೆಯಬಾರದು ಎರಡು ಸಂಗತಿಗಳು ನಡೆದಿವೆ. ಅದರ ಬಗ್ಗೆ ಕಿಚ್ಚ ಇಂದು ಹೆಚ್ಚಿಗೆ ಮಾತನಾಡಲಿದ್ದಾರೆ ಎನ್ನುವ ಮಾಹಿತಿಯೂ ಹೊರ ಬಿದ್ದಿದೆ.

ನಟಿ ಸಂಗೀತಾ (Sangeeta Sringeri) ಈ ವಾರ ಪೂರ್ತಿ ಸುದ್ದಿಯಲ್ಲಿದ್ದಾರೆ. ಅತ್ಯುತ್ತಮ ಕಂಟೆಸ್ಟೆಂಟ್ ಅನಿಸಿಕೊಂಡಿದ್ದ ಅವರು, ಈ ಬಾರಿ ಎಲ್ಲರ ಮನಸ್ಸನ್ನು ನೋಯಿಸಿದ್ದಾರೆ. ಬಿಗ್ ಬಾಸ್ (Bigg Boss Kannada) ಮನೆಯಲ್ಲಿದ್ದವರು ಮಾತ್ರವಲ್ಲ, ಶೋ ನೋಡುವವರು ಕೂಡ ಸಂಗೀತಾ ನಡೆಯನ್ನು ಟೀಕಿಸಿದ್ದಾರೆ. ಖಂಡಿಸಿದ್ದಾರೆ. ಸ್ವತಃ ಬಿಗ್ ಬಾಸ್ ಅವರೇ ಅದು ಸರಿಯಾದ ಕ್ರಮವಲ್ಲ ಎಂದು ನೇರವಾಗಿಯೇ ಸಂಗೀತಾಗೆ ಹೇಳಿದ್ದಾರೆ. ಹಾಗಾಗಿ ಈ ವಾರದ ಕಿಚ್ಚನ ಪಂಚಾಯತಿಯಲ್ಲಿ ಸಂಗೀತಾ ಅವರೇ ಹೆಚ್ಚು ಟಾರ್ಗೆಟ್ ಆಗಲಿದ್ದಾರೆ.

ಕಿಚ್ಚನ ಪಂಚಾಯತಿಯ ಪ್ರೋಮೋಗಾಗಿ ಬೆಳಗ್ಗೆಯಿಂದ ಅಭಿಮಾನಿಗಳು ಕಾಯುತ್ತಿದ್ದರು. ಕೊನೆಗೂ ಪ್ರೊಮೋ ರಿಲೀಸ್ ಆಗಿದೆ. ‘ಇಷ್ಟು ದಿನ ಹೀರೋ ಆಗಿದ್ದೀರಿ. ಸಡನ್ನಾಗಿ ವಿಲನ್ ಆದ್ರಿ.. ಶತ್ರುಗಳು ಸ್ನೇಹಿತರಾದ್ರು.. ಈ ಬದಲಾವಣೆ ಈ ವಾರದ ಕಿಚ್ಚನ ಪಂಚಾಯತಿಯಲ್ಲಿ’ ಎಂದು ಸುದೀಪ್ ಹೇಳಿದ್ದಾರೆ. ಹಾಗಾಗಿ ಸಂಗೀತಾಗೆ ಕ್ಲಾಸ್ ತೆಗೆದುಕೊಳ್ಳೋದು ಪಕ್ಕಾ ಎಂದು ಹೇಳಲಾಗುತ್ತಿದೆ. ಅದರಲ್ಲೂ ಕಾರ್ತಿಕ್ ಮತ್ತು ತುಕಾಲಿ ಅವರ ತಲೆ ಬೋಳಿಸಿದ್ದು ಮತ್ತು ವರ್ತೂರು ಸಂತೋಷ್ ಹಾಗು ತನಿಷಾಗೆ ಹಸಿ ಮೆಣಸಿನಕಾಯಿ ತಿನ್ನಿಸಿದ್ದರ ಬಗ್ಗೆ ಕಿಚ್ಚ ಏನು ಹೇಳಲಿದ್ದಾರೆ ಎನ್ನುವ ಕುತೂಹಲ ಎಲ್ಲರದ್ದಾಗಿದೆ.

ಈ ವಾರ ಫುಲ್ ಬದಲಾವಣೆ ಆಗಿದ್ದು ಸಂಗೀತಾ. ಮಿತ್ರರ ಪಡೆಯನ್ನು ಬಿಟ್ಟು, ಶತ್ರು ಪಾಳೆಯ ಆಶ್ರಯ ಪಡೆದವರೂ ಸಂಗೀತಾ. ಯಾರನ್ನೂ ದ್ವೇಷಿಸುತ್ತಿದ್ದರೋ, ಈಗ ಅವರನ್ನೇ ಬೆಸ್ಟ್ ಎಂದು ಕರೆಯುತ್ತಿರುವುದು ಇದೇ ಸಂಗೀತಾ. ಅಂದು ದುಷ್ಮನ್ ಆಗಿದ್ದವರು, ಇಂದು ಸ್ನೇಹಿತರಂತೆ ಅಪ್ಪಿಕೊಂಡಿದ್ದು ಮತ್ತದೆ ಸಂಗೀತಾ. ಈ ವಾರ ಕಿಚ್ಚನ ಪಂಚಾಯತಿ ಕೇವಲ ಸಂಗೀತಾಗೆ ಮಾತ್ರ ಮೀಸಲಿರತ್ತಾ? ಅಥವಾ ಗ್ರೂಪಿಸಂ ಮಾಡುವ ಮೂಲಕ ಮನೆ ಮಂದಿಯನ್ನು ಹೆದರಿಸುತ್ತಿರುವ ವಿನಯ್ ಬಗ್ಗೆಯೂ ಮಾತಾಡ್ತಾರಾ? ಕಾದು ನೋಡಬೇಕು.

Share This Article