ಹಸುವಿಗೆ ಲಕ್ಷಾಂತರ ರೂ. ಖರ್ಚು ಮಾಡಿ ಸೀಮಂತ – ಹಳ್ಳಿಕಾರ್‌ ತಳಿ ಉಳಿಸಲು ಉದ್ಯಮಿಯಿಂದ ವಿಶೇಷ ಜಾಗೃತಿ!

Public TV
2 Min Read

ಹಾಸನ: ಹಿಂದೂ ಸಂಪ್ರದಾಯದಲ್ಲಿ ತುಂಬು ಗರ್ಭಿಣಿಯರಿಗೆ ಇಷ್ಟವಾದ ಅಡುಗೆ ಸಿದ್ಧಪಡಿಸಿ ಸೀಮಂತ ಶಾಸ್ತ್ರ ಮಾಡುವ ವಾಡಿಕೆ ಇದೆ. ಅದೇ ರೀತಿ ಹಾಸನದ (Hassan) ವ್ಯಕ್ತಿಯೊಬ್ಬರು ನವಮಾಸ ತುಂಬಿದ ಹಳ್ಳಿಕಾರ್ (Hallikar) ತಳಿಯ ಹಸುವಿಗೆ (Cow) ಕಲ್ಯಾಣಮಂಟಪದಲ್ಲಿ ಸೀಮಂತ ಶಾಸ್ತ್ರ ಮಾಡುವ ಮೂಲಕ ವಿಶೇಷ ಸಂಪ್ರದಾಯವೊಂದಕ್ಕೆ ನಾಂದಿ ಹಾಡಿದ್ದಾರೆ.

ಉದ್ಯಮಿ ದಿನೇಶ್ ಎಂಬವರು ಗರ್ಭಿಣಿಯರಿಗೆ ಮಾಡುವ ಶಾಸ್ತ್ರದ ರೀತಿಯಲ್ಲಿಯೇ ಹಸುವಿಗೂ ಶಾಸ್ತ್ರ ಮಾಡಿ, ನೂರಾರು ಮಂದಿಗೆ ಭರ್ಜರಿ ಭೋಜನ ಏರ್ಪಡಿಸಿ ಗಮನ ಸೆಳೆದಿದ್ದಾರೆ. ಸಾಕು ಪ್ರಾಣಿಗಳು, ಅದರಲ್ಲೂ ಜಾನುವಾರುಗಳೆಂದರೆ ದಿನೇಶ್‌ ಅವರಿಗೆ ಬಲು ಪ್ರೀತಿ. ಅದರಲ್ಲೂ ದೇಸಿಯ ಹಳ್ಳಿಕಾರ್ ತಳಿಯ ಹಸು, ಎತ್ತುಗಳನ್ನು ಸಾಕುವುದರಲ್ಲಿ ಇವರು ಎತ್ತಿದ ಕೈ. ಈ ಹಂಬಲದಿಂದಲೇ ಬೆಂಗಳೂರಿನ ಬಿಡದಿ ಬಳಿಯ ಹಳ್ಳಿಯಿಂದ ನಾಲ್ಕು ತಿಂಗಳ ಹಳ್ಳಿಕಾರ್ ತಳಿಯ ಹೆಣ್ಣು ಕರುವನ್ನು ತಂದು ಅದಕ್ಕೆ ಗೌರಿ ಎಂದು ನಾಮಕರಣ ಮಾಡಿ ಸಾಕಿ ಸಲಹಿದ್ದಾರೆ. ಇನ್ನೊಂದು ವಾರದಲ್ಲಿ ಗೌರಿ ಕರುವಿಗೆ ಜನ್ಮ ನೀಡಲಿದೆ. ಅದಕ್ಕೂ ಮುಂಚೆ ದಿನೇಶ್ ಹಾಗೂ ಕುಟುಂಬದವರು, ಹಸುವಿಗೆ ಸೀಮಂತ ಶಾಸ್ತ್ರ ಮಾಡುವ ರೀತಿಯಲ್ಲಿಯೇ ಲಕ್ಷಾಂತರ ರೂ. ಖರ್ಚು ಮಾಡಿ ಇಂದು ಅದ್ಧೂರಿ ಸೀಮಂತ ಶಾಸ್ತ್ರ ಮಾಡಿದ್ದಾರೆ.

ನಗರದ ಚನ್ನಪಟ್ಟಣದಲ್ಲಿರುವ ಗೋಮತಿ ಕಲ್ಯಾಣ ಮಂಟಪದಲ್ಲಿ ಗೌರಿ ಹಸುವಿಗೆ ಅಲಂಕಾರ ಮಾಡಿ, ಹೂವು ಮುಡಿಸಿ, ವೀಳ್ಯೆದೆಲೆ, ಹಸಿರು ಬಳೆ, ಅಕ್ಷತೆ, ಬೆಲ್ಲ, ಕೊಬ್ಬರಿ, ಹಣ್ಣುಗಳನ್ನಿಟ್ಟಿದ್ದು, ಹಸುವಿಗೆ ಆರತಿ ಬೆಳಗಿ ಹಣ್ಣು ನೀಡಿದರು. ಸೀಮಂತ ಶಾಸ್ತ್ರದಲ್ಲಿ ಐನೂರಕ್ಕೂ ಹೆಚ್ಚು ಮಂದಿ ಭಾಗಿಯಾಗಿದ್ದು ಅಪರೂಪದ ಸೀಮಂತ ಶಾಸ್ತ್ರವನ್ನು ಕಣ್ತುಂಬಿಕೊಂಡು ಗೌರಿಗೆ ಹಾರೈಸಿದರು. ಬಂದಿದ್ದ ಎಲ್ಲರಿಗೂ ಭರ್ಜರಿ ಔತಣಕೂಟ ಏರ್ಪಡಿಸಿದ್ದು, ಸೀಮಂತ ಶಾಸ್ತ್ರದಲ್ಲಿ ಭಾಗಿಯಾಗಿದ್ದವರು ಭರ್ಜರಿ ಊಟ ಸವಿದು ತೆರಳಿದದ್ದಾರೆ.

ಈ ಬಗ್ಗೆ ಮಾತಾಡಿದ ದಿನೇಶ್‌, ಹಳ್ಳಿಕಾರ್ ತಳಿ ನಮ್ಮ ದೇಸಿಯ ತಳಿಯಾಗಿದ್ದು, ಇದನ್ನು ಉಳಿಸುವುದು ನಮ್ಮ ಕರ್ತವ್ಯವಾಗಿದೆ. ಈ ನಿಟ್ಟಿನಲ್ಲಿ ಸೀಮಂತ ಶಾಸ್ತ್ರ ಮಾಡುವ ಮೂಲಕ ರೈತರು ಹಾಗೂ ಜಾನುವಾರು ಪ್ರಿಯರಲ್ಲಿ ಅರಿವು ಮೂಡಿಸುತ್ತಿದ್ದೇವೆ ಎಂದಿದ್ದಾರೆ.

ಒಟ್ಟಿನಲ್ಲಿ ಹಳ್ಳಿಕಾರ್ ತಳಿ ಉಳಿಸಿ, ಬೆಳೆಸಬೇಕು ಎಂಬ ಕೂಗಿನ ನಡುವೆ ದಿನೇಶ್ ಅವರು ಒಡಲು ತುಂಬಿಕೊಂಡ ಹಸುವಿಗೆ ಸೀಮಂತ ಶಾಸ್ತ್ರ ಮಾಡಿದ್ದು ಒಂದು ಮಾದರಿಯಾಗಿದೆ.

Share This Article