ಖ್ಯಾತ ಗಾಯಕ ಹನಿ ಸಿಂಗ್ ವಿರುದ್ಧ ಹಲ್ಲೆ, ಅಪಹರಣ ಕೇಸ್ ದಾಖಲು

Public TV
1 Min Read

ಬಾಲಿವುಡ್ ಖ್ಯಾತ ಗಾಯಕ, ಸಂಗೀತ ನಿರ್ದೇಶಕ ಯೋ ಯೋ ಹನಿ ಸಿಂಗ್ (Yo Yo Honey Singh) ವಿರುದ್ಧ ಪ್ರತಿಷ್ಠಿತ ಇವೆಂಟ್ ಮ್ಯಾನೇಜ್ ಮೆಂಟ್ ಸಂಸ್ಥೆಯ ಮಾಲೀಕರು ಹಲ್ಲೆ (Assault) ಹಾಗೂ ಅಪಹರಣ (Kidnapping) ಪ್ರಕರಣಗಳನ್ನು (Case) ದಾಖಲಿಸಿದ್ದಾರೆ. ತಮ್ಮನ್ನು ಹನಿ ಸಿಂಗ್ ಅಪಹರಿಸಿ ಹಲ್ಲೆ ಮಾಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಹನಿ ಸಿಂಗ್ ಇದೇ ತಿಂಗಳು ಒಂದನೇ ತಾರೀಖಿನಂದು ಹೊಸ ಆಲ್ಬಂನ ಸಿಂಗಲ್ ಹಾಡೊಂದು ರಿಲೀಸ್ ಮಾಡಿದ್ದರು. ಎರಡನೇ ಹಾಡು ಏಪ್ರಿಲ್ 15ರಂದು ಬಿಡುಗಡೆ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಅದಕ್ಕಾಗಿ ಪ್ರಚಾರ ಕೂಡ ಮಾಡಿದ್ದರು. ಹಣಕಾಸು ವ್ಯವಹಾರದಲ್ಲಿ ಗೊಂದಲವಾದ ಕಾರಣದಿಂದಾಗಿ ಇವೆಂಟ್ ಮ್ಯಾನೇಜ್ ಮೆಂಟ್ ಕಂಪೆನಿ ಮಾಲೀಕ ವಿವೇಕ್ ರಾಮನ್ (Vivek Raman) ಮತ್ತು ಹನಿಸಿಂಗ್ ನಡುವೆ ಗಲಾಟೆ ಆಗಿತ್ತು. ಇದೇ ವಿಚಾರವಾಗಿ ವಿವೇಕ್ ಅವರನ್ನು ಅಪಹರಣ ಮಾಡಿ, ಜೀವ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ವಿವೇಕ್ ರಾಮನ್ ಕೊಟ್ಟಿರುವ ದೂರಿನ ಅನ್ವಯ ಮುಂಬೈನ ಬಿಕೆಸಿ ಪೊಲೀಸ್ ಠಾಣೆಯ ಅಧಿಕಾರಿಗಳು ಹನಿ ಸಿಂಗ್ ಅವರನ್ನು ವಿಚಾರಣೆಗೆ ಕರೆಯುವ ಸಾಧ್ಯತೆ ಇದೆ. ದೂರು ದಾಖಲಾದ ಬೆನ್ನಲ್ಲೇ ಹನಿ ಸಿಂಗ್ ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ವಿವೇಕ್ ರಾಮನ್ ಬಗ್ಗೆ ಸಲ್ಲದ ಆರೋಪಗಳನ್ನು ಮಾಡಿದ್ದಾರಂತೆ. ಅದೆಲ್ಲವೂ ಸುಳ್ಳು ಎಂದಿದ್ದಾರೆ ವಿವೇಕ್. ಇದನ್ನೂ ಓದಿ:ಐಟಂ ಸಾಂಗ್‌ಗೆ ಸೊಂಟ ಬಳುಕಿಸಲು ದುಬಾರಿ ಸಂಭಾವನೆ ಬೇಡಿಕೆಯಿಟ್ಟ ‘ಕಬ್ಜ’ ಸುಂದರಿ

ತಮ್ಮ ಮೇಲೆ ಆರೋಪ ಮಾಡಿರುವ ಹನಿ ಸಿಂಗ್ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಲು ವಿವೇಕ್ ತಯಾರಿ ನಡೆಸುತ್ತಿದ್ದಾರೆ. ಅದಕ್ಕಾಗಿ ಅವರು ಕಾನೂನು ಸಲಹೆಯನ್ನೂ ಪಡೆಯುತ್ತಿದ್ದಾರಂತೆ. ಬಾಲಿವುಡ್ ನಲ್ಲಿ ವಿಶೇಷ ಗಾಯಕ ಎಂದೇ ಪ್ರಸಿದ್ಧಿಯಾಗಿರುವ ಯೋ ಯೋ ಹನಿ ಸಿಂಗ್, ಸಲ್ಲದ ಕಾರಣಕ್ಕಾಗಿ ಸುದ್ದಿಯಾಗಿದ್ದಾರೆ.

Share This Article