ರಾಜ್ಯದ ‘ಮೆಂಟಲ್ ಹೆಲ್ತ್ ಇನೀಶಿಯೇಟಿವ್’ ಮೆಚ್ಚಿದ ಕೇಂದ್ರ, ದೇಶದಾದ್ಯಂತ ಜಾರಿ: ಡಾ.ಕೆ ಸುಧಾಕರ್

Public TV
3 Min Read

ಬೆಂಗಳೂರು: ಮಾನಸಿಕ ರೋಗಿಗಳ ನೆರವಿಗಾಗಿ ರಾಜ್ಯದಲ್ಲಿ ಆರಂಭಿಸಿದ ‘ಮೆಂಟಲ್ ಹೆಲ್ತ್ ಇನೀಶಿಯೇಟಿವ್’ ಅನ್ನು ಕೇಂದ್ರ ಸರ್ಕಾರ ಮೆಚ್ಚಿದ್ದು, ದೇಶಾದ್ಯಂತ ಈ ಕಾರ್ಯಕ್ರಮವನ್ನು ಜಾರಿ ಮಾಡುವುದಾಗಿ ಘೋಷಿಸಿದೆ. ಇದಕ್ಕಾಗಿ ಆರೋಗ್ಯ ಇಲಾಖೆಯ ಅಧಿಕಾರಿಗಳು ಹಾಗೂ ನಿಮ್ಹಾನ್ಸ್ ಸಂಸ್ಥೆಯನ್ನು ಅಭಿನಂದಿಸುತ್ತೇನೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ ಸುಧಾಕರ್ ಹೇಳಿದರು.

ನಿಮ್ಹಾನ್ಸ್‍ನಲ್ಲಿ ವಿಶ್ವ ಮೆದುಳು ಆರೋಗ್ಯ ದಿನ ಹಾಗೂ ಜಯನಗರ ಸಾರ್ವಜನಿಕ ಆಸ್ಪತ್ರೆಯಲ್ಲಿ ‘ಬ್ರೈನ್ ಹೆಲ್ತ್ ಕ್ಲಿನಿಕ್’ ಉದ್ಘಾಟನಾ ಸಮಾರಂಭದಲ್ಲಿ ಸಚಿವರು ಮಾತನಾಡಿದರು. ಗ್ರಾಮೀಣ ಪ್ರದೇಶದ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಎಂಬಿಬಿಎಸ್ ಮಾಡಿದ ವೈದ್ಯರಿದ್ದಾರೆ. ಮಾನಸಿಕ ರೋಗಿಗಳು ಇವರ ಬಳಿ ಬಂದಾಗ ಚಿಕಿತ್ಸೆ ನೀಡಲು ವಿಶೇಷ ತರಬೇತಿ ಬೇಕು. ಬೆಂಗಳೂರು, ಚಿಕ್ಕಬಳ್ಳಾಪುರ ಹಾಗೂ ಕೋಲಾರ ಜಿಲ್ಲೆಗಳಲ್ಲಿ ನಿಮ್ಹಾನ್ಸ್‍ನ ತಜ್ಞರು ಈಗಾಗಲೇ 100 ವೈದ್ಯರಿಗೆ ತರಬೇತಿ ನೀಡಿದೆ. ಈ ಯೋಜನೆಯನ್ನು ಪ್ರಾಯೋಗಿಕವಾಗಿ ಜಾರಿ ಮಾಡಲಾಗಿದೆ. ಮಾನಸಿಕ ರೋಗಿಗಳು ನೇರವಾಗಿ ನಿಮ್ಹಾನ್ಸ್‍ಗೆ ಬರದೇ ಸ್ಥಳೀಯ ಮಟ್ಟದಲ್ಲೇ ಸೇವೆ ಪಡೆಯಬಹುದು ಎಂದು ತಿಳಿಸಿದರು. ಇದನ್ನೂ ಓದಿ: ಬಿಜೆಪಿಯವರು ಹಿಟ್ಲರ್ ವಂಶಸ್ಥರು: ರಾಮಲಿಂಗಾರೆಡ್ಡಿ

ವೈದ್ಯರಿಗೆ ಮಾನಸಿಕ ರೋಗಿಗಳಿಗೆ ಚಿಕಿತ್ಸೆ ನೀಡುವ ತರಬೇತಿ ಕೊಡುವ ಬಗ್ಗೆ ಎರಡು ವರ್ಷಗಳ ಹಿಂದೆಯೇ ಚರ್ಚೆ ನಡೆದಿತ್ತು. ಕೋವಿಡ್ ಬಂದ ಆರಂಭದಲ್ಲಿ ರೋಗಿಯೊಬ್ಬರು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಕೊರೊನಾ ಪಾಸಿಟಿವ್ ಎಂದು ವರದಿ ಬಂದ ಕೂಡಲೇ ಅವರು ಭಯದಿಂದ ಆತ್ಮಹತ್ಯೆಗೆ ಶರಣಾಗಿದ್ದರು. ರೋಗದಿಂದ ಸಾಯುವುದಕ್ಕಿಂತ ಭಯದಿಂದಲೇ ಕೆಲವರು ಸತ್ತಿದ್ದರು. ಇಂತಹ ರೋಗಿಗಳಿಗೆ ಆಪ್ತ ಸಮಾಲೋಚನೆ ಅಗತ್ಯವಿದೆ. ಇದಕ್ಕಾಗಿ ನಿಮ್ಹಾನ್ಸ್ ಸಹಯೋಗದಲ್ಲಿ ಆಪ್ತ ಸಮಾಲೋಚನೆ ಆರಂಭಿಸಲಾಯಿತು. ಜೊತೆಗೆ ಇದರಲ್ಲೇ ಆನ್‍ಲೈನ್ ಸೇವೆಯನ್ನೂ ಆರಂಭಿಸಲಾಯಿತು. ಇದು ಯಶಸ್ವಿಯಾಗಿದ್ದು, ಒಂದೂವರೆ ವರ್ಷದಲ್ಲಿ 25 ಲಕ್ಷ ಜನರಿಗೆ ಆಪ್ತ ಸಮಾಲೋಚನೆ ಮಾಡಲಾಗಿದೆ. ದೇಶದಲ್ಲಿ ಬೇರೆಲ್ಲೂ ಇಂತಹ ಕಾರ್ಯ ಆಗಿಲ್ಲ ಎಂದರು.

ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಕಡಿಮೆ ಅಂಕ ಪಡೆಯುವವರು, ಅನುತ್ತೀರ್ಣರಾದವರು ಕೂಡ ಆತ್ಮಹತ್ಯೆ ಮಾಡಿಕೊಳ್ಳುವುದು ಕಂಡುಬಂದಿದೆ. ಈ ಬಾರಿಯ ಎಸ್‍ಎಸ್‍ಎಲ್‍ಸಿ ಫಲಿತಾಂಶಕ್ಕೆ ಮೂರು ದಿನ ಮುನ್ನ ಕೌನ್ಸಿಲಿಂಗ್ ಮಾಡುವಂತೆ ಆರೋಗ್ಯ ಇಲಾಖೆಯ ಆಯುಕ್ತರಿಗೆ ಸೂಚಿಸಲಾಯಿತು. ಎಷ್ಟೋ ವಿದ್ಯಾರ್ಥಿಗಳು ಈ ಸೇವೆ ಪಡೆದಿದ್ದಾರೆ. ಇದಕ್ಕಾಗಿ ಇಲಾಖೆಯನ್ನು ಅಭಿನಂದಿಸುತ್ತೇನೆ ಎಂದರು.

ಜನರು ಯಾವುದೇ ಮಾನಸಿಕ ಸಮಸ್ಯೆ ಇದ್ದರೂ ವೈದ್ಯರ ಬಳಿ ಹೋಗಿ ಚಿಕಿತ್ಸೆ ಪಡೆಯಬೇಕು. ಪ್ರತಿ ದಿನ ಒಂದು ಕ್ರೀಡೆ ಆಡಬೇಕು ಅಥವಾ ಒಂದು ಸಂಗೀತ ಸಾಧನವನ್ನು ಕಲಿಯಬೇಕು. ಇದರಿಂದಾಗಿ ಮೆದುಳಿನ ಆರೋಗ್ಯ ಉತ್ತಮವಾಗುತ್ತದೆ. ಜನಪ್ರಿಯ ಕ್ರಿಕೆಟಿಗ ರಾಬಿನ್ ಉತ್ತಪ್ಪ, ಕರ್ನಾಟಕದ ಮೆದುಳು ಆರೋಗ್ಯ ಉಪಕ್ರಮದ ರಾಯಭಾರಿಯಾಗಿದ್ದಾರೆ. ಅವರು ಉಚಿತವಾಗಿ ಈ ಕೆಲಸ ಮಾಡುತ್ತಿದ್ದು, ನಿಜವಾದ ಹೀರೋ ಆಗಿದ್ದಾರೆ ಎಂದು ಸಚಿವರು ಶ್ಲಾಘಿಸಿದರು. ಇದನ್ನೂ ಓದಿ: ಈಶ್ವರಪ್ಪಗೆ B-ರಿಪೋರ್ಟ್ ಹಾಕ್ತಾರೆ ಅಂತಾ ನನಗೆ ಗೊತ್ತಿತ್ತು: ಸಿದ್ದರಾಮಯ್ಯ

ಒಬ್ಬ ವ್ಯಕ್ತಿಗೆ ಕೇವಲ ದೈಹಿಕ ಆರೋಗ್ಯ ಉತ್ತಮವಾಗಿದ್ದರೆ ಮಾತ್ರ ಸಾಲುವುದಿಲ್ಲ. ಮಾನಸಿಕ ಆರೋಗ್ಯ ಕೂಡ ಮುಖ್ಯವಾಗುತ್ತದೆ. ಮೆದುಳಿನ ಆರೋಗ್ಯ ನಮ್ಮ ನಡವಳಿಕೆ, ಅಭಿಪ್ರಾಯ ವ್ಯಕ್ತಪಡಿಸುವುದು, ನಗುವುದು, ಅಳುವುದು, ಎಲ್ಲಾ ಭಾವನೆಗಳನ್ನು ವ್ಯಕ್ತಪಡಿಸಲು ಮೆದುಳು ಅಗತ್ಯ. ನೆನಪು ಎನ್ನುವುದು ಸುಂದರವಾದ ಅನುಭವ. ಆ ನೆನಪನ್ನು ಹಿಡಿದಿಟ್ಟುಕೊಳ್ಳುವುದೇ ಮೆದುಳು. ನೆನಪಿನ ಶಕ್ತಿ ಇಲ್ಲದಿದ್ದರೆ ಭವಿಷ್ಯ ಸಂಪೂರ್ಣ ಮಂಕಾಗಿಬಿಡುತ್ತದೆ. ದೇಹದ ಎಲ್ಲಾ ಅಂಗಗಳು ಉತ್ತಮವಾಗಿರಲು ಮೆದುಳು ಮುಖ್ಯ. ಇದಕ್ಕಾಗಿ ಸದಾ ಕ್ರೀಯಾಶೀಲವಾಗಿರಬೇಕು. ಆಹಾರ ಸೇವನೆ, ವ್ಯಾಯಾಮ ಮೊದಲಾದವುಗಳಲ್ಲಿ ಗುಣಮಟ್ಟ ಕಾಪಾಡಿಕೊಳ್ಳಬೇಕು. ಉತ್ತಮ ಆರೋಗ್ಯಕ್ಕೆ ಕನಿಷ್ಠ 6-8 ಗಂಟೆ ನಿದ್ದೆ ಮಾಡಬೇಕಾಗುತ್ತದೆ. ನಿದ್ರಾಹೀನತೆ ಉಂಟಾದರೆ ಆರೋಗ್ಯವೂ ಕೆಡುತ್ತದೆ. ಈ ಬಗ್ಗೆ ಜನರಲ್ಲಿ ಅರಿವು ಅಗತ್ಯ ಎಂದರು.

ಮಾನಸಿಕ ರೋಗವನ್ನು ಜನರು ತಪ್ಪಾಗಿ ಭಾವಿಸುತ್ತಿದ್ದಾರೆ. ಮಾನಸಿಕ ಆರೋಗ್ಯ ತಜ್ಞರ ಬಳಿ ಹೋದರೆ, ಆ ವ್ಯಕ್ತಿಗೆ ತಲೆ ಸರಿ ಇಲ್ಲ ಎಂದು ಜನರು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. ಇದರಿಂದಾಗಿ ಅನೇಕರು ವೈದ್ಯರ ಬಳಿ ಹೋಗುವುದೇ ಇಲ್ಲ. ಆರಂಭಿಕ ಹಂತದಲ್ಲೇ ವೈದ್ಯರ ಬಳಿ ಹೋಗಿ ಚಿಕಿತ್ಸೆ ಪಡೆದರೆ ರೋಗ ನಿವಾರಣೆ ಸಾಧ್ಯ. ಆದರೆ ಬಡತನ, ಸಮಾಜದ ಬಗ್ಗೆ ಆತಂಕ, ಅರಿವಿನ ಕೊರತೆ, ಸೌಲಭ್ಯಗಳ ಕೊರತೆ ಮೊದಲಾದ ಕಾರಣಗಳಿಂದ ಮಾನಸಿಕ ಅನಾರೋಗ್ಯಕ್ಕೊಳಗಾಗುವವರ ಸಂಖ್ಯೆ ಹೆಚ್ಚುತ್ತಿದೆ. ಫಿಟ್ಸ್, ಪಾಶ್ರ್ವವಾಯು, ಡಿಮೆನ್ಶಿಯ, ಮೆದುಳು ಟ್ಯೂಮರ್ ಸೇರಿದಂತೆ ಹಲವಾರು ನರ ಸಂಬಂಧಿ ಸಮಸ್ಯೆಗಳು ಹೆಚ್ಚುತ್ತಿವೆ. ಪಾರ್ಕಿನ್‍ಸನ್ ರೋಗಕ್ಕೂ ಅನೇಕರು ತುತ್ತಾಗುತ್ತಿದ್ದಾರೆ. ಈ ರೋಗಗಳನ್ನು ಆರಂಭದಲ್ಲೇ ಪತ್ತೆ ಮಾಡಿದರೆ ಉತ್ತಮವಾಗಿ ಚಿಕಿತ್ಸೆ ನೀಡಬಹುದು ಎಂದು ಸಲಹೆ ನೀಡಿದರು.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *